Advertisement

Laugh: ಮನಸಾರೆ ನಕ್ಕಿದ್ದು ಆಗ ಮಾತ್ರ!

10:15 AM Feb 02, 2024 | Team Udayavani |

ಪ್ರಸ್ತುತ ನಮ್ಮ ಬದುಕು ಚಿಂತೆ, ಜಂಜಾಟಗಳಿಂದಲೇ ತುಂಬಿ ಹೋಗಿ ನಗು, ನೆಮ್ಮದಿ ಎಂಬುದು ಮರುಭೂಮಿಯಲ್ಲಿ ಸುರಿಯುವ ಮಳೆಯಂತೆ ಅಪರೂಪವಾಗಿಬಿಟ್ಟಿದೆ.. ಎಳೆಯವಯಸ್ಸಿನಲ್ಲಿ, ಒಮ್ಮೆ ಬೆಳೆದು ದೊಡ್ಡವನಾಗಿ ಬಿಡಬೇಕು, ಈ ಶಾಲೆ, ಶಿಕ್ಷಣ ಎಂಬ ಬಂಧನಗಳಿಂದ ಹೊರಬಂದು ಹಾರುವ ಹಕ್ಕಿಯಂತೆ ಸ್ವತಂತ್ರನಾಗಬೇಕು ಎಂಬೆಲ್ಲ ಬಯಕೆಗಳಿತ್ತು.. ಆದರೆ ಬೆಳೆದ ಈ ವಯಸ್ಸಿನಲ್ಲಿ ಮನಸು ಮತ್ತದೇ ಬಾಲ್ಯದ ಮಗುವಾಗುವ ಅಭಿಲಾಷೆ ವ್ಯಕ್ತಪಡಿಸುತ್ತಿದೆ. ಕಾರಣ ಆ ದಿನಗಳಲ್ಲಿ ನೆಮ್ಮದಿಗೆ ಕೊರತೆ ಇರಲಿಲ್ಲ ಮತ್ತು ಚಿಂತೆ ಇಲ್ಲದೆ ಮನಸಾರೆ ನಾವೆಲ್ಲ ನಕ್ಕಿದ್ದು ಆಗ ಮಾತ್ರ ಅನ್ನಿಸುತ್ತದೆ..

Advertisement

ಸರಕಾರಿ ಶಾಲೆಯಲ್ಲಿ ಬಾಲ್ಯದ ಶಿಕ್ಷಣ ಪೂರೈಸಿದ ನನ್ನಂತವನಿಗೆ ಆ ಹಳೆಯ ಹಂಚಿನ ಕಟ್ಟಡ ಕೊಟ್ಟಷ್ಟು ನೆಮ್ಮದಿ, ಸಂತೋಷ ಜಗತ್ತಿನ ಬೇರಾವುದೇ ಜಾಗ ನೀಡಿಲ್ಲ ಮತ್ತು ನೀಡುವುದು ಇಲ್ಲ. ಇತರರನ್ನು ಮೆಚ್ಚಿಸಲು ನೋವಿದ್ದರೂ ನಗುವ ಹಾಗೇ ನಟಿಸಬೇಕಾದ ಈ ಕಾಲಕ್ಕಿಂತ, ಮುಗ್ಧತೆ ಮತ್ತು ಸ್ವತಂತ್ರಯುತವಾಗಿ ವ್ಯಕ್ತವಾಗುತ್ತಿದ್ದ ಬಾಲ್ಯದ ಭಾವನೆಗಳೇ ಚೆಂದವಿತ್ತು.

ಆಟ -ಪಾಠಗಳೊಂದಿಗೆ ತರ್ಲೆ ತುಂಟಾಟಗಳು, ಪೆಟ್ಟು -ಬೈಗುಳಗಳ ಹಿಂದೆ ಇರುತ್ತಿದ್ದ ಶಿಕ್ಷಕರ ಕಾಳಜಿ ಪ್ರೀತಿಗಳು, ಮಧ್ಯಾಹ್ನದ ಬಿಸಿಯೂಟ, ಅಡುಗೆ ಸಿಬಂದಿಗಳೊಂದಿಗಿನ ಬಾಂಧವ್ಯ, ಶಾಲೆ ಎದುರಿನ ಸಾಹೇಬರ ಅಂಗಡಿ, ಶೆಟ್ಟರ ಮನೆಯಲ್ಲಿ ಕದ್ದು ತಿಂದ ಮಾವಿನಹಣ್ಣು, ಮಳೆಯಲ್ಲಿ ನೆನೆದುಕೊಂಡು ಬಂದು ಅಮ್ಮನ ಬಾಯಲ್ಲಿ ಕೇಳುತ್ತಿದ್ದ ಬೈಗುಳಗಳು ಎಲ್ಲವೂ ಈಗ ಕಳೆದ ಸಮಯ ಕೊಟ್ಟ ನೆನೆಪುಗಳಷ್ಟೇ.. ತೀರಾ ದೊಡ್ಡವರಾಗಿ ಬೆಳೆದು ಪಡೆದುಕೊಂಡದ್ದು ಚಿಂತೆ,ಜಂಜಾಟಗಳನ್ನು ಕಳೆದುಕೊಂಡದ್ದು ನೆಮ್ಮದಿಯನ್ನು..ಜೀವನದ ಜಂಜಾಟದಲ್ಲಿ ಬಳಲಿ ಬೆಂಡಾದ ಮನಸು ಮತ್ತೆ ಬಾಲ್ಯದ ನೆಮ್ಮದಿಯನ್ನು ಬಯಸಿದೆ..ಯಾಕೆಂದರೆ ಜವಾಬ್ದಾರಿಗಳ ಒತ್ತಡವಿಲ್ಲದೆ, ಚಿಂತೆ ಎಂಬ ಪದದ ಅರ್ಥ ತಿಳಿಯದೆ ನಾವೆಲ್ಲ ಮನಸಾರೆ ನಕ್ಕಿದ್ದು ಆಗ ಮಾತ್ರ.

ಚೇತನ್‌ ಕಾಶಿಪಟ್ನ

ಎಸ್‌ಡಿಎಂ, ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next