Advertisement
ಒತ್ತಡದ ಜೀವನದಲ್ಲಿ ನಮಗೆ ನಗುವೆಂಬುದು ಏನು ಎಂಬುದೇ ಮರೆತು ಹೋಗಿರುತ್ತದೆ. ದೈನಂದಿನ ದಿನಚರಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ನಿನ್ನೆ ಮತ್ತು ಇಂದಿಗೆ ಯಾವುದೇ ವ್ಯತ್ಯಾಸವಿಲ್ಲ ಎಂದೆನಿಸುತ್ತದೆ. ಮಾಡುವ ಎಲ್ಲ ಕೆಲಸ ನಮಗೊಬ್ಬರಿಗೆ ಇದೇ ಬೇರೆಯವರು ಸುಖೀಗಳು, ನಮಗೆ ಮಾತ್ರ ಇಂತಹ ಕಷ್ಟ ಎಂದು ಗೊಣಗುತ್ತೇವೆ. ಆದರೆ ಜೀವನದಲ್ಲಿ ಪ್ರತಿಯೊಬ್ಬನಿಗೂ ಅವನದ್ದೇ ಆದ ಕಷ್ಟಗಳಿರುತ್ತವೆ. ಕೆಲವರು ಅದನ್ನು ಸರಾಗವಾಗಿ ಎದುರಿಸಲು ಕಲಿತಿರುತ್ತಾರೆ. ಇನ್ನು ಕೆಲವರು ಅದನ್ನು ಜಟಿಲ ಮಾಡಿಕೊಂಡು ಬಿಡಿಸಲಾರದೇ ಕಷ್ಟ ಪಡುತ್ತಿರುತ್ತಾರೆ.
ಆದಷ್ಟು ಕೆಲಸಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲು ಕಲಿಯಿರಿ. ನಾನು ಮಾಡಬಲ್ಲೇ ಎಂಬ ವಿಶ್ವಾಸ ಬೆಳೆಸಿಕೊಳ್ಳಿ ಅಥವಾ ಹತ್ತಿರದವರೊಂದಿಗೆ ಹಂಚಿಕೊಂಡು ಏನು ಮಾಡಬಹುದು, ಹೇಗೆ ಮಾಡಿದರೇ ಉತ್ತಮ ಎಂಬುದನ್ನು ತಿಳಿದುಕೊಳ್ಳಿ. ಆಗ ನಿಮ್ಮ ಎದುರಿಗಿದ್ದ ಬಂಡೆಯಂತಹ ಸಮಸ್ಯೆ ಚಿಕ್ಕ ಕಲ್ಲಿನಂತಾಗಿ ಕರಗಿಹೋಗಿ ಬಿಡುತ್ತದೆ.
Related Articles
ಒಮ್ಮೆ ಮಗಳು ಅಪ್ಪನ ಬಳಿಯಲ್ಲಿ ಕಷ್ಟಗಳನ್ನು ನಿಭಾಯಿಸುವುದು ಹೇಗೆ ಎಂದು ಕೇಳಿದಾಗ ಅಪ್ಪ ನೋಡು ಮಗಳೇ ಕಷ್ಟಗಳನ್ನು ಎದುರಿಸಲು ಮೂರು ದಾರಿಗಳಿವೆೆ. ಅವುಗಳನ್ನು ನೀನು ಆರಿಸಿಕೊಳ್ಳಬೇಕು ಎಂದಾಗ ಮಗಳು ಕುತೂಹಲದಿಂದ ಅದು ಹೇಗೆ ಎಂದಳು. ಆಗ ಅಪ್ಪ ಕಷ್ಟಗಳು ಬಂದಾಗ ಮೊದಲು ನೀನು ಬಗೆಹರಿಸಲು ಯತ್ನಿಸಬೇಕು. ನಿನ್ನಿಂದ ಸಾಧ್ಯವಾಗದೇ ಇದ್ದರೆ ಅನುಭವವಿರುವವರಲ್ಲಿ ಕೇಳಬೇಕು ಆಗಲೂ ಸಾಧ್ಯವಾಗದಿದ್ದರೆ ಕಾಲಕ್ಕೆ ಅದನ್ನು ಬಿಟ್ಟು ಬಿಡಬೇಕು. ಆಗ ಪರಿಹಾರದ ದಾರಿ ತನ್ನಿಂದ ತಾನಾಗಿಯೇ ತೆರೆದುಕೊಳ್ಳುತ್ತದೆ.
Advertisement
ಪ್ರತಿಯೊಂದು ಸಂದರ್ಭವೂ ನಿಮಗೆ ಒಂದು ಪಾಠ ಕಲಿಸುತ್ತದೆ. ನೀವು ಅದನ್ನು ಕಲಿತು ಮುಂದೆ ಬರುವ ಕಷ್ಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಷ್ಟೇ. ನಮಗೆ ಬಂದ ಕಷ್ಟವನ್ನು ನಾವು ಹೇಗೆ ನಿಭಾಯಿಸಬಲ್ಲೆವು ಎಂಬುದರ ಮೇಲೆ ನಮ್ಮ ಬದುಕು ನಿರ್ಧಾರವಾಗುತ್ತದೆ. ಆದ್ದರಿಂದ ಬದುಕಿನಲ್ಲಿ ಎಷ್ಟೇ ಕಷ್ಟಗಳು ಬರಲಿ. ಬದುಕಿನುದ್ದಕ್ಕೂ ನಗುತ್ತಲೇ ಅದನ್ನು ಸ್ವೀಕರಿಸಿ.
ಪ್ರೀತಿ ಭಟ್ ಗುಣವಂತೆ