Advertisement

“ಮಳೆ ಜಾಗರಣೆ’ಮಾಡಿದ ಮೈಸೂರಿಗರು…

01:01 PM Sep 28, 2017 | Team Udayavani |

ಮೈಸೂರು: ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶಃ ನಲುಗಿಹೋಗಿದೆ. ಭಾರೀ ಮಳೆಯ ಪರಿಣಾಮ ನಗರದ ರಾಜಕಾಲುವೆಗಳೆಲ್ಲ ಉಕ್ಕಿ ಹರಿದು, ರಸ್ತೆಗಳೆಲ್ಲ ಕಾಲುವೆಗಳಾಗಿ ಮಾರ್ಪಟ್ಟರೆ, ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಆಯುಧಪೂಜೆ-ದಸರಾ ಹಬ್ಬದ ಸಿದ್ಧತೆಯಲ್ಲಿದ್ದ ಮೈಸೂರಿನ ಜನತೆ ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕುವುದರಲ್ಲೇ ಹೈರಾಣಾಗಿ ಇಡೀ ರಾತ್ರಿ ಜಾಗರಣೆ ಮಾಡುವಂತಾಯಿತು. 

Advertisement

ಮೈಸೂರಿನ ಹೊರವಲಯದಲ್ಲಿರುವ ಲಲಿತಾದ್ರಿಪುರ ಗ್ರಾಮದ ಬಳಿ ಇರುವ ತಿಪ್ಪಯ್ಯನ ಕೆರೆಯನ್ನು ಜಿಲ್ಲಾಡಳಿತ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗಷ್ಟೆ ಅಭಿವೃದ್ಧಿ ಪಡಿಸಿತ್ತು. ಮುಚ್ಚಿಹೋಗಿದ್ದ ರಾಜಕಾಲುವೆ ತೆರವಾದ ನಂತರ ಸುರಿದ ಭಾರಿ ಮಳೆಯಿಂದ ತುಂಬಿ ಜೆ.ಸಿ.ನಗರದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ.ನಗರ ಬಹುತೇಕ ಜಲಾವೃತವಾಗಿ ಜೆ.ಸಿ.ನಗರದ ರಸ್ತೆಗಳಲ್ಲಿ ಕಾಲುವೆಯಂತೆ ನೀರು ಉಕ್ಕಿ ಹರಿಯಿತು.

ಚಾಮುಂಡಿ ಬೆಟ್ಟದ ಮೇಲ್ಭಾಗದಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಬೆಟ್ಟದ ತಪ್ಪಲಿನಲ್ಲಿರುವ ತಾವರೆಕೆರೆ ತಲುಪಿ ಭರ್ತಿಯಾದ ಪರಿಣಾಮ ಕೆರೆ ಕೋಡಿ ಬಿದ್ದು, ನೀರು ಜೆ.ಸಿ.ನಗರ ಬಡಾವಣೆಗೆ ಹರಿದು ಬರುತ್ತಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭಾರೀ ಮಳೆಗೆ ಶ್ರೀರಾಂಪುರ ಬಡಾವಣೆಯ ಹಲವು ಮನೆಗಳು ನೀರಿನಿಂದ ಜಲಾವೃತವಾಗಿದ್ದವು. 

ವಿಜಯನಗರದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ ಎದುರಿನ ರಸ್ತೆ ಕಾಲುವೆಯಾಗಿ ಮಾರ್ಪಟ್ಟಿತ್ತು. ಇತ್ತ ಹುಣಸೂರು ರಸ್ತೆ ಮೇಲೂ ಮರ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಜೆಸಿಬಿ ಬಳಸಿ ಮರಗಳನ್ನು ರಸ್ತೆಗಳಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಮನೆಗಳಿಗೆ ನುಗ್ಗಿದ ನೀರು: ನಗರದ ತಗ್ಗು ಪ್ರದೇಶಗಳಾದ ಕನಕಗಿರಿ, ಗುಂಡೂರಾವ್‌ ನಗರ, ವಿದ್ಯಾರಣ್ಯಪುರಂ, ದಟ್ಟಗಳ್ಳಿ, ರಾಜೀವ್‌ ನಗರ, ಗಾಂಧಿನಗರ, ಚಾಮುಂಡಿ ಪುರಂ ಸೇರಿದಂತೆ ಹಲವು ಬಡಾವಣೆಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು. ವಿದ್ಯುತ್‌ ಕಡಿತದಿಂದ ಕತ್ತಲೆಯಲ್ಲಿಯೇ ನೀರು ಹೊರ ಹಾಕುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಜನತೆ ಸಂಕಷ್ಟಕ್ಕೆ ಸಿಲುಕಿದ್ದರೂ ನಗರಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  

Advertisement

ಅಧಿಕಾರಿಗಳ ಪರಿಶೀಲನೆ: ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ರಂದೀಪ್‌ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡ ಮಳೆಯಿಂದ ಜಲಾವೃತಗೊಂಡಿದ್ದ ಪಡುವಾರಹಳ್ಳಿ, ಬೋಗಾದಿ, ಆನಂದನಗರ, ಅರವಿಂದ ನಗರ, ಶ್ರೀರಾಂಪುರ, ಕನಕಗಿರಿ, ಎಲೆತೋಟ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಜಿಲ್ಲಾಧಿಕಾರಿ ರಂದೀಪ್‌ ಮಾತನಾಡಿ, ನಗರದಲ್ಲಿ 13 ಸೆಂಟಿಮೀಟರ್‌ನಷ್ಟು ದಾಖಲೆ ಮಳೆಯಾಗಿದೆ. ಅವೈಜಾnನಿಕ ಮೋರಿ ನಿರ್ಮಾಣ, ಹಾಗೂ ರಾಜಕಾಲುವೆಗಳನ್ನು ಮುಚ್ಚಿರುವುದೇ ಇದಕ್ಕೆ ಕಾರಣವಾಗಿದೆ. ದಸರಾ ಮುಗಿದ ಮರುದಿನವೇ ಈ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.  ಮೇಯರ್‌ ಎಂ.ಜೆ.ರವಿಕುಮಾರ್‌, ಪಾಲಿಕೆ ಆಯುಕ್ತ ಜೆ.ಜಗದೀಶ್‌, ಮೈಸೂರು ತಾಲೂಕು ತಹಶೀಲ್ದಾರ್‌ ರಮೇಶ್‌ ಬಾಬು, ಪಾಲಿಕೆ ಅಧೀಕ್ಷಕ ಎಂಜಿನಿಯರ್‌ ಸುರೇಶ್‌ಬಾಬು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಜನತೆ ಸ್ಥಳಾಂತರಕ್ಕೆ ಬೋಟ್‌ಗಳ ಬಳಕೆ: ಶ್ರೀರಾಂಪುರ 2ನೇ ಹಂತ, ಕನಕಗಿರಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ರಸ್ತೆ ಮೇಲೆ ನಿಂತಿದ್ದ ನೀರಿನಲ್ಲಿ ಬೋಟ್‌ಗಳ ಸಹಾಯದಿಂದ ಸುಮಾರು 25ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದರು.

ವರುಣನ ಆರ್ಭಟಕ್ಕೆ ನಗರದ ಶ್ರೀರಾಂಪುರ, ಬೋಗಾದಿ, ಗುಂಡೂರಾವ್‌ ನಗರ, ಕನಕಗಿರಿ, ಹೈವೇ ವೃತ್ತ ಸೇರಿದಂತೆ ಹಲವು ಬಡಾವಣೆಗಳಲ್ಲಿ ನೂರಾರು ಮರಗಳು ಧರೆಗುರುಳಿವೆ. ಆದರೆ ಮಳೆ ಬಂದ ಕೂಡಲೇ ವಿದ್ಯುತ್‌ ಸಂಪರ್ಕ ಕಡಿತ‌ಗೊಂಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next