ಮೈಸೂರು: ರಂಗಾಯಣದ 20ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ “ಮನೆ ಮನೆಗೆ ಗಾಂಧಿ ಪಥ’ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಬಾರಿ ಬಹುರೂಪಿ ನಾಟಕೋತ್ಸವವನ್ನು “ಗಾಂಧಿ ಪಥ’ ಎಂಬ ವಿಷಯಾಧಾರಿತವಾಗಿ ಸಂಘಟಿಸಿರುವ ರಂಗಾಯಣ, ಮೈಸೂರಿನಲ್ಲಿ ಗಾಂಧೀಜಿ ಮೈಸೂರಿನಲ್ಲಿ ಭೇಟಿ ನೀಡಿದ ಏರಿಯಾಗಳಲ್ಲಿ ಗಾಂಧಿಯನ್ನು ಪುನಃ ಸ್ಮರಿಸಲು ಮನೆ ಮನೆಗೆ ಗಾಂಧಿ ಪಥ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಗದಗದ ವೀರಪ್ಪ ಮತ್ತು ಚನ್ನಪ್ಪ ಸಂಗಡಿಗರು ಮನೆ ಮನೆಗೆ ಭೇಟಿ ನೀಡಿ ಗಾಂಧೀಜಿಯ ಜೀವನ ವೃತ್ತಾಂತವನ್ನು ಲಾವಣಿಯ ಮೂಲಕ ಕಟ್ಟಿಕೊಡಲಿದ್ದಾರೆ.
ಮಂಗಳವಾರ ಜಯಲಕ್ಷ್ಮೀಪುರಂನಲ್ಲಿರುವ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ನಿವಾಸದಲ್ಲಿ ಗಾಂಧಿ ಕುರಿತು ಲವಾಣಿ ಹಾಡುವ ಮೂಲಕ ಮನೆ ಮನೆಗೆ ಗಾಂಧಿ ಪಥ ಕಾರ್ಯಕ್ರಮ ಆರಂಭಗೊಂಡಿತು. ಗಾಂಧೀಜಿ ಭೇಟಿ ನೀಡಿದ ಗಾಂಧಿನಗರದ ಮನೆ ಮಂಚಮ್ಮ ದೇಗುಲದಲ್ಲಿ ಲಾವಣಿ ಮತ್ತು ಗೀಗೀ ಪದ ಹಾಡಲಾಯಿತು.
ಸಂಜೆ ಕವಯಿತ್ರಿ ಲತಾ ಮಹೋನ್ ಮನೆಯಲ್ಲಿ ಮನೆ ಮನೆಗೆ ಗಾಂಧಿ ಪಥ ಆಯೋಜಿಸಲಾಯಿತು. ಗಾಂಧೀಜಿ ಮೈಸೂರಿಗೆ ಆಗಮಿಸಿದ ಸಂದರ್ಭ ಭೇಟಿ ನೀಡಿದ ಗಾಂಧಿನಗರ ಮತ್ತು ಅಶೋಕ ಪುರಂನ ಹಲವು ಮನೆಗಳಲ್ಲಿ ಗಾಂಧಿ ಪಥ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಆಯ್ದ ಮನೆಗಳಲ್ಲಿಯೂ ಕಾರ್ಯಕ್ರಮ ನಡೆಯಲಿದೆ.
ಅಪರ ಜಿಲ್ಲಾಧಿಕಾರಿ ಪುರ್ಣಿಮಾ, ಕಲಾವಿದರಿಗೆ ಫಲ-ತಂಬುಲ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಬಹುರೂಪಿ ನಾಟಕೋತ್ಸವದ ಪ್ರಧಾನ ಸಂಚಾಲಕ ಹುಲಗಪ್ಪ ಕಟ್ಟಿಮನಿ, ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮs…, ಗೀತಾ ಮೊಂಡಟ್ಕ, ಸಂಚಾಲನ ತಂಡದ ದೀಪಕ್ ಮೈಸೂರು ಸೇರಿದಂತೆ ಮತ್ತಿತರರು ಇದ್ದರು.