Advertisement

400 ವರ್ಷ ಹಳೆಯ ಬ್ರಹ್ಮರಥಕ್ಕೆ  ಕೊನೆಯ ಜಾತ್ರೆ

11:08 AM Nov 30, 2018 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಸಹಸ್ರಾರು ಭಕ್ತರ ಸಮ್ಮುಖ ಶ್ರದ್ಧಾಭಕ್ತಿಯಿಂದ ಎಳೆಯುವ ಬ್ರಹ್ಮರಥಕ್ಕೆ 400ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ತೇರನ್ನು ಈ ಬಾರಿಯ ಜಾತ್ರೆಯಲ್ಲಿ ಕೊನೆಯ ಬಾರಿಗೆ ಎಳೆಯಲಾಗುತ್ತಿದ್ದು, ಬಳಿಕ ಅದು ಇತಿಹಾಸದ ಪುಟಗಳನ್ನು ಸೇರಲಿದೆ.

Advertisement

ಐತಿಹಾಸಿಕ ಹಿನ್ನೆಲೆ ಹೊಂದಿದ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿದ ಕಾರಣ ಇದರ ಬದಲಿಗೆ 1.99 ಕೋಟಿ ರೂ. ವೆಚ್ಚದಲ್ಲಿ ನೂತನ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದೆ. ಈ ಬಾರಿ ಜಾತ್ರೆಯಲ್ಲಿ ಹಳೆಯ ತೇರನ್ನೇ ಎಳೆಯಲಾಗುತ್ತಿದೆ. ಐತಿಹಾಸಿಕ ರಥವನ್ನು ಕೊನೆಯ ಬಾರಿಗೆ ಎಳೆಯುವ ಮೂಲಕ ಇತಿಹಾಸವೊಂದು ಸೃಷ್ಟಿಯಾಗಲಿದೆ.

ಇಲ್ಲಿನ ಬ್ರಹ್ಮರಥ ಎಷ್ಟು ಪ್ರಾಚೀನ ಎಂದು ನಿಖರವಾಗಿ ತಿಳಿದಿಲ್ಲ. 400 ವರ್ಷಗಳ ಹಿಂದಿನದ್ದೆಂದು ತಿಳಿಯುತ್ತದೆ. ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ (ಕ್ರಿ.ಶ. 1582 -1629) ರಥ ನಿರ್ಮಿಸಿ ಕೊಟ್ಟಿದ್ದ ನೆಂಬುದು ದಾಖಲೆಯಿಂದ ತಿಳಿಯುತ್ತದೆ. 1923ರಲ್ಲಿ ಗಣಪತಿ ರಾವ್‌ಗಳ ಸಂಪಾದಿಸಿದ ಪ್ರಾಚೀನ ಇತಿಹಾಸ ದಾಖಲೆಯಲ್ಲಿ ಈ ಉಲ್ಲೇಖವಿದೆ. ಇದೇ ಕೆಳದಿ ವಂಶಸ್ಥ ವೆಂಕಟಪ್ಪ ನಾಯಕ ಕುಕ್ಕೆ ದೇಗುಲಕ್ಕೆ ಸಮಾನ ಅವಧಿಯಲ್ಲಿ ಕೊಟೇಶ್ವರ ದೇಗುಲಕ್ಕೂ ರಥ ನೀಡಿದ ಕುರಿತು ಸಂಶೋಧನ ಗ್ರಂಥಗಳಲ್ಲಿ ಉಲ್ಲೇಖವಿದೆ.

ಸ್ಯಂದನ ರಥವಿದು
ಪ್ರತಿಮಾಶಾಸ್ತ್ರ, ಚಿತ್ರಕಲೆ, ಜ್ಯಾಮಿತಿಕ ಅಂಶ, ಪೌರಾಣಿಕ ಸನ್ನಿವೇಶಗಳ ಹಿನ್ನೆಲೆ ತಿಳಿದ ಶಿಲ್ಪಿಗಳಿಂದ ಈ ರಥದ ರಚನೆಯಾದಂತಿದೆ. ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ವಿಧಿ-ವಿಧಾನ, ನಿಯಮ ಅನುಸರಿಸಿ ರಚಿಸಿದ್ದಾಗಿದೆ. ಆರು ಚಕ್ರ ಹೊಂದಿರುವ ಬ್ರಹ್ಮರಥವನ್ನು ಶಾಸ್ತ್ರೀಯವಾಗಿ ಸ್ಯಂದನ ರಥವೆನ್ನುವರು. ಅಡಿಪಾಯ, ಅಡಿಸ್ಥಾನ, ಮಂಟಪ, ಗೋಪುರ, ಶಿಖರ ಇವು ರಥದ ಪ್ರಮುಖ ಭಾಗಗಳು. ಅಡಿಪಾಯದಿಂದ ಮಂಟಪದವರೆಗಿನ ಒಟ್ಟು ಭಾಗ ಸ್ಥಿರ ರಥ. ಚಕ್ರದ ಎತ್ತರ 8 ಅಡಿ 6 ಅಂಗುಲ. ಒಂದು ಚಕ್ರದಲ್ಲಿ 5 ಬೃಹತ್‌ ಮರದ ತುಂಡುಗಳು ಇವೆ. 

ರಥದ ಚಕ್ರಗಳ ಅಗಲ 21 ಅಂಗುಲ. ರಥದ ಚಕ್ರದ ದಪ್ಪ 10 ಅಂಗುಲ ಎಂಬ ಲೆಕ್ಕವಿದೆ. ಬ್ರಹ್ಮರಥದಲ್ಲಿ ಪ್ರಪಂಚದ ಎಲ್ಲ ರೀತಿಯ ಜೀವರಾಶಿಗಳ ಚಿತ್ರಗಳ ಕೆತ್ತನೆಯಿದೆ. ಈ ಕೆತ್ತನೆಗಳು ಕಾಲಾಂತರದಲ್ಲಿ ನಶಿಸಿ ಹೋಗಿದ್ದು, ಬಹುತೇಕ ಚಿತ್ರಗಳು ಈಗ ಗೋಚರಿಸುತ್ತಿಲ್ಲ. ರಥದ ಮರದ ಚಕ್ರಗಳು ಇತರೆ ಬಿಡಿಭಾಗಗಳು ಬಿರುಕು ಪಡೆದು ಶಿಥಿಲಾವಸ್ಥೆಯ ಹಂತಕ್ಕೆ ತಲುಪಿದೆ. ನಡುವೆ ಒಮ್ಮೆ ರಥದ ದುರಸ್ತಿಯೂ ನಡೆದಿದೆ.

Advertisement

ಮೂಲನಿವಾಸಿಗಳ ಹೊಣೆ
ಬ್ರಹ್ಮರಥವನ್ನು ಜಾತ್ರೆಗೆ ಸಿದ್ಧಪಡಿಸುವುದು ಮತ್ತು ಸಂರಕ್ಷಿಸಿಡುವುದು ಆದಿವಾಸಿ ಮಲೆಕುಡಿಯ ಜನಾಂಗದವರ ಪಾರಂಪರಿಕ ಹೊಣೆಗಾರಿಕೆ. ಹಿಂದೆ ಈ ಬ್ರಹ್ಮರಥ ಸಂರಕ್ಷಣೆಯ ಹೊದಿಕೆ ಮಾಡಲು ಸಾಧ್ಯವಿಲ್ಲದಷ್ಟು ಎತ್ತರವಿತ್ತು. ಕೆಲ ಶತಮಾನಗಳ ಹಿಂದೆ ಇದರ ಎತ್ತರವನ್ನು ತಗ್ಗಿಸಿ, ಸಂರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾರ್ಚ್‌ ತಿಂಗಳಲ್ಲಿ ನೂತನ ಬ್ರಹ್ಮರಥ ಹಸ್ತಾಂತರ
ದೇಗುಲದ ಪ್ರಶ್ನೆ ವೇಳೆ ಈಗಿನ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪುತ್ತಿರುವುದರಿಂದ ನೂತನ ರಥ ಹೊಂದುವ ಕುರಿತು ಕಂಡುಬಂದಿತ್ತು. ಅದರಂತೆ ಬಿಡದಿ ರಿಯಾಲಿಟಿ ವೆಂಚರ್ ಫೋರ್‌ ಗ್ರೂಪ್‌ ಸಂಸ್ಥೆಯ ಪಾಲುದಾರರಾದ ಮುತ್ತಪ್ಪ ರೈ ಮತ್ತು ಅಜಿತ್‌ ರೈ ನೂತನ ಬ್ರಹ್ಮರಥ ನಿರ್ಮಿಸಿಕೊಡುತ್ತಿದ್ದಾರೆ. ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಬ್ರಹ್ಮರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂದಿನ ಮಾರ್ಚ್‌ ತಿಂಗಳಲ್ಲಿ ನೂತನ ಬ್ರಹ್ಮರಥ ಸಿದ್ಧಗೊಂಡು ದೇಗುಲಕ್ಕೆ ಹಸ್ತಾಂತರಗೊಳ್ಳಲಿದೆ.

ಪ್ರಗತಿಯಲ್ಲಿದೆ
ನೂತನ ಬ್ರಹ್ಮರಥ ರಚನೆ ಕಾರ್ಯ ಪ್ರಗತಿಯಲ್ಲಿದೆ. ಈ ಬಾರಿಯ ಚಂಪಾ ಷಷ್ಠಿಗೆ ಈಗಿನ ಬ್ರಹ್ಮರಥವನ್ನು ಎಳೆಯಲಾಗುತ್ತಿದೆ. ಮಾರ್ಚ್‌ ಅಂತ್ಯಕ್ಕೆ ನೂತನ ಬ್ರಹ್ಮರಥವನ್ನು ದೇವಸ್ಥಾನಕ್ಕೆ ಹಸ್ತಾಂತರಿಸುವ ಕುರಿತು ಶಿಲ್ಪಿಗಳಿಂದ ಭರವಸೆ ದೊರಕಿದೆ. ಮುಂದೆ ಧಾರ್ಮಿಕ ವಿಧಾನಗಳ ಮೂಲಕ ಸ್ವೀಕಾರ ಕಾರ್ಯ ನಡೆಯಲಿದೆ.
-ನಿತ್ಯಾನಂದ ಮುಂಡೋಡಿ
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next