ಚಂಡೀಗಢ: ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಂಡಿರುವ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್‌ಪಾಲ್ ಸಿಂಗ್ ಉತ್ತರಾಖಂಡದಲ್ಲಿ ಅವಿತಿರುವ ಸಾಧ್ಯತೆ ಇದೆ.
ಹೀಗಾಗಿ, ಈ ರಾಜ್ಯದಲ್ಲೂ ಶೋಧ ಕಾರ್ಯ ನಡೆಸಲಾಗಿದೆ. ಜತೆಗೆ ನೇಪಾಳ ಪ್ರವೇಶ ಮಾಡದಂತೆ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸಶಸ್ತ್ರ ಸೀಮಾ ಬಲದ ತಂಡವನ್ನು ಕಟ್ಟೆಚ್ಚರ ಸ್ಥಿತಿಯಲ್ಲಿ ಇರಿಸಲಾಗಿದೆ.
ಈ ನಡುವೆ, ಆತನ ಮೊಬೈಲ್ ಲೊಕೇಷನ್ ಪ್ರಕಾರ ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆ ರಾಜ್ಯದ ಪೊಲೀಸರೂ ಶೋಧ ಕಾರ್ಯ ಶುರು ಮಾಡಿದ್ದಾರೆ. ಇದೇ ವೇಳೆ, ಪಂಜಾಬ್ ಪೊಲೀಸರು ವಿವಿಧೆಡೆ ಶೋಧ ಕಾರ್ಯ ನಡೆಸಿದ ವೇಳೆ ಖಲಿಸ್ತಾನ ಬೆಂಬಲಿಗನೊಬ್ಬನ ಬಳಿಯಿಂದ ಖಲಿಸ್ತಾನ ಕರೆನ್ಸಿ, ಧ್ವಜ, ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡುವ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಖ್ ತಣ್ತೀಪಾಲಕನೇ ಅಲ್ಲ!: ಅಮೃತ್‌ಪಾಲ್ ಬಗ್ಗೆ ಗುಪ್ತಚರ ವರದಿಯೊಂದು ಸಿದ್ಧವಾಗಿದ್ದು, ಅದರಲ್ಲಿ ಆತನ ಮತನಿಷ್ಠೆಯನ್ನೇ ಪ್ರಶ್ನಿಸುವಂತಹ ಹಲವು ಪ್ರಮುಖ ವಿಚಾರಗಳು ಪ್ರಸ್ತಾಪವಾಗಿವೆ. ಆತ ಸಿಖ್ ತಣ್ತೀಗಳನ್ನೇನು ಶ್ರದ್ಧೆಯಿಂದ ಪಾಲಿಸುತ್ತಿರಲಿಲ್ಲ, ಈಗಾತ ಭಿಂದ್ರನ್‌ವಾಲೆ ರೀತಿ ತನ್ನನ್ನು ಬಿಂಬಿಸಿಕೊಳ್ಳುತ್ತಿದ್ದಾನೆ ಎಂದು ಗುಪ್ತಚರ ವರದಿಗಳಲ್ಲಿ ಹೇಳಲಾಗಿದೆ.
ಸದ್ಯ ಇಂಗ್ಲೆಂಡ್ ಪ್ರಜೆಯಾಗಿರುವ ಕಿರಣ್‌ದೀಪ್ ಕೌರ್‌ಳನ್ನು ಈ ವರ್ಷ ಫೆಬ್ರವರಿಯಲ್ಲಿ ನಡೆದ ಗುಪ್ತ ಕಾರ್ಯಕ್ರಮದಲ್ಲಿ ಅಮೃತ್‌ಪಾಲ್ ಸಿಂಗ್ ವಿವಾಹವಾಗಿದ್ದಾನೆ. ತನ್ನ ಪತ್ನಿಗೆ ಹೊಡೆಯುವ ಸ್ವಭಾವ ಹೊಂದಿರುವ ಆತ, ಆಕೆಯನ್ನು ಬಂಧಿಸಿಟ್ಟಿರುವ ಸಾಧ್ಯತೆಯಿದೆ. ಆತ ಆಗಾಗ ಥಾಯ್ಲೆಂಡ್‌ಗೂ ಹೋಗುತ್ತಿದ್ದ. ಅಲ್ಲಿ ಆತನಿಗೆ ಇನ್ನೊಬ್ಬ ಪತ್ನಿಯಿರುವ ಸಾಧ್ಯತೆಯಿದೆ ಎಂಬ ಅಂಶವೂ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ.