ಮೈಸೂರು: ಮೂರು ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದು, ಬಹುತೇಕ ಕಡೆಗಳಲ್ಲಿ ಮಂದಗತಿಯ ಮತದಾನ ನಡೆಯಿತು.
ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಲ್ಲಿ ಕೆ.ಆರ್.ಕ್ಷೇತ್ರದ ಸಾರ್ವಜನಿಕರು ಮತಗಟ್ಟೆಗೆ ಯಾವುದೇ ಗೊಂದಲವಿಲ್ಲದೆ ಶಾಂತಿಯುತ ಮತದಾನ ಮಾಡಿದರು. ಆದರೆ ಮತದಾನ ಆರಂಭಗೊಂಡ ಕೆಲವು ಗಂಟೆಗಳ ಅವಧಿಯಲ್ಲಿ ಅಷ್ಟೇನು ಬಿರುಸು ಮತದಾನ ಕಂಡು ಬಂದಿರಲಿಲ್ಲ. ಬೆಳಗ್ಗೆ 11 ಗಂಟೆವರೆಗೂ ಯಾವುದೇ ಮತಗಟ್ಟೆಗಳಲ್ಲಿ ಮತದಾರರ ಸರದಿ ಸಾಲು ನಿರ್ಮಾಣಗೊಂಡಿರಲಿಲ್ಲ.
ಹೀಗಾಗಿ ಮತಗಟ್ಟೆಗೆ ಆಗಮಿಸಿದ ಮತದಾರರು, ಯಾವುದೇ ಸಮಸ್ಯೆಗಳಿಲ್ಲದೆ ಮತ ಚಲಾಯಿಸಿ ಕೂಡಲೇ ಹೊರಬರುತ್ತಿದ್ದರು. ಆದರೆ ಬೆಳಗ್ಗೆ 11.30ರ ನಂತರ ಹಲವು ಮತ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಸ್ವಲಮಟ್ಟಿನ ವೇಗ ದೊರೆತ ಪರಿಣಾಮ ಹಲವು ಕಡೆಗಳಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಕೈಕೊಟ್ಟ ಮತಯಂತ್ರ: ಮತದಾನ ಪ್ರಕ್ರಿಯೆ ಆರಂಭಗೊಂಡ ಕೆಲವೇ ಹೊತಿನಲ್ಲಿ ನಗರದ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಸಂಸ್ಕೃತ ಪಾಠ ಶಾಲೆಯಲ್ಲಿ ಮತಯಂತ್ರ ಕೈಕೊಟ್ಟಿತ್ತು. ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಮತದಾನ ಪ್ರಕ್ರಿಯೆ 40 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಸಂಸ್ಕೃತ ಪಾಠ ಶಾಲೆಯ ಮತಗಟ್ಟೆ ಸಂಖ್ಯೆ 119ರಲ್ಲಿ ಮತ ಹಾಕಲು ತೆರಳಿದ್ದ ಮತದಾರರು ಕೆಲವು ಹೊತ್ತಿನವರೆಗೆ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೊರಬರದ ಜನರು: ವಿಧಾನಸಭಾ ಚುನಾವಣೆ ಮತದಾನಕ್ಕೆ ಕೆ.ಆರ್.ಕ್ಷೇತ್ರದ ಹಲವು ಕಡೆಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂತು. ತಮ್ಮ ಹಕ್ಕು ಚಲಾಯಿಸಲು ಬೆಳಗ್ಗೆಯೇ ಮತಗಟ್ಟೆಗಳಿಗೆ ತೆರಳಿದ ಮತದಾರರು ತಾವು ಬೆಂಬಲಿಸುವ ಅಭ್ಯರ್ಥಿಗಳಿಗೆ ವೋಟ್ ಹಾಕಿದರು. ಆದರೆ ಬಿಸಿಲತಾಪ ಹೆಚ್ಚುತ್ತಿದ್ದಂತೆ ಕ್ಷೇತ್ರದ ಬಹುತೇಕ ಮತಗಟ್ಟೆಗಳು ಖಾಲಿ ಖಾಲಿಯಾಗಿತ್ತು. ಬಿಸಿಲ ಬೇಗೆಯಿಂದಾಗಿ ಮನೆಯಿಂದ ಹೊರಬರದ ಮತದಾರರು, ಸಂಜೆಯ ನಂತರ ಮತಗಟ್ಟೆಗಳಿಗೆ ತೆರಳಿ, ತಮ್ಮ ಹಕ್ಕು ಚಲಾಯಿಸಿದರು.
ಗೊಂದಲ ನಿರ್ಮಾಣ: ಕೆ.ಆರ್.ಕ್ಷೇತ್ರ ವ್ಯಾಪ್ತಿಯ ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಶಾಲೆಯಲ್ಲಿ 13, 14 ಹಾಗೂ 15 ಸಂಖ್ಯೆಯ 3 ಮತಗಟ್ಟೆಗಳನ್ನು ತೆರೆದು, ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಮುಂಜಾನೆಯಿಂದಲೇ ಹಲವು ಮತದಾರರು ಸುಲಭವಾಗಿ ಮತದಾನ ಮಾಡುತ್ತಿದ್ದರು.
ಈ ನಡುವೆ ಶಾಲೆಯ ಹೊರಭಾಗದಲ್ಲಿ ಮತಯಾಚನೆ ಮಾಡುತ್ತಿದ್ದ ಕೆಲವು ಅ¸Âರ್ಥಿಗಳ ಪರ ಬೆಂಬಲಿಗರು, ನಿಷೇಧಿತ ಪ್ರದೇಶವನ್ನು ಮೀರಿ ಶಾಲೆಯ ಒಳಗೆ ಪ್ರವೇಶಿಸಿ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದರು. ಇದಕ್ಕೆ ಎದುರಾಳಿ ಪಕ್ಷದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಷ್ಟರಲ್ಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದರು.