ಕಲಬುರಗಿ: ಈಗಾಗಲೇ ಬೆಂಗಳೂರು ಅಲ್ಲದೇ ದೆಹಲಿ, ತಿರುಪತಿ ಸೇರಿದಂತೆ ವಿವಿಧ ಮಹಾನಗರಗಳಿಗೆ ಇಲ್ಲಿನ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಶುರುವಾಗಿದ್ದು, ಇದಕ್ಕೆ ಈಗ ಹೈದ್ರಾಬಾದ್ ಸೇರ್ಪಡೆಯಾಗಿದೆ. ಕಲಬುರಗಿ ಜಿಲ್ಲೆಯ ಜನ ಅನೇಕ ವಸ್ತುಗಳ ಖರೀದಿಗೆ ಹೈದ್ರಾಬಾದ್‌ನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಸೋಮವಾರ ಶುರುವಾಗಿರುವ ಕಲಬುರಗಿ -ಹೈದ್ರಾಬಾದ್ ನಡುವಿನ ವಿಮಾನ ಸಂಚಾರ ಹೆಚ್ಚಿನ ಅನುಕೂಲವಾಗಲಿದೆ. ಸಂಸದ ಡಾ| ಉಮೇಶ ಜಾಧವ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಲಬುರಗಿ ಹಾಗೂ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳ ಅನುಕೂಲಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣದಿಂದ ಹಲವು ಲೋಹದ ಹಕ್ಕಿಗಳು ಬೇರೆ ಬೇರೆ ರಾಜ್ಯಗಳಿಗೆ ಹಾರಾಡುವಂತೆ ಸರ್ಕಾರ ಮಾಡುತ್ತಿದೆ ಎಂದರು.
ಕಲಬುರಗಿ-ಗೋವಾ ನಡುವಿನ ಏರಲೈನ್ಸ್ ಏರ್ ವಿಮಾನ ಹಾರಾಟವನ್ನು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದ ಸಂಸದರು, ಕಲಬುರಗಿ ಜಿಲ್ಲೆಯ ವೃದ್ಧರು, ರೋಗಿಗಳು ತುರ್ತು ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ಹಾಗೂ ಹೈದ್ರಾಬಾದ್ ನಿಂದ ಬೆಂಗಳೂರಿಗೆ ತೆರಳಲು ಈ ವಿಮಾನ ಅನುಕೂಲಕರವಾಗಲಿದೆ. ಹೈದ್ರಾಬಾದ್‌ನಿಂದ ಪವಿತ್ರ ಸ್ಥಳಗಳಾದ ಹಜ್, ಕಾಶಿ, ಆಯೋಧ್ಯಾ, ಅಮರನಾಥ, ವೈಷ್ಣೋದೇವಿ ಹಾಗೂ ವಿವಿಧ ಪುಣ್ಯ ಕ್ಷೇತ್ರಗಳಿಗೆ ತೆರಳಲು ಅನುಕೂಲಕರವಾಗಿದೆ. ಕಲಬುರಗಿ ಹಾಗೂ ವಿಭಾಗದ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಯಾಣಿಕರು ಸರ್ಕಾರದ ಕೊರೊನಾ ನಿಯಮ ಪಾಲಿಸಬೇಕು. ವೃದ್ಧರಿಗೆ ಹಾಗೂ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕಾಗಿ ಸಿಬ್ಬಂದಿಗೆ ಸೂಚಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದ ಡಾ| ಉಮೇಶ ಜಾಧವ ತಮ್ಮ ಮಗಳು ಶ್ರದ್ದಾ ಜಾಧವ ಹಾಗೂ ಪ್ರಯಾಣಿಕರ ಜತೆ ಹೈದ್ರಾಬಾದ್‌ಗೆ ವಿಮಾನದಲ್ಲಿ ಪ್ರಯಾಣ ಮಾಡಿದರು. ಪ್ರಾದೇಶಿಕ ಆಯುಕ್ತ ಡಾ| ಎನ್.ವಿ. ಪ್ರಸಾದ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಂದ್ರರಾವ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಇದ್ದರು.