ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರಿದ್ದ ವಿಮಾನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 30 ನಿಮಿಷ ತಡವಾಗಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಇಂಡಿಗೋ 6ಇ7227 ವಿಮಾನವು ಬೆಂಗಳೂರಿನಿಂದ ಹೊರಟು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿಯಲ್ಲಿ ಬಂದಿಳಿಯಬೇಕಿತ್ತು. ಆದರೆ ನಗರದ ವಿಮಾನ ನಿಲ್ದಾಣದ ಸುತ್ತ ದಟ್ಟ ಮಂಜು ಆವರಿಸಿದ್ದರಿಂದ ವಿಮಾನ ಇಳಿಯಲು ಸಾಧ್ಯವಾಗದೆ ಆಕಾಶದಲ್ಲೇ ನಾಲ್ಕು ಸುತ್ತು ಸುತ್ತಿತು. ನಂತರ 7:57ರ ಸುಮಾರಿಗೆ 30 ನಿಮಿಷದ ಬಳಿಕ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು.
ಒಂದು ವೇಳೆ ದಟ್ಟ ಮಂಜು ಕವಿದ ವಾತಾವರಣ ಇನ್ನೂ 5-10 ನಿಮಿಷ ಮುಂದುವರಿದಿದ್ದರೆ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲು ಯೋಚಿಸಲಾಗಿತ್ತು.
ಇದನ್ನೂ ಓದಿ:ಮಗುವಿನ ಅಳು ನಿಲ್ಲಿಸೋಕೆ ಹೊಸ ಟ್ರಿಕ್
ಈ ವಿಮಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಆಪ್ತ ಕಾರ್ಯದರ್ಶಿ ರೋಹಣ ಬಿರಾದಾರ, ಬೃಹತ್ ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಮತ್ತು ಅವರ ಪತ್ನಿ ಸೇರಿ ಒಟ್ಟು 78 ಪ್ರಯಾಣಿಕರು ಇದ್ದರು.