ಮೈಸೂರು: ಆಷಾಢ ಮಾಸದ ನಾಲ್ಕನೇ ಹಾಗೂ ಕಡೆಯ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಐತಿಹಾಸಿಕ ಪ್ರವಾಸಿತಾಣ ಚಾಮುಂಡಿಬೆಟ್ಟದಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ವಿವಿಧೆಡೆಗಳಿಂದ ಬೆಟ್ಟಕ್ಕೆ ಆಗಮಿಸಿದ ಭಕ್ತರು ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ಪುನೀತರಾದರು.
ಮೈಕೊರೆಯುವ ಚಳಿ ಹಾಗೂ ತುಂತುರು ಮಳೆಯ ನಡುವೆಯೂ ಮುಂಜಾನೆಯಿಂದಲೇ ಬೆಟ್ಟಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕಳೆದ ಮೂರು ವಾರದಂತೆ ಕೊನೆಯ ಶಕ್ರವಾರವು ಸಹ ಪ್ರಾತಃಕಾಲ 3.30ರಿಂದಲೇ ಚಾಮುಂಡೇಶ್ವರಿ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಅರ್ಚನೆ ಹಾಗೂ ಮಹಾಮಂಗಳಾರತಿ ಸಲ್ಲಿಸಿ, ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಸಾರ್ವಜಿನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಅಮವಾಸ್ಯೆ ಪೂಜೆ: ಕಡೆಯ ಆಷಾಢ ಶುಕ್ರವಾರದ ಜತೆಗೆ ಅಮವಾಸ್ಯೆ ಸಹ ಎದುರಾಗಿದ್ದ ಕಾರಣಕ್ಕೆ ಶುಕ್ರವಾರ ಸಂಜೆ ಚಾಮುಂಡೇಶ್ವರಿ ಅಮವಾಸ್ಯೆ ಪೂಜೆಯನ್ನು ಮಾಡಲಾಯಿತು. ಹೀಗಾಗಿ ಶುಕ್ರವಾರ ಸಂಜೆ ನಂತರ ದೇವಿಯ ದರ್ಶನ ಪಡೆದ ಭಕ್ತರು ಆಷಾಢ ಶುಕ್ರವಾರದ ಜತೆಗೆ ಅಮವಾಸ್ಯೆ ದರ್ಶನ ಸಹ ಪಡೆದು ದೇವಿಯ ಕೃಪೆಗೆ ಪಾತ್ರರಾದರು. ಅಲ್ಲದೆ ಭಕ್ತರು ಭೀಮನ ಅಮವಾಸ್ಯೆ ಇರುವುದರಿಂದ ಭಕ್ತರು ಶನಿವಾರವೂ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಮಾಡಿಸುತ್ತಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದರು.
ಸಿಂಹವಾಹಿನಿ ಅಲಂಕಾರ: ಆಷಾಢಮಾಸದ ಪ್ರತಿ ಶುಕ್ರವಾರದಂದು ಚಾಮುಂಡಿ ತಾಯಿಗೆ ಒಂದೊಂದು ಅಲಂಕಾರವನ್ನು ಮಾಡಲಾಗುತ್ತದೆ. ಅದರಂತೆ ಕಡೆ ಆಷಾಢ ಶುಕ್ರವಾರದ ಪ್ರಯುಕ್ತ ದೇವಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ಇನ್ನು ಎಂದಿನಂತೆ ದೇವಸ್ಥಾನದ ಇಡೀ ಆವರಣ ವಿವಿಧ ಬಗೆಯೆ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಮೈಸೂರಿನ ಮಧು ಎಂಬುವರು ದೇವಾಲಯದ ಗರ್ಭಗುಡಿಯಿಂದ ಮುಖ್ಯದ್ವಾರದವರೆಗೆ ಹೂವಿನ ಅಲಂಕಾರವನ್ನು ಮಾಡಿಸಿದ್ದರು.
ಉಚಿತ ಬಸ್‌ವ್ಯವಸ್ಥೆ: ಪ್ರತಿವಾರದಂತೆ ಕಡೆಯ ಆಷಾಢ ಶುಕ್ರವಾರದಂದು ಸಹ ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್‌ನಿಂದ ಚಾಮುಂಡಿ ಬೆಟ್ಟ-ಚಾಮುಂಡಿಬೆಟ್ಟದಿಂದ ಹೆಲಿಪ್ಯಾಡ್‌ವರೆಗೆ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗುತ್ತು. ಹೀಗಾಗಿ ತಡರಾತ್ರಿ 3.30ರಿಂದಲೇ ಬೆಟ್ಟಕ್ಕೆ ತೆರಳಿದ ಭಕ್ತಾಧಿಗಳು ಹ್ಯಾಲಿಪ್ಯಾಡ್‌ನಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿ ಸಾರಿಗೆ ಬಸ್ ಮೂಲಕ ಬೆಟ್ಟಕ್ಕೆ ತೆರಳಿದರು. ಕೆಲವು ಭಕ್ತರು ಎಂದಿನಂತೆ ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ತೆರಳಿ, ದೇವಿಯ ದರ್ಶನ ಪಡೆದರು.
ಪ್ರಸಾದ ವಿನಿಯೋಗ: ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರತಿವಾರದಂತೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು. ಕಡೆಯ ಆಷಾಢ ಶುಕ್ರವಾರದ ಜತೆಗೆ ಸಚಿವ ಸಾ.ರಾ.ಮಹೇಶ್ ಅವರ ಜನ್ಮದಿನದ ಪ್ರಯುಕ್ತ ಮೈಸೂರಿನ ಕೆ.ಜಿ.ಕೊಪ್ಪಲಿನ ಭೈರವಕುಮಾರ್ ಗ್ರೂಪ್ಸ್ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು. ಬೆಳಗ್ಗೆ 5.30ರಿಂದ ರಾತ್ರಿ 8ಗಂಟೆವರೆಗೂ ನಡೆದ ಅನ್ನಸಂತರ್ಪಣೆಯಲ್ಲಿ ಭಕ್ತರಿಗೆ ಉಪ್ಪಿಟ್ಟು, ಕೇಸರಿಬಾತ್, ಶಾವಿಗೆಬಾತ್, ಟೊಮೆಟೊ ಬಾತ್, ವಾಂಗೀಬಾತ್, ತರಕಾರಿ ಪಲಾವ್, ಪೊಂಗಲ್, ಮೊಸರನ್ನದ ಜತೆಗೆ 1 ಲಕ್ಷ ಲಡ್ಡು ವಿತರಿಸಲಾಯಿತು. ಅಡುಗೆ ತಯಾರಿಕೆ ಹಾಗೂ ವಿತರಿಸುವ ಕಾಯಕದಲ್ಲಿ ಅಂದಾಜು 120 ಮಂದಿ ಭಾಗವಹಿಸಿದ್ದರು.
ದರ್ಶನ ಪಡೆದ ಗಣ್ಯರು: ಆಷಾಢ ಮಾಸದ ಕಡೆಯ ಶುಕ್ರವಾರದ ಪ್ರಯುಕ್ತ ವಿವಿಧ ಪಕ್ಷಗಳ ರಾಜಕೀಯ ನಾಯಕರು ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು. ಪ್ರಮುಖವಾಗಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಸ್.ಎ.ರಾಮದಾಸ್, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ, ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಸೇರಿದಂತೆ ಇನ್ನಿತರರು ನಾಡದೇವತೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.