ಹುಬ್ಬಳ್ಳಿ: ರೈತ ಹಿತ ಕಾಪಾಡುವ ದೃಷ್ಟಿಯಿಂದ ಕೃಷಿ ಮಸೂದೆಗಳನ್ನು ವಾಪಸ್ಸು ಪಡೆಯಲಾಗಿದೆಯೇ ಹೊರತು ಇದರಲ್ಲಿ ಸೋಲು ಗೆಲುವಿನ ಪ್ರಶ್ನೆ ಬರುವುದಿಲ್ಲ. ಮಸೂದೆಗಳ ಜಾರಿಯಲ್ಲಿ ಯಾವುದೇ ಒಣ ಪ್ರತಿಷ್ಠೆಯಿರಲಿಲ್ಲ. ರೈತರ ಒಳಿತಿಗಾಗಿ ಮಸೂದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಾಪಸ್ಸು ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಚುನಾವಣೆಗಳನ್ನು ಮುಂದಿಟ್ಟುಕೊಂಡು ಮಸೂದೆಗಳನ್ನು ವಾಪಸ್ಸು ಪಡೆದಿಲ್ಲ. ಕಾಯ್ದೆಯಲ್ಲಿ ಯಾವುದೇ ಲೋಪ ದೋಷಗಳಿಲ್ಲ. ಮಸೂದೆಗಳ ಬಗ್ಗೆ ಜಾಗೃತಿ ಹಾಗೂ ಅನುಕೂಲತೆಗಳನ್ನು ಜನರಿಗೆ ಮುಟ್ಟಿಸುವುದಾಗಿ ಹಿಂದೆ ನಾವೆಲ್ಲ ಹೇಳಿರುವುದು ನಿಜ. ಆದರೆ ತಡವಾದರೂ ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಪ್ರಧಾನಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಾಯ್ದೆ ವಿರೋಧಿಸಿ ನೂರಾರು ರೈತರು ಸಾವನ್ನಪ್ಪಿದ್ದಾರೆ ಎಂಬುದು ಸರಿಯಲ್ಲ. ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಮಸೂದೆ ವಾಪಸ್ಸು ಪಡೆಯಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಉತ್ತರ ಪ್ರದೇಶದಲ್ಲಿ ಈಗಾಗಲೇ ಬಿಜೆಪಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉತ್ತಮ ಕಾರ್ಯ ಮಾಡಿದ್ದಾರೆ. ಹಿಂದಿಗಿಂತ ಹೆಚ್ಚಿನ ಸ್ಥಾನಗಳು ಲಭಿಸಲಿವೆ. ಅಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವಕ್ಕೆ ಹೆಚ್ಚಿನ ಗೌರವವಿದೆ ಎಂದರು.
ಇದನ್ನೂ ಓದಿ:ಕೃಷಿ ಕಾಯ್ದೆಗಳ ವಾಪಾಸ್; ಅನ್ನದಾತ, ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಜಯ: ಡಿ.ಕೆ. ಶಿವಕುಮಾರ್
ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಹತ್ತು ಬಾರಿ ಯೋಚನೆ ಮಾಡುತ್ತಾರೆ. ಆದರೆ ಇನ್ನೊಬ್ಬರಿಗೆ ಅವಕಾಶ ದೊರೆಯಲಿ ಎನ್ನುವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ. ನಾನು ಹೋದ ಕಡೆಯಲ್ಲೆಲ್ಲಾ ನಮ್ಮ ಯಡಿಯೂರಪ್ಪ ಎನ್ನುವ ಪ್ರೀತಿ ದೊರೆಯುತ್ತಿದೆ. ಇದಕ್ಕಿಂತ ದೊಡ್ಡ ಗೌರವ, ಅಧಿಕಾರ ಮತ್ತೇನು ಬೇಕಾಗಿಲ್ಲ. ವಿಧಾನಪರಿಷತ್ತು ಚುನಾವಣೆ ಮುಗಿದ ನಂತರ ವಿಶ್ರಮಿಸದೆ ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ಹಾನಗಲ್ಲ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಇದು ಒಬ್ಬ ನಾಯಕನಿಗೆ ಸೀಮಿತವಲ್ಲ. ಪಕ್ಷದ ಎಲ್ಲಾ ನಾಯಕರು ಇದರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದರು.