Advertisement

ಪೌತಿ ಖಾತೆ ಆಂದೋಲನ ಆರಂಭ

03:47 PM Dec 21, 2019 | Suhan S |

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ, ಕೈಲಾಂಚ, ಹುಲಿಕೆರೆ-ಗುನ್ನೂರು, ಬನ್ನಿಕುಪ್ಪೆ, ವಿಭೂತಿಕೆರೆ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಪೌತಿ ಖಾತೆ ಆಂದೋಲನ ಆರಂಭವಾಗಿದೆ.

Advertisement

ಸರ್ಕಾರದ ನಿರ್ದೇಶನದ ಮೇರೆಗೆ ರಾಮನಗರ ಜಿಲ್ಲಾಡಳಿತ ಪೌತಿ ಖಾತಾ ಆಂದೋಲನ ಜಾರಿ ಮಾಡಿದೆ. ಉಪ ತಹಶೀಲ್ದಾರ್‌ ವಿಲಿಯಂ ನೇತೃತ್ವದಲ್ಲಿ ಆಂದೋಲನ ನಡೆದಿದ್ದು, ಈ ಭಾಗದ ರೈತರಿಂದ ಕಂದಾಯ ಇಲಾಖೆ ಅಧಿಕಾರಿಗಳು ಅರ್ಜಿ ಸ್ವೀಕರಿಸಲಾರಂಭಿಸಿದ್ದಾರೆ. ಕೈಲಾಂಚ ಗ್ರಾಪಂ ಕಚೇರಿ ಆವರಣದಲ್ಲಿ ಉಪ ತಹಶೀಲ್ದಾರ್‌ ವಿಲಿಯಂ, ರಾಜಸ್ವ ನಿರೀಕ್ಷಕರಾದ ಟಿ.ಎನ್‌. ಬಸವರಾಜು, ಸ್ವಾಮಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಗಳ ನೇತೃತ್ವದಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿದರು.

ಉಪಯುಕ್ತ ಆಂದೋಲನ: ಆಂದೋಲನದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ತಹಸೀಲ್ದಾರ್‌ ವಿಲಿಯಂ, ಪೌತಿ ಖಾತೆ ಆಂದೋಲನದಿಂದ ಜಿಲ್ಲೆಯ ನೂರಾರು ರೈತ ಕುಟುಂಬಗಳಿಗೆ ಸಹಕಾರಿಯಾಗಲಿದೆ. ತಮ್ಮ ಮೃತ ಪಟ್ಟ ಹಿರಿಯರ ಹೆಸರಿನಲ್ಲಿರುವ ಜಮೀನನ್ನು ವಾರಸುದಾರರು ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ವರ್ಷಗಳು ಉರುಳಿದರು ಖಾತೆ ಬದಲಾವಣೆಯಾಗಿರಲಿಲ್ಲ. ಹೀಗಾಗಿ ರೈತರಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ ಯೋಜನೆ, ಬೆಳೆ ಪರಿಹಾರ ಮುಂತಾದ ಅನೇಕ ಯೋಜನೆಗಳು, ಪರಿಹಾರ ಕಾರ್ಯದಿಂದ ವಂಚಿತರಾಗಿದ್ದರು.

ಇದೀಗ ಸರ್ಕಾರದ ಆದೇಶದ ಮೇರೆಗೆ ಆಂದೋಲನ ಹಮ್ಮಿಕೊಂಡಿದ್ದು, ಪೌತಿ ಖಾತೆ ಆಗಬೇಕಾಗಿರುವ ರೈತ ಕುಟುಂಬಗಳು ಈ ಅವಕಾಶವನ್ನು ಪಡೆಯಬೇಕು ಎಂದು ಕರೆ ನೀಡಿದ್ದಾರೆ. ಪೌತಿ ಖಾತೆ ಆಂದೋಲನ 2020ರ ಮಾರ್ಚ್‌ 31ರವರೆಗೆ ನಡೆಯಲಿದೆ. ಆದರೆ ರೈತರು ಕೊನೆ ದಿನಾಂಕದವರೆಗೆ ಕಾಯದೆ. ಪೌತಿ ಖಾತೆ ಮಾಡಿಸಿಕೊಳ್ಳಿ ಎಂದರು.

ರಾಜಸ್ವ ನಿರೀಕ್ಷಕರಾದ ಟಿ.ಎನ್‌. ಬಸವ ರಾಜು, ಸ್ವಾಮಿ, ಗ್ರಾಮ ಲೆಕ್ಕಿಗರಾದ ರಾಜ ಶೇಖರ್‌, ಶಿವಣ್ಣ, ಕೃಷ್ಣಪ್ಪ, ಕಾವ್ಯ, ಸುಕನ್ಯ, ಕೃಷಿ ಇಲಾಖೆ ಅಧಿಕಾರಿಗಳಾದ ಪ್ರದೀಪ್‌, ಪರಶುರಾಮ್‌, ಪಿಡಿಓ ಸತೀಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next