ಕಲಾವಿದನಿಗೆ ಶ್ರದ್ಧೆ ಬೇಕು. ವ್ಯಂಗ್ಯಚಿತ್ರಕಾರನಿಗೆ ಶ್ರದ್ಧೆಯ ಜೊತೆಗೆ, ಜಗತ್ತನ್ನು ಮೊನಚು ಕಂಗಳಿಂದ ಗಮನಿಸುವ ಚಾಕಚಕ್ಯತೆಯೂ ಬೇಕು. ಆ ಎರಡನ್ನೂ ಹೊಂದಿರುವವರು ಮೇಗರವಳ್ಳಿ ಸುಬ್ರಹ್ಮಣ್ಯ ಅವರು. ಸಣ್ಣ ವಯಸ್ಸಿನಿಂದಲೇ ವ್ಯಂಗ್ಯಚಿತ್ರ ರಚನೆಯತ್ತ ಆಕರ್ಷಿತರಾದ ಸುಬ್ರಹ್ಮಣ್ಯ ಅವರು, ಕಲಾ ಕುಟುಂಬದಿಂದ ಬಂದವರಲ್ಲ.
ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ. ನಾಡಿಗ್ ಅವರ ಕೃತಿಗಳಿಂದ ಪ್ರೇರೇಪಿತರಾದ ಅವರು, ಆಚಾರ್ಯ ಚಿತ್ರಕಲಾ ಭವನದಲ್ಲಿ ಚಿತ್ರಕಲೆಯನ್ನು ಅಭ್ಯಸಿಸಿದರು. ಸಮಕಾಲೀನ ವಿಚಾರಗಳಿಗೆ ವ್ಯಂಗ್ಯದ ಗೆರೆಗಳಿಂದ ಪ್ರತಿಕ್ರಿಯಿಸುವ ಮೇಗರವಳ್ಳಿಯವರ ರಚನೆಗಳು, ನಗುವಿನ ಅಲೆಗಳನ್ನೂ ಉಕ್ಕಿಸುತ್ತವೆ. ಪಕ್ಷಿ ತಜ್ಞ ಸಲೀಂ ಅಲಿ ಅವರ ಕ್ಯಾರಿಕೇಚರ್‌ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿದೆ.
ಜಿಲ್ಲಾ ಆರೋಗ್ಯ ಕೇಂದ್ರದಿಂದ ನಿವೃತ್ತಿ ಹೊಂದಿದ ನಂತರ, ಹೆಚ್ಚಿನ ಸಮಯ ಕಾರ್ಟೂನ್ ರಚನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಸುಬ್ರಹ್ಮಣ್ಯ ಅವರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಹಿರಿಯ ರಂಗಕರ್ಮಿ ಎಸ್.ಎನ್. ಸೇತುರಾಮ್, ಪ್ರದರ್ಶನ ಉದ್ಘಾಟಿಸಿದ್ದರು. ಮಾ.28ರವರೆಗೆ ಪ್ರದರ್ಶನ ನಡೆಯಲಿದೆ.
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ.1 ಮಿಡ್ ಫೋರ್ಡ್ ಹೌಸ್, ಮಿಡ್ ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ
ಯಾವಾಗ?: ಮಾ.28ರ ವರೆಗೆ, ಬೆಳಗ್ಗೆ 10- 6