Advertisement
ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರಿನ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವದ ಭವ್ಯ ಮೆರವಣಿಗೆ ಶನಿವಾರ ಸಂಜೆ ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿದ ಮೇಲೆ ಜಯಘೋಷಗಳೊಂದಿಗೆ ಗ್ರಾಮದ 18 ಕೋಮಿನ ಜನರ ಸಮಕ್ಷಮದಲ್ಲಿ ಅಲಂಕೃತ ರಥದಲ್ಲಿ ಗಣಪತಿ ಕೂರಿಸಿ, ರಥದ ಮುಂದೆ ಈಡುಗಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
Related Articles
Advertisement
ಶನಿವಾರ ಮಹಾಗಣಪತಿಗೆ 18 ಕೋಮಿನ ಸಮಕ್ಷಮದಲ್ಲಿ ಕಿರೀಟ ಧಾರಣೆ ಮಾಡಿ ಎಲ್ಲರೂ ಜಯಘೋಷಗಳೊಂದಿಗೆ ಮಹಾರಥದಲ್ಲಿ ಗಣೇಶ ಮೂರ್ತಿ ಕೂರಿಸಿದರು. ಗೂಳೂರು ಗಣೇಶನ ಪೂಜೆಗೆ ಶನಿವಾರ ರಾತ್ರಿ ಅಂತಿಮ ತೆರೆ ಎಳೆಯಲಾಯಿತು. ನಂತರ ಆರಂಭವಾದ ಗಣೇಶನ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳಾದ ನಾದಸ್ವರ, ಕರಡಿ ಮಜುಲು, ನಾಸಿಕ್ ಡೋಲು, ಕರಡಿವಾದ್ಯ, ವೀರಗಾಸೆ, ಕೀಲುಕುದುರೆ, ನಂದಿಕೋಲು, ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ ತಂಡಗಳ ಪ್ರದರ್ಶನದ ಜೊತೆಗೆ ಪಟಾಕಿ, ಬಾಣ-ಬಿರುಸು ಪ್ರದರ್ಶನ ಸಾಥ್ ನೀಡಿದವು.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ಮಹಾ ಗಣಪತಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು. ಭಾನುವಾರವೂ ಗೂಳೂರಿನ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಸಾಗಿ ನಂತರ ಗೂಳೂರು ಕೆರೆಯಲ್ಲಿ ನಿರ್ಮಿಸಿರುವ ಕಲ್ಯಾಣಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವ ನೆರವೇರಲಿದೆ.
ಸಿಡಿಮದ್ದಿನ ಪ್ರದರ್ಶನ: ಜಿಲ್ಲೆಯಲ್ಲಿ ಗೂಳೂರು ಗಣೇಶನ ಪರಸೆ ಎಂದು ಪ್ರಸಿದ್ಧಿ ಪಡೆದಿರುವ ಗಣೇಶ ಮಹೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಉತ್ಸವದಲ್ಲಿ ಶನಿವಾರ ಎರಡು ಗಂಟೆ ನಡೆದ ಆಕರ್ಷಕ ಮದ್ದಿನ ಪ್ರದರ್ಶನ 500 ಅಡಿ ಉದ್ದದ ಜೋಗ್‌ಫಾಲ್ಸ್, ನೂರು ಬಾರಿ ಹೊಡೆಯುವ ಔಟ್ಸ್ ಮತ್ತು ಪ್ಯಾರಚೂಟ್ ಪ್ರದರ್ಶನ ಗಮನಸೆಳೆಯಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ಗಣೇಶನ ಉತ್ಸವ ವೈಭವಯುತವಾಗಿಯೇ ನಡೆಯುತ್ತಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಇಳಿಮುಖವಾದಂತಿದೆ. ಶನಿವಾರ ರಾತ್ರಿಯಿಡೀ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಮಹಾಗಣಪತಿ ವೈಭವಯುತ ಮೆರವಣಿಗೆ ನಡೆದಿದೆ. ಭಾನುವಾರದಂದೂ ಮೆರವಣಿಗೆ ಮುಂದುವರೆಯಲಿದ್ದು, ಗೂಳೂರಿನ ರಾಜ ಬೀದಿಗಳಲ್ಲಿ ಮೆರವಣಿಗೆ ನಂತರ ವಿಸರ್ಜನೆ ಮಾಡಲಾಗುವುದು. ಡಿ. 16ರಂದು ಬೆಳಗ್ಗೆ 11 ಗಂಟೆಗೆ ಜಾತ್ರೆ ನಂತರ ಶ್ರೀ ಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿಯಿಂದ “ಕುರುಕ್ಷೇತ್ರ’ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.
ಮಳೆಗೆ ಮುಂದೂಡಿಕೆ: ನ.30, ಡಿ.1ರಂದು ನಡೆಯಬೇಕಿದ್ದ ತಾಲೂಕಿನ ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ ಮಳೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಶನಿವಾರ ರಾತ್ರಿ ಉತ್ಸವದ ರಥದಲ್ಲಿ ದೇವರನ್ನು ಕೂರಿಸಲಾಗಿದೆ ಎಂದು ಶ್ರೀ ಗೂಳೂರು ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ.ಎಸ್.ಶಿವಕುಮಾರ್ ತಿಳಿಸಿದರು. ಕಳೆದ ಬಲಿಪಾಡ್ಯಮಿಯಂದು ಇತಿಹಾಸ ಪ್ರಸಿದ್ಧ ಗೂಳೂರು ಗಣೇಶನನ್ನು ಪ್ರತಿಷ್ಠಾಪಿಸಿ ಅಂದಿನಿಂದ ಪ್ರತಿನಿತ್ಯ ವಿಶೇಷ ಪೂಜಾ, ಕೈಂಕರ್ಯ ನೆರವೇರಿಸಲಾಗುತ್ತಿದ್ದು, ಗ್ರಾಮದ 18 ಕೋಮಿನವರ ಸಹಕಾರದೊಂದಿಗೆ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ನಡೆಯುತ್ತಿದೆ ಎಂದರು.
ಅನ್ನ ಸಂತರ್ಪಣೆ: ಗಣೇಶ ವಿಸರ್ಜನಾ ಮಹೋತ್ಸವದ ಜಾತ್ರೆಗೆ ಆಗಮಿಸುವ ಭಕ್ತರಿಗೆ ಎರಡು ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಭಕ್ತರೂ ಅಲ್ಲಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದಾರೆ. ಅನ್ನ ಸಂತರ್ಪಣೆ ಸಿದ್ಧತೆ ಕುರಿತು ಶ್ರೀ ಗೂಳೂರು ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ.ಎಸ್. ಶಿವಕುಮಾರ್ ಪರಿಶೀಲಿಸಿದರು.
ಗೂಳೂರು ಮಹಾಗಣಪತಿ ಭಕ್ತರ ಇಷ್ಟಾರ್ಥ ಸಿದ್ಧಿಸುವ ಕ್ಷೇತ್ರವಾಗಿದೆ. ಪ್ರತಿ ವರ್ಷವೂ ವಿಶೇಷವಾಗಿ ನಮ್ಮ ಊರಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ 18 ಕೋಮಿನ ಜನರು ಒಟ್ಟಾಗಿ ಗಣೇಶ ಮಹೋತ್ಸವ ಆಚರಿಸುತ್ತಾರೆ. ಸುತ್ತ-ಮುತ್ತಲಿನ ಗ್ರಾಮಗಳಿಂದ ಅಲ್ಲದೇ ಬೇರೆ-ಬೇರೆ ಭಾಗಗಳಿಂದಲೂ ಭಕ್ತರು ಬರುತ್ತಾರೆ.-ಗೂಳೂರು ಮಣಿಕಂಠ * ಚಿ.ನಿ.ಪುರುಷೋತ್ತಮ್