Advertisement

ದಿ.ವಿಜಯ ಕುಮಾರ್‌ ಪ್ರಾಮಾಣಿಕತೆ ಸ್ಮರಣೆ ಅಗತ್ಯ

06:29 AM May 05, 2019 | Lakshmi GovindaRaj |

ಬೆಂಗಳೂರು: ಅಪರೂಪದ ರಾಜಕಾರಣಿಯಾಗಿದ್ದ ದಿವಂಗತ ಬಿ.ಎನ್‌.ವಿಜಯ ಕುಮಾರ್‌ ನಮಗಾಗಿ ಹಲವು ಉತ್ತಮ ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಪ್ರಾಮಾಣಿಕತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು.

Advertisement

ಜಯನಗರ ಕ್ಷೇತ್ರದ ಮಾಜಿ ಶಾಸಕ ಬಿ.ಎನ್‌.ವಿಜಯಕುಮಾರ್‌ ಸ್ಮರಣಾರ್ಥ ಜಯನಗರ 3ನೇ ಬ್ಲಾಕ್‌ನ ಎನ್‌ಎಂಕೆಆರ್‌ವಿ ಕಾಲೇಜು ಆವರಣದಲ್ಲಿನ ಮಂಗಳ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಸ್ಮತಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವ ರಾಜಕಾರಣಿಗಳು ಹಣ, ಅಂತಸ್ತು, ಅಧಿಕಾರ ಬೇಕು ಎಂದು ಬಯಸುತ್ತಾರೋ ಅದನ್ನೆಲ್ಲಾ ವಿಜಯ ಕುಮಾರ್‌ ಅವರು ತಿರಸ್ಕರಿಸಿದ್ದರು. ವಿಜಯ ಕುಮಾರ್‌ ಎಂಬ ವ್ಯಕ್ತಿತ್ವದ ಕನ್ನಡಿಯಲ್ಲಿ ನಾವೆಲ್ಲಾ ನಮ್ಮನ್ನು ನೋಡಿಕೊಳ್ಳುವಂತಾಗಬೇಕು ಎಂದರು.

ಬೆಂಗಳೂರು ಎಂದರೆ ವಿಜಯ ಕುಮಾರ್‌ ಎನ್ನುವಷ್ಟರ ಮಟ್ಟಿಗೆ ನಗರದ ರಾಜಕೀಯವನ್ನು ಆವರಿಸಿಕೊಂಡಿದ್ದ ಹಾಗೂ ಸಂಘಟನೆಯನ್ನೇ ಜೀವವನ್ನಾಗಿಸಿಕೊಂಡಿದ್ದವರು ವಿಜಯ ಕುಮಾರ್‌. ಅವರು ಒರಟು ಮಾತುಗಾರ.

ಆದರೆ ಆ ಒರಟು ಮಾತುಗಳ ಹಿಂದೆ ಒಂದು ಸದುದ್ದೇಶ ಇರುತ್ತಿತ್ತೇ ಹೊರತು ಅಹಂಕಾರವಿರುತ್ತಿರಲಿಲ್ಲ. ವಿಜಯ ಕುಮಾರ್‌ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಉತ್ತಮ ಕೆಲಸಗಳ ಮೂಲಕ ನಮ್ಮ ನಡುವೆಯೇ ಇರುತ್ತಾರೆ.

Advertisement

ತಮಗಾಗಿ ಏನೂ ಮಾಡಿಕೊಳ್ಳದ ಅವರು ನಗರದ ಬಿಜೆಪಿಯ ಅಗ್ರಗಣ್ಯ ನಾಯಕರಾಗಿ ನಿಲ್ಲುತ್ತಾರೆ. ಕೆರೆಗಳ ಪುನರುಜ್ಜೀವನ, ರಾಜಕಾಲುವೆ ಒತ್ತುವರಿ ತೆರವು, ಮಳೆ ನೀರು ಕೊಯ್ಲು ಸೇರಿದಂತೆ ಹಲವು ಉತ್ತಮ ಕೆಲಸಗಳಲ್ಲಿ ವಿಜಯ ಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ಮರಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ವಿಜಯ ಕುಮಾರ್‌ ಅವರು ಕೈಗೊಳ್ಳುತ್ತಿದ್ದ ನಿರ್ಧಾರಗಳನ್ನು ಪ್ರಶ್ನಿಸುವ ಧೈರ್ಯ ನಮಗಿರಲಿಲ್ಲ. ಏಕೆಂದರೆ ಅವರ ಪ್ರತಿ ನಿರ್ಧಾರಗಳು ಪಕ್ಷ ಹಾಗೂ ಸಮಾಜದ ಪರವಾಗಿರುತ್ತಿತ್ತು. ನಗರದಲ್ಲಿ ಪಕ್ಷ ಸಂಘಟನೆಯಲ್ಲಿ ಅವರ ಅಪಾರ ಪರಿಶ್ರಮವಿದೆ.

ಬಿಬಿಎಂಪಿಯಲ್ಲಿ 100ಕ್ಕೂ ಹೆಚ್ಚು ಬಿಜೆಪಿ ಸದಸ್ಯರಿದ್ದಾರೆ ಎಂದರೆ ಅದಕ್ಕೆ ವಿಜಯ ಕುಮಾರ್‌ ಅವರು ಕಾರಣ. ಜನರ ಮನಸ್ಸಿನಲ್ಲಿ ಬೆರೆತು ಹೋಗಿದ್ದ ವಿಜಯ ಕುಮಾರ್‌ ಜನರ ಮಧ್ಯೆ ಇದ್ದಾಗಲೇ ಇಹಲೋಕ ತ್ಯಜಿಸಿದರು. ಅವರು ತೋರಿಸಿಕೊಟ್ಟ ಹಾದಿಯಲ್ಲಿ ನಡೆಯುವುದೇ ಅವರಿಗೆ ನಾವು ತೋರುವ ಶ್ರದ್ಧಾಂಜಲಿ ಎಂದು ಹೇಳಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್‌, ಜಯನಗರ ಶೈಕ್ಷಣಿಕ ಸಮಿತಿ ಅಧ್ಯಕ್ಷ ಡಾ.ಸಮೀರ ಸಿಂಹ, ಶಾಸಕರಾದ ಎಂ.ಕೃಷ್ಣಪ್ಪ, ಪ್ರೀತಂ ಗೌಡ, ವಿಜಯ ಕುಮಾರ್‌ ಸಹೋದರಾದ ಬಿ.ಎನ್‌. ಮೂರ್ತಿ, ಪ್ರಹ್ಲಾದ್‌ ಬಾಬು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next