ಮೈಸೂರು: ಸ್ವಕ್ಷೇತ್ರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಮೈಸೂರು ರೈಲ್ವೆ ಬಡಾವಣೆಯ ಕೆಆರ್‌ಎಸ್ ಮುಖ್ಯರಸ್ತೆಯಿಂದ ರೈಲ್ವೆ ಬಡಾವಣೆಯ ಮೂಲಕ ಶ್ಯಾದನಹಳ್ಳಿಗೆ ಸೇರುವ ರಸ್ತೆ ಅಭಿವೃದ್ಧಿ 2 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ, ಕೆಸರೆ ಗ್ರಾಮ, ಲಕ್ಷ್ಮೀಪುರ ಗ್ರಾಮಕ್ಕೆ ಭೇಟಿ ನೀಡಿದರು.
ಸಿದ್ದಲಿಂಗಪುರ ಗ್ರಾಮದಲ್ಲಿ ಮಡಿವಾಳ ಮಾಚಿ ದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಏಕಲವ್ಯ ನಗರದ ಕೊಳಗೇರಿ ನಿವಾಸಿಗಳನ್ನು ಭೇಟಿ, ಬೆಲವತ್ತ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘವನ್ನು ಉದ್ಘಾಟಿಸಿದರು. ಗ್ರಾಮದ ಬೀದಿಯನ್ನು ಸ್ವತಃ ತಾವೇ ಸ್ವಚ್ಛ ಮಾಡುವ ಮೂಲಕ ಸ್ವಚ್ಛತೆಗೆ ಚಾಲನೆ ನೀಡಿದರು. ಗ್ರಾಮಸ್ಥರ ಸಮಸ್ಯೆ ಆಲಿಸಿದ ಸಚಿವರು, ಕೊಳಗೇರಿ ನಿವಾಸಿಗಳಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.
ಗ್ರಾಮದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಒಳಚರಂಡಿ ಸಮಸ್ಯೆಗಳನ್ನು ಪರಿಶೀಲಿಸಿ, ಶೀಘ್ರ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಸರೆ ಗ್ರಾಮದಿಂದ ನಗುವಿನ ಹಳ್ಳಿಗೆ ಹೋಗುವ ರಸ್ತೆ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ, ಕೆಸರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ. ಲಕ್ಷ್ಮೀಪುರ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಟಿಎಸ್‌ಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, ಇತರರ ಬೀದಿಯಲ್ಲಿ 80 ಲಕ್ಷ ವೆಚ್ಚದಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮಗಳಲ್ಲಿ ಗ್ರಾಮಸ್ಥರ ವೃದ್ಧಾಪ್ಯ ವೇತನ, ವಸತಿ ಸಮಸ್ಯೆ, ಕುಡಿಯುವ ನೀರು, ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದರು. ಜಿಪಂ ಸದಸ್ಯ ದಿನೇಶ್, ಜಿಪಂ ಸದಸ್ಯರಾದ ತುಳಸೀ ಗೋವಿಂದರಾಜು,ಕೆಸರೆ ರೇವಣ್ಣ, ಮುಖಂಡರಾದ ಅರ್ಕೇಶ್ವರ್,ಕುಮಾರ್, ಕಾಮನ ಕೆರೆ ಹುಂಡಿ ನಾರಾಯಣಪ್ಪ, ಕೆಸರೆ ಮರಿಸ್ವಾಮಿ ಸೇರಿದಂತೆ ಹಲವು ಮುಖಂಡರು ಈ ಸಂದರ್ಭ ದಲ್ಲಿ ಹಾಜರಿದ್ದರು.