Advertisement

ತಡರಾತ್ರಿ ಆಟೋಟ ಆಟಾಟೋಪ

11:21 AM Dec 21, 2019 | Suhan S |

ಹುಬ್ಬಳ್ಳಿ: ಮಧ್ಯರಾತ್ರಿ ವೇಳೆ ಕೆಲವೊಂದು ಆಟೋರಿಕ್ಷಾ ಚಾಲಕರ ದುಂಡಾವರ್ತನೆಯಿಂದ ಪ್ರಯಾಣಿಕರು ಅಷ್ಟೇ ಅಲ್ಲ, ಬಸ್‌ಗಳ ಚಾಲಕರು ಸಮಸ್ಯೆ-ಸಂಕಷ್ಟ ಎದುರಿಸುವಂತಾಗಿದೆ. ರೈಲ್ವೆ ನಿಲ್ದಾಣದಿಂದ ತಡರಾತ್ರಿ ಹೊರಡುವ ಬಸ್‌ಗೆ ಅಡ್ಡಿಪಡಿಸುವ ಯತ್ನಗಳು ನಡೆಯುತ್ತಿವೆ ಎಂಬ ದೂರು ಕೇಳಿಬರುತ್ತಿದೆ.

Advertisement

ಕೆಲ ಆಟೋರಿಕ್ಷಾ ಚಾಲಕರ ದಬ್ಟಾಳಿಕೆಯಿಂದ ಪ್ರಯಾಣಿಕರು, ಬಸ್‌ ಚಾಲಕರು ಬೇಸರಗೊಂಡಿದ್ದು, ಆಟೋರಿಕ್ಷಾ ಚಾಲಕರು ಕ್ಷುಲ್ಲಕ ವಿಷಯಕ್ಕೂ ಕೆಲವೊಮ್ಮೆ ಹಲ್ಲೆಗೂ ಮುಂದಾಗುತ್ತಿದ್ದಾರೆ. ತಡರಾತ್ರಿ ಇವರ ವರ್ತನೆಗಳಿಗೆ ಕಡಿವಾಣ ಇಲ್ಲವಾಗಿದೆ ಎಂಬುದು ಅನೇಕರ ಅಳಲಾಗಿದೆ. ರಾತ್ರಿ 12:30 ಗಂಟೆಗೆ ರೈಲ್ವೆ ನಿಲ್ದಾಣದಿಂದ ಧಾರವಾಡಕ್ಕೆ ಹೋಗುವವರಿಗೆ ಅನುಕೂಲವಾಗಲಿ ಎಂದು ವಾಕರಸಾ ಸಂಸ್ಥೆ ನಗರ ಸಾರಿಗೆ ಬಸ್‌ವೊಂದರ ವ್ಯವಸ್ಥೆ ಮಾಡಿದೆ.

ರಾತ್ರಿ ವೇಳೆ ಧಾರವಾಡಕ್ಕೆ ಇದು ಕೊನೆಯ ಬಸ್‌ ಆಗಿದೆ. ಆದರೆ ಕೆಲ ಆಟೋ ಚಾಲಕರು ಬಸ್‌ ನಲ್ಲಿ ಸಂಚರಿಸದಂತೆ-ತಮ್ಮ ಆಟೋದಲ್ಲಿಯೇ ಪ್ರಯಾಣಿಸುವಂತೆ ಪ್ರಯಾಣಿಕರಿಗೆ ತಾಕೀತು ಮಾಡುತ್ತಾರೆ, ಬಸ್‌ ಚಾಲಕನಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗದಂತೆ ಬೆದರಿಸುತ್ತಾರೆ ಎಂಬುದು ಜನರ ಆರೋಪವಾಗಿದೆ. ತಡರಾತ್ರಿ ಪ್ರಯಾಣಿಕರಿಗೆ ಇಂತಿಷ್ಟು ಹಣ ನೀಡಲೇಬೇಕೆಂಬ ಒತ್ತಡದ ಜತೆಗೆ ಆಟೋರಿಕ್ಷಾದಲ್ಲೇ ಬರಬೇಕೆಂಬ ಒತ್ತಡವನ್ನು ಹಾಕುತ್ತಿದ್ದು, ಕೆಲವೊಬ್ಬರು ನಡೆದುಕೊಂಡು ಹೋಗುವ ಪ್ರಯಾಣಿಕರನ್ನೂ ಬಿಡದೆ ಅವರ ಕೈಯಲ್ಲಿನ ಬ್ಯಾಗ್‌ ಇನ್ನಿತರ ವಸ್ತು ಕಸಿದುಕೊಂಡು ಆಟೋರಿಕ್ಷಾದಲ್ಲೇ ಪ್ರಯಾಣಿಸಬೇಕೆಂದು ಬೆದರಿಕೆ ಹಾಕಿದ ಪ್ರಕರಣಗಳು ನಡೆದಿವೆ ಎಂಬುದು ಕೆಲವರ ಅಳಲಾಗಿದೆ.

ಆಟೋರಿಕ್ಷಾದವರು ರಾತ್ರಿ ವೇಳೆ ಹಳೇ ಬಸ್‌ ನಿಲ್ದಾಣದಿಂದ ನವನಗರದ ವರೆಗೆ ಎಲ್ಲೇ ಇಳಿದರೂ ಪ್ರತಿಯೊಬ್ಬರಿಂದ 50 ರೂ. ವಸೂಲಿ ಮಾಡುತ್ತಾರೆ. ಇನ್ನು ಒಬ್ಬರೇ ಆಟೋರಿಕ್ಷಾ ಪಡೆದರೆ ಅಂತಹವರಿಗೆ 250-300 ರೂ. ಹೇಳುತ್ತಾರೆ. ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕೇವಲ 13 ರೂ.ಗೆ ನವನಗರ ತಲುಪುವ ಗ್ರಾಹಕರು ಆಟೋದವರಿಗೆ 50 ರೂ. ನೀಡಬೇಕಾಗಿದೆ. ಖಾಸಗಿ ಜೀಪಿನವರು ಪ್ರಯಾಣಿಕರನ್ನು ಕರೆದ್ಯೊಯಲು ಮುಂದಾದರೂ ಅವರೊಂದಿಗೂ ಜಗಳಕ್ಕಿಳಿಯುವ ಆಟೋದವರು ಧಾರವಾಡದವರೆಗೂ ನಮ್ಮ ಆಟೋರಿಕ್ಷಾದಲ್ಲೇ ಬರಲಿ ಎಂದು ಒತ್ತಾಯಿಸುತ್ತಿದ್ದು, ಆಟೋರಿಕ್ಷಾಕ್ಕೆ ಹೋದರೆ ಹೆಚ್ಚಿನ ಹಣಕ್ಕೆ ಒತ್ತಾಯಿಸುತ್ತಾರೆ ಎನ್ನಲಾಗುತ್ತಿದೆ.

ಹಳೇ ಬಸ್‌ನಿಲ್ದಾಣ ಬಳಿ ನಿಲ್ದಾಣದೊಳಗೆ ನುಗ್ಗುವ ಆಟೋರಿಕ್ಷಾದವರು ದೂರದ ಸ್ಥಳಗಳಿಗೆ ಹೋಗುವ ಬಸ್‌ಗಳು ಬರುವುದಕ್ಕೂ ಅವಕಾಶ ನೀಡದ ರೀತಿಯಲ್ಲಿ ನಿಲ್ಲಿಸಿರುತ್ತಾರೆ, ಕೇಳಿದರೆ ಜಗಳಕ್ಕಿಳಿಯುತ್ತಾರೆ. ಪೊಲೀಸ್‌ ವ್ಯವಸ್ಥೆಯೂ ಸರಿ ಇಲ್ಲ, ಆಟೋರಿಕ್ಷಾದವರು ಆಡಿದ್ದೇ ಆಟ ಎನ್ನುವಂತಾಗಿದೆ. ಹಳೇ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ ಬಳಿ ತಡರಾತ್ರಿ ವೇಳೆ ಆಟೋರಿಕ್ಷಾದವರ ಇಂತಹ ವರ್ತನೆ ತಡೆಯುವ ನಿಟ್ಟಿನಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

Advertisement

ರಾತ್ರಿ ಕೆಲಸ ಮುಗಿಸಿಕೊಂಡು ಬೇಗನೆ ಮನೆ ಸೇರಿದರಾಯಿತು ಎಂದು ಹೋಗುವ ಸಾರ್ವಜನಿಕರಿಗೆ ಆಟೋ ರಿಕ್ಷಾ ಹಾಗೂ ಖಾಸಗಿ ವಾಹನ ಚಾಲಕರ ಕಿರುಕುಳ ಹೆಚ್ಚಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಸಾರ್ವಜನಿಕರನ್ನು ಬಲವಂತವಾಗಿ ಬಸ್‌ನಿಂದ ಇಳಿಸುವುದು ಹಾಗೂ ನವನಗರ ಸೇರಿದಂತೆ ಪ್ರಯಾಣಿಕರು ಹೋಗುವ ಸ್ಥಳದವರೆಗೂ ಆಟೋರಿಕ್ಷಾದಲ್ಲಿ ಹೋಗುವ ಮೂಲಕ ಅವರೊಂದಿಗೆ ಜಗಳಕ್ಕೆ ಇಳಿಯುವುದು ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವುದು ದುಸ್ತರವಾಗಿದೆ. ರಾಘವೇಂದ್ರ, ಪ್ರಯಾಣಿಕ

 ರಾತ್ರಿ ಡ್ನೂಟಿಯಲ್ಲಿರುವ ಸಿಬ್ಬಂದಿಗೆ ಈ ಕುರಿತು ಗಮನ ಹರಿಸುವಂತೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ. ಪ್ರಯಾಣಿಕರಿಗೆ ತೊಂದರೆ ನೀಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.ಶಂಕರ ರಾಗಿ, ಎಸಿಪಿ

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next