Advertisement

ಕೊನೆಯ ದಿನ ರಂಗೇರಿದ ಪ್ರಚಾರ

12:09 PM May 11, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಗುರುವಾರ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಾಯಕರು ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.

Advertisement

ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೇಂದ್ರ ಸಚಿವರಾದ ಅನಂತಕುಮಾರ್‌, ಪಿಯೂಶ್‌ ಗೋಯಲ್‌, ನಿರ್ಮಲಾ ಸೀತಾರಾಮನ್‌, ಡಿ.ವಿ.ಸದಾನಂದಗೌಡ, ಜೆಡಿಎಸ್‌ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಪರವಾಗಿ ಸಚಿವರಾದ ಜಾರ್ಜ್‌, ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌ ಪ್ರಚಾರ ನಡೆಸಿದರು.

ಎಚ್‌ಡಿಕೆ ಪ್ರಚಾರ: ಜೆಡಿಎಸ್‌ ಪರವಾಗಿ ನಗರದಲ್ಲಿ ಗುರುವಾರ ಕೊನೇ ಹಂತದ ಪ್ರಚಾರ ಕೈಗೊಂಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅಂತಿಮ ಕ್ಷಣದಲ್ಲಿ ಭಾವನಾತ್ಮಕವಾಗಿ ಮಾತನಾಡುವ ಮೂಲಕ ಮತ ಗಳಿಕೆಯ ತಂತ್ರ ಮಾಡಿದ್ದಾರೆ.

ಜ್ವರದ ನಡುವೆಯೂ ರಾಜರಾಜೇಶ್ವರಿನಗರ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಾದ ಜಿ.ಎಚ್‌.ರಾಮಚಂದ್ರ, ಅಲ್ತಾಫ್ ಖಾನಂ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಕುಮಾರಸ್ವಾಮಿ, ನಾನು ಗೆದ್ದು ಬದುಕಿದರೆ ನಿಮಗಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ.

ಜೆಡಿಎಸ್‌ ಅಭ್ಯರ್ಥಿಗಳು ಗೆದ್ದರೆ ನಾನು ಗೆದ್ದಂತೆ ಎಂದು ಹೇಳಿದ ಅವರು, ಇತರೆ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ದುಡ್ಡು ಹಂಚುತ್ತಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿಗಳೂ ದುಡ್ಡು ಕೊಡಿ ಎಂದು ಬಂದು ಕುಳಿತಿದ್ದಾರೆ.

Advertisement

ಅವರಿಗೆಲ್ಲಾ ಎಲ್ಲಿಂದ ಹಣ ತಂದುಕೊಡಲಿ? ಚಂದಾ ಎತ್ತಿ ಕೊಡಬೇಕಷ್ಟೆ. ಆದ್ದರಿಂದ ಒಂದು ದಿನದ ಹೊಟ್ಟೆ ತುಂಬಿಸುವ ಅಭ್ಯರ್ಥಿಗಳು ನೀಡುವ ಹಣಕ್ಕಾಗಿ ಮತ ಹಾಕದೆ ಜೀವನ ಪೂರ್ತಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡುವ ಜೆಡಿಎಸ್‌ಗೆ ಮತ ಹಾಕಿ ಎಂದು ಮನವಿ ಮಾಡಿದರು.

ಜಮೀರ್‌ ಶಕ್ತಿ ಪ್ರದರ್ಶನ: ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದು ಹೋದ ಬೆನ್ನಲ್ಲೇ ಕಾಂಗ್ರೆಸ್‌ ಆಭ್ಯರ್ಥಿ ಮಾಜಿ ಸಚಿವ ಜಮೀರ್‌ ಅಹಮದ್‌ ಸಂಗಂ ವೃತ್ತದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿ ಜೆಡಿಎಸ್‌ ಹಾಗೂ ಬಿಜೆಪಿ ವಿರುದ್ಧ ವಾಗಾœಳಿ ನಡೆಸಿದರು. ಮಾಜಿ ಸಂಸದ ಎಚ್‌.ಟಿ.ಸಾಂಗ್ಲಿಯಾನ, ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಹರ್ಷದ್‌ ಜಮೀರ್‌ ಪರ ಮತಯಾಚನೆ ಮಾಡಿದರು.

ಸಚಿವ ರಾಮಲಿಂಗಾರೆಡ್ಡಿ ಚಿಕ್ಕಪೇಟೆಯಲ್ಲಿ ಆರ್‌.ವಿ.ದೇವರಾಜ್‌ ಪರ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು. ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್‌, ರೋಷನ್‌ಬೇಗ್‌ ತಮ್ಮ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.

ಬಿಜೆಪಿ ಪ್ರಚಾರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶಾಂತಿನಗರ ಕ್ಷೇತ್ರದ ಅಭ್ಯರ್ಥಿ ವಾಸುದೇವಮೂರ್ತಿ ಪರ ಪ್ರಚಾರ ನಡೆಸಿದರು. ಸ್ಥಳೀಯ ಪಾಲಿಕೆ ಸದಸ್ಯರು, ಮುಖಂಡರಾದ ಎಚ್‌.ಎ.ಆನಂದ್‌ ಮತ್ತಿತರರು  ಉಪಸ್ಥಿತರಿದ್ದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರಬಾಬು, ಗೋವಿಂದರಾಜನಗರದ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಮಾಡಿದರು. ಅನಂತಕುಮಾರ್‌ ಅವರು ಬಿಟಿಎಂ ಲೇ ಔಟ್‌ ಅಭ್ಯರ್ಥಿ ಲಲ್ಲೇಶ್‌ರೆಡ್ಡಿ ಪರ ಪ್ರಚಾರ ಮಾಡಿದರು.

ಆರೋಗ್ಯ ಸಮಸ್ಯೆ ನಡುವೆಯೂ ಜೆಡಿಎಸ್‌ಗೆ 113 ಸ್ಥಾನಗಳನ್ನು ತಂದುಕೊಡಲು ಹೋರಾಟ ಮಾಡುತ್ತಿದ್ದೇನೆ. ಈ ನಿಮ್ಮ ಕುಮಾರಸ್ವಾಮಿ ಬದುಕಬೇಕು ಎಂದಿದ್ದರೆ ಈ ಬಾರಿ ಜೆಡಿಎಸ್‌ ಗೆಲ್ಲಿಸಿ. ನನ್ನನ್ನು ಗೆಲ್ಲಿಸಿ ಬದುಕಿಸಿದರೆ ನಿಮ್ಮನ್ನು ಉಳಿಸುತ್ತೇನೆ. ನನ್ನನ್ನು ಬದುಕಿಸುವ ಶಕ್ತಿ ನಿಮ್ಮಲ್ಲಿ (ಮತದಾರರು) ಮಾತ್ರವಿದೆ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next