ಕನ್ನಡದಲ್ಲಿ ಹಾರರ್ ಸಿನಿಮಾಗಳಿಗಂತೂ ಬರವಿಲ್ಲ. ಆ ಸಾಲಿಗೆ “3000′ ಎಂಬ ಸಿನಿಮಾವೂ ಒಂದು. ಇದು ಹೇಳಿ ಕೇಳಿ ಹೊಸಬರ ಚಿತ್ರ. ಬಹುತೇಕ ಹೊಸಬರೇ ಹಾರರ್ ಸಿನಿಮಾಗಳ ಹಿಂದೆ ಬಂದು ಗೆಲುವು ಕಾಣುತ್ತಿದ್ದಾರೆ. ಈಗ ಅಂಥದ್ದೇ ಒಂದು ತಂಡ, “3000′ ಎಂಬ ಹಾರರ್ ಸಿನಿಮಾ ಹಿಂದೆ ನಿಂತಿದೆ. ಇನ್ನು, ಈ ಚಿತ್ರದ ಮೂಲಕ ಕೀರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರಾಗಿದ್ದಾರೆ.
ಇವರ ಕಥೆ ಒಪ್ಪಿ, ಶಂಕರ್ ಎಂಬುವವರು ನಿರ್ಮಾಣ ಮಾಡಿದ್ದಾರೆ. ಇದೊಂದು ಹಾರರ್ ಚಿತ್ರವಾಗಿದ್ದರೂ, ಇಲ್ಲೊಂದಷ್ಟು ಮನರಂಜನೆ ಇದೆ. ಆ ಮೂಲಕ ಒಂದು ಸಂದೇಶವುಳ್ಳ ಕಥೆ ಹೇಳುವ ಪ್ರಯತ್ನ ಮಾಡಿದ್ದಾರಂತೆ. ಈ ಚಿತ್ರದಲ್ಲೊಂದು ವಿಶೇಷತೆ ಇದೆ. ಅದು ಲ್ಯಾಟಿನ್ ಭಾಷೆ. ಅದನ್ನಿಲ್ಲಿ ಬಳಸಿಕೊಳ್ಳಲಾಗಿದೆಯಂತೆ. ಲ್ಯಾಟಿನ್ ಭಾಷೆಯಲ್ಲೇ ಒಂದು ಹಾಡಿದೆ ಎಂಬುದು ವಿಶೇಷ. ಕನ್ನಡದಲ್ಲಿ ಲ್ಯಾಟಿನ್ ಭಾಷೆಯ ಹಾಡು ಇದೇ ಮೊದಲು. ಇಲ್ಲಿ ಚಿತ್ರಕ್ಕೆ “3000′ ಎಂದು ನಾಮಕರಣ ಮಾಡುವುದಕ್ಕೂ ಕಾರಣವಿದೆ. ಅದಕ್ಕೊಂದು ವಿಶೇಷತೆಯೂ ಇದೆ. ಅದನ್ನು ತಿಳಿದುಕೊಳ್ಳಬೇಕಾದರೆ, ಸಿನಿಮಾ ಬರುವವರೆಗೂ
ಕಾಯಬೇಕು ಎನ್ನುತ್ತಾರೆ ನಿರ್ದೇಶಕ ಕೀರ್ತಿ.
ಇನ್ನು, ಸುಹಾನ್ ಇಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರು ಇಟಲಿಯಲ್ಲಿ ಓದುತ್ತಿರುವ ಸಂದರ್ಭದಲ್ಲಿ ಅಲ್ಲಿನ ಚರ್ಚ್‌ನಲ್ಲಿ ನಡೆದ ಕೆಲ ಅಪರೂಪದ ವಿಷಯಗಳನ್ನು ತಿಳಿದು ಕೊಂಡು ತಮ್ಮ ಗೆಳಯನ ಬಳಿ ಹೇಳಿಕೊಂಡಾಗ, ಕಥೆಯಲ್ಲೇನೋ ವಿಶೇಷತೆ ಇದೆ ಅಂತೆನಿಸಿ, ಶಂಕರ್ ನಿರ್ಮಾಣ ಮಾಡಲು ಮನಸ್ಸು ಮಾಡಿದರಂತೆ. ಈಗ ಚಿತ್ರೀಕರಣ ಮುಗಿದಿದ್ದು, ಇಷ್ಟರಲ್ಲೇ ಬಿಡುಗಡೆಯಾಗೋಕೆ ಚಿತ್ರ ಸಜ್ಜಾಗಿದೆ. ಚಿತ್ರದಲ್ಲಿ ಗೌರೀಶ್ ಅಕ್ಕಿ, ಸ್ವಾತಿ, ಕೀರ್ತಿ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ.ಅಲೆನ್ ಡಿಸೋಜ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣವಾಗಿರುವ ಸಿನಿಮಾದ ಹಾಡುಗಳು ಇಷ್ಟರಲ್ಲೇ ಬಿಡುಗಡೆಯಾಗಲಿವೆ. ಚಿತ್ರಕ್ಕೆ ಮನು ಕ್ಯಾಮೆರಾ ಹಿಡಿದಿದ್ದಾರೆ.