ನವದೆಹಲಿ: ಇವತ್ತು ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐಗೆ ಒಂದುಕಾಲದಲ್ಲಿ ತನ್ನ ಆಟಗಾರರಿಗೆ ಉದಾರವಾಗಿ ನೆರವು ನೀಡಲೂ ಹಣವಿರಲಿಲ್ಲ!
1983ರಲ್ಲಿ ಭಾರತ ತಂಡ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತ್ತು. ಆಗ ತನ್ನ ಆಟಗಾರರನ್ನು ಸನ್ಮಾನಿಸುವುದು ಹೇಗೆ ಅನ್ನುವ ಚಿಂತೆಯಲ್ಲಿ ಬಿಸಿಸಿಐ ಮುಳುಗಿತ್ತು. ಅಂತಹ ಹೊತ್ತಿನಲ್ಲಿ ನೆರವಿಗೆ ಬಂದಿದ್ದು ಪಕ್ಕಾ ಕ್ರಿಕೆಟ್ ಅಭಿಮಾನಿ, ಭಾರತ ರತ್ನ ಲತಾ ಮಂಗೇಶ್ಕರ್.
ತನ್ನ ತಂಡ ಯಾರೂ ಊಹಿಸದ ರೀತಿಯಲ್ಲಿ ವಿಶ್ವಕಪ್ ಗೆದ್ದರೂ, ನಗದು ಬಹುಮಾನ ನೀಡಲು ಹಣವೇ ಇಲ್ಲ. ಅಂತಹ ಬಿಕ್ಕಟ್ಟಿನಲ್ಲಿ ಅಂದಿನ ಕೇಂದ್ರ ಮಂತ್ರಿ ಎನ್‌ಕೆಪಿ ಸಾಳ್ವೆ ಅಧ್ಯಕ್ಷತೆಯ ಬಿಸಿಸಿಐ ಇತ್ತು. ಆಗ ದಿನಕ್ಕೆ ಕೇವಲ 250 ರೂ.ಗಳನ್ನು ಆಟಗಾರರಿಗೆ ದಿನಭತ್ಯೆಯಾಗಿ ನೀಡಲಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ನೀಡಿದ್ದು ಬಿಸಿಸಿಐನ ಇನ್ನೊಬ್ಬ ಮಾಜಿ ಅಧ್ಯಕ್ಷ ರಾಜ್‌ಸಿಂಗ್ ಡುಂಗಾರ್ಪುರ್.
ಇದನ್ನೂ ಓದಿ:ಅವಿವಾಹಿತೆಯಾಗಿ ಉಳಿದಿದ್ದೇಕೆ? ಲತಾ- ರಾಜ್‌ಸಿಂಗ್ ದುಂಗಾರ್ಪುರ್ “ಪ್ರೇಮ್’ ಕಹಾನಿ
ಲತಾ ಅವರ ಸ್ನೇಹಿತೆಯಾಗಿದ್ದರಿಂದ ತಕ್ಷಣ ಆಟಗಾರರಿಗಾಗಿ ಹಾಡಲು ಒಪ್ಪಿಕೊಂಡರು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮೈದಾನ ಕಿಕ್ಕಿರಿದು ತುಂಬಿತ್ತು. ಅದರಿಂದ ಸಂಗ್ರಹವಾದ ಹಣದಿಂದ ವಿಶ್ವಕಪ್ ವಿಜೇತ 14 ಆಟಗಾರರಿಗೆ ತಲಾ 1 ಲಕ್ಷ ರೂ. ಕೊಡಲು ಬಿಸಿಸಿಐಗೆ ಸಾಧ್ಯವಾಯಿತು. ಆ ಕಾಲದಲ್ಲಿ ಒಂದು ಲಕ್ಷ ರೂ. ಅಂದರೆ ದೊಡ್ಡ ಮೊತ್ತವೆನ್ನುವುದನ್ನು ಮರೆಯಬಾರದು. ಮಂಗೇಶ್ಕರ್ ಅಂದು ಬಿಸಿಸಿಐಯನ್ನು ಅವಮಾನದಿಂದ ಪಾರು ಮಾಡಿದ್ದರು. ಅದರ ಸವಿನೆನಪಿಗಾಗಿ ಬಿಸಿಸಿಐ ಅವರ ಮರಣದವರೆಗೂ ಭಾರತದಲ್ಲಿ ಎಲ್ಲೇ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿ; ಮಂಗೇಶ್ಕರ್ ಹೆಸರಿನಲ್ಲಿ ಎರಡು ವಿಐಪಿ ಟಿಕೆಟ್‌ಗಳನ್ನು ಮೀಸಲಾಗಿಟ್ಟಿತ್ತು.
ಕಪ್ಪುಪಟ್ಟಿ ಧರಿಸಿದ ಭಾರತೀಯ ಕ್ರಿಕೆಟಿಗರು: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದರು. ಗಾನ ಕೋಗಿಲೆ, ಲಂತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ತಂಡದ ಆಟಗಾರರು ಶೋಕ ತೋರಿಸಿದ ರೀತಿ ಹೀಗಿತ್ತು.