ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಶ್ರವಣ ಶಕ್ತಿ ಪರೀಕ್ಷೆ ಕೇಂದ್ರ (ಧ್ವನಿ) ಮಂಗಳವಾರ ಉದ್ಘಾಟನೆಗೊಂಡಿತು. ಯೋಜನೆಯ ಪ್ರಧಾನ ದಾನಿ ಅನುರಾಧಾ ಗೋಪಾಲ ಪೈ ಚಾಲನೆ ನೀಡಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಪೈ ಕುಟುಂಬದ ಸಾಮಾಜಿಕ ಉಪಕ್ರಮ ದತ್ತಿ ಯೋಜನೆ (ಸುಹಾಸ್ ಗೋಪಾಲ ಪೈ ಸ್ಮರಣಾರ್ಥ) ವತಿಯಿಂದ ಈ ಕೇಂದ್ರ ಸ್ಥಾಪನೆಗೊಂಡಿದೆ. ಬಳಿಕ ಟಿಎಂಎ ಪೈ ಕನ್ವೆನನ್ ಸೆಂಟರ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅನುರಾಧಾ ಗೋಪಾಲ ಪೈ ಮಾತನಾಡಿ, ನವಜಾತ ಶಿಶುಗಳ ಶ್ರವಣ ಸಮಸ್ಯೆ ನಿವಾರಣೆಗೆ ಬಡ ಕುಟುಂಬಗಳಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂಥವರಿಗೆ ನೆರ ವಾಗುವ ಆಶಯದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ. ಶ್ರವಣ ದೋಷ ಇರುವ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶ್ರವಣ ಸಾಧನ ಖರೀದಿ ಖರ್ಚನ್ನೂ ದತ್ತಿ ಯೋಜನೆಯಡಿ ಪೂರೈಸಲಾಗುವುದು ಎಂದರು.
ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಮಾತನಾಡಿ, ಶ್ರವಣ ದೋಷ ಬಾಧಿತರಿಗೆ ಅಳವಡಿಸುವ ಸುಮಾರು 6.5 ಲಕ್ಷ ರೂ. ವೆಚ್ಚದ ಸೂಕ್ಷ್ಮ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿರುವ ಕೋಕ್ಲಿಯರ್ ಇಂಪ್ಲಾಂಟ್ ಸಾಧನಗಳನ್ನು ಈ ಹೊಸ ಕೇಂದ್ರಕ್ಕೆ ಮಾಹೆಯಿಂದ ನೀಡಲಾಗು ವುದು ಎಂದು ಹೇಳಿದರು.
ದಾನಿ ಅನುರಾಧಾ ಗೋಪಾಲ್ ಪೈ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಮಾಹೆ ಸಹ ಕುಲಪತಿ ಡಾ| ವಿ. ಸುರೇಂದ್ರ ಶೆಟ್ಟಿ, ಕೆಎಂಸಿ ಡೀನ್‌ಡಾ| ಎಂ. ವೆಂಕಟ್ರಾಯ ಪ್ರಭು, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ಬಿ.ಎಸ್., ಅತ್ತಾವರ ಕೆಎಂಸಿ ಆಸ್ಪತ್ರೆಯ ವೈದ್ಯ
ಕೀಯ ಉಪ ಅಧೀಕ್ಷಕ ಡಾ| ದೀಪಕ್ ಮಡಿ ಮುಖ್ಯ ಅತಿಥಿಗಳಾಗಿದ್ದರು.
ಡಾ| ನೂತನ ಕಾಮತ್ ಸ್ವಾಗತಿಸಿದರು. ಡಾ| ಸುಜಾ ಶ್ರೀಧರನ್ ವಂದಿಸಿದರು. ನೂತನ “ಧ್ವನಿ’ ಕೇಂದ್ರವನ್ನು ಕೆಎಂಸಿಯ ವಾಕ್ ಮತ್ತು ಶ್ರವಣ, ಕಿವಿ ಮೂಗು ಮತ್ತು ಗಂಟಲು ಹಾಗೂ ಮಕ್ಕಳ ಚಿಕಿತ್ಸಾ ವಿಭಾಗ ನಿರ್ವಹಿಸಲಿದೆ.