Advertisement

ಇತಿಹಾಸದ ಆಧಾರದಲ್ಲಿ ಕಾಮಗಾರಿಗೆ ಚಾಲನೆ!

12:33 AM Oct 29, 2019 | Lakshmi GovindaRaju |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಅನಗತ್ಯ ಕಾಮಗಾರಿಗಳಿಗೆ ಕಡಿವಾಣ ಹಾಕಲು, ದುಂದು ವೆಚ್ಚ ತಪ್ಪಿಸಲು ಹಾಗೂ ಪಾರದರ್ಶಕತೆ ತರುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ರಸ್ತೆಗಳ ಇತಿಹಾಸವನ್ನು ಒಳಗೊಂಡಿರುವ ರಸ್ತೆ ಇತಿಹಾಸದ ವೆಬ್‌ಸೈಟ್‌ ಆರಂಭಿಸುವಂತೆ ಸರ್ಕಾರದ ಉಪ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ)ಕೆ.ಎ.ಹಿದಾಯತ್ತುಲ್ಲ ಬಿಬಿಎಂಪಿಗೆ ಆದೇಶಿಸಿದ್ದಾರೆ.

Advertisement

ಕಾಮಗಾರಿಗಳನ್ನು ಆದ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳುವುದಕ್ಕೆ ಇದು ಸಹಾಯವಾಗಲಿದ್ದು, ಇತಿಹಾಸವನ್ನು ಕಾಮಗಾರಿಯೊಂದಿಗೆ ಲಿಂಕ್‌ (ಜೋಡಣೆ) ಮಾಡುವುದು ಕಡ್ಡಾಯ ಮಾಡುವಂತೆ ಆದೇಶ ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ.

ವೆಬ್‌ಸೈಟ್‌(ರಸ್ತೆ ಇತಿಹಾಸ)ನಲ್ಲಿ ಈಗ ರಸ್ತೆ ಮೂಲಭೂತ ಸೌಕರ್ಯ ಮತ್ತು ವಲಯವಾರು ರಸ್ತೆಗಳಲ್ಲಿ 82,397 ರಸ್ತೆ ಕೋಡ್‌ಗಳಿದ್ದು, ಈ ರಸ್ತೆಗಳಲ್ಲಿನ ಸರ್ಕಾರ ಮತ್ತು ಖಾಸಗಿ ಸ್ವತ್ತುಗಳ ವಿವರವನ್ನೂ ಹಂತ ಹಂತವಾಗಿ ವೈಬ್‌ಸೈಟ್‌ನ ರಸ್ತೆ ಇತಿಹಾಸಕ್ಕೆ ಸೇರಿಸುವಂತೆ ಹಾಗೂ ವೈಬ್‌ಸೈಟ್‌ನಲ್ಲಿರುವ ರಸ್ತೆಗಳಲ್ಲಿ ಪರವಾನಗಿ ನೀಡಿದಲ್ಲಿ ಪರವಾನಗಿ ನೀಡಿದ ಸಂಸ್ಥೆಗಳಿಂದ ಬರುವ ಆದಾಯ ಹಾಗೂ ವೆಚ್ಚವನ್ನೂ ವೆಬ್‌ಸೈಟ್‌ನಲ್ಲಿ ನಮೂದಿಸುವಂತೆಯೂ ಹೇಳಲಾಗಿದೆ.

ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಒಎಫ್ಸಿಗೆ ಸಂಬಂಧಿಸಿದ ಮಾಹಿತಿಗಳನ್ನು ದಾಖಲಿಸಲಾಗುತ್ತಿದೆ. ಇದರೊಂದಿಗೆ ಬೀದಿ ದೀಪಗಳ ಮಾಹಿತಿ, ಚರಂಡಿ, ಪಾದಚಾರಿ ಮಾರ್ಗ, ಮೇಲ್ಸೇತುವೆ, ಕೆಳಸೇತುವೆ, ಗ್ರೇಡ್‌ ಸಪರೇಟರ್‌ ಹಾಗೂ ಬೆಸ್ಕಂ, ಜಲ ಮಂಡಳಿ, ಕೆಪಿಟಿಸಿಎಲ್‌, ಗೈಲ್‌, ಬಿಎಂಆರ್‌ಸಿಎಲ್‌, ಬಿಎಸ್‌ಎನ್‌ಎಲ್‌ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿಯನ್ನೂ ನಮೂದಿಸುವಂತೆ ಸೂಚನೆ ನೀಡಲಾಗಿದೆ.

ರಸ್ತೆ ಇತಿಹಾಸ ಸೇರಿಸುವ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿಗೆ ಜಾಬ್‌ ಕೋಡ್‌ ನೀಡುವ ಮುನ್ನ ರಸ್ತೆ ಇತಿಹಾಸ ತಂತ್ರಾಂಶದ ಮೂಲಕ ಮುಖ್ಯ ಎಂಜಿನಿಯರ್‌ಗೆ ಸಲ್ಲಿಸಿ, ಅನುಮೋದನೆ ಕೋಡ್‌ ಪಡೆಯುವುದು ಹಾಗೂ ಈ ಕೋಡ್‌ ಅನ್ನು ಪ್ರತಿ ರಸ್ತೆಯ ಕೋಡ್‌ ಎರಡನ್ನೂ ಜಾಬ್‌ ಕೋಡ್‌ ಪ್ರಮಾಣ ಪತ್ರದಲ್ಲಿ ನಮೂದಿಸಿದ ನಂತರವೇ ಕಾಮಗಾರಿಗೆ ಜಾಬ್‌ ಕೋಡ್‌ ನೀಡಬೇಕು ಈ ವಿವರವನ್ನೂ ವೆಬ್‌ಸೈಟ್‌ಗೆ ಲಿಂಕ್‌ ಮಾಡಬೇಕು.

Advertisement

ಈ ಪ್ರಕ್ರಿಯೆಯಲ್ಲಿ ಕಾಮಗಾರಿ ಪುನರಾವರ್ತನೆ ತಡೆಯುವ ಕೆಲಸವನ್ನು ಮುಖ್ಯ ಎಂಜಿನಿಯರ್‌ ಮಾಡಬೇಕು ಎಂದು ವಿವರಿಸಲಾಗಿದೆ. “ಬಿಬಿಎಂಪಿ ವ್ಯಾಪ್ತಿಯ ವಿವಿಧ ರಸ್ತೆಗಳ ಮಾಹಿತಿ ಮತ್ತು ದಾಖಲೆ ಬಿಬಿಎಂಪಿಯ ಬಳಿ ಲಭ್ಯವಿದ್ದು, ಈ ಮಾಹಿತಿಯನ್ನು ಬಿಬಿಎಂಪಿಯ ಹಾಲಿ ವೆಬ್‌ಸೈಟ್‌ನ ಮೂಲಕ ಅಥವಾ ಪ್ರತ್ಯೇಕ ವೆಬ್‌ಸೈಟ್‌ ರಚನೆ ಮಾಡುವುದು ಸೂಕ್ತವೇ ಎನ್ನುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಬಿಬಿಎಂಪಿಯ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘನತ್ಯಾಜ್ಯ ನಿರ್ವಹಣೆ ಸಹ ದಾಖಲಿಸಬೇಕು: ನಗರದಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ತ್ಯಾಜ್ಯ, ವಾರ್ಡ್‌ವಾರು ತ್ಯಾಜ್ಯ ಘಟಕಗಳ ಮಾಹಿತಿ, ಕ್ವಾರಿಗಳಿಗೆ ಸುರಿಯುವ ತ್ಯಾಜ್ಯದ ಪ್ರಮಾಣ ಹಾಗೂ ತ್ಯಾಜ್ಯ ಸರಬರಾಜಿನ ಸಂಪೂರ್ಣ ಮಾಹಿತಿಯನ್ನೂ (ವೆಬ್‌ಸೈಟ್‌ನ ರಸ್ತೆ ಇತಿಹಾಸ ವಿಭಾಗಕ್ಕೆ) ಸೇರಿಸಬೇಕು ಎಂದು ಸೂಚಸಲಾಗಿದೆ.

ಬಿಲ್‌ ಪಾವತಿಗೂ ಬೀಳಲಿದೆ ಕೊಕ್ಕೆ!: ರಸ್ತೆ ಇತಿಹಾಸದ ಜಾಲತಾಣದಲ್ಲಿ 2020ರ ಜನವರಿ 15ರ ನಂತರ, ಮಾಹಿತಿ ಇಲ್ಲದ ಯಾವುದೇ ಕಾಮಗಾರಿಗೆ ಜಾಬ್‌ ಕೋಡ್‌ ನೀಡಬಾರದು. ಕಾಮಗಾರಿಯ ಗುತ್ತಿಗೆ ಅವಧಿಯ ಪ್ರತಿ ಬಾರಿ ಬಿಲ್‌ ಪಾವತಿ ಮಾಡಿದಾಗಲೂ ಬಿಲ್‌ ವಿವರವನ್ನು ಇತಿಹಾಸ ತಂತ್ರಾಂಶ ದಾಖಲಿಸಲು ಹಾಗೂ ಇತಿಹಾಸದ ಮಾಹಿತಿ (ಕೋಡ್‌)ಹೊಂದಿರದ ಬಿಲ್‌ಗ‌ಳನ್ನು ಪಾವತಿ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಕಾಮಗಾರಿ ಪ್ರಾರಂಭಿಸಲು ಜಾಬ್‌ ಕೋಡ್‌ ನೀಡಲಾಗುತ್ತಿದ್ದು, ಇನ್ನು ಮುಂದೆ ರಸ್ತೆ ಇತಿಹಾಸ ನಮೂದಿಸದೆ ಜಾಬ್‌ ಕೋಡ್‌ ನೀಡಬಾರದೆಂದು ಆದೇಶದಲ್ಲಿ ಉಲ್ಲೇಖೀಸಲಾಗಿದ್ದು, ಎಲ್ಲ ಮಾಹಿತಿಗಳು ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತಿರಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next