Advertisement

ಆಧಾರ್‌ ಜೋಡಣೆಗೆ ನಾಳೆ ಕೊನೆಯ ದಿನ,ಮತ್ತೆ ದಂಡ

05:30 AM Jul 30, 2017 | Team Udayavani |

ಬೆಂಗಳೂರು: ಆದಾಯ ತೆರಿಗೆ ಪಾವತಿ ವರದಿ ಸಲ್ಲಿಕೆಗೆ ಕೇವಲ ಎರಡು ದಿನಗಳು ಬಾಕಿ ಇರುವಂತೆಯೇ ಆಧಾರ್‌ ನೋಂದಣಿ ಕೇಂದ್ರಗಳಿಗೆ ಜನ ಅಕ್ಷರಶಃ ಮುಗಿಬಿದ್ದಿದ್ದಾರೆ. ಏಕಾಏಕಿ ಉಂಟಾದ ಈ ಜನಸಂದಣಿ ನಿರ್ವಹಣೆಗೆ ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಾದೇಶಿಕ ಕಚೇರಿ ಹರಸಾಹಸ ಮಾಡುತ್ತಿದೆ.

Advertisement

ಆದಾಯ ವರದಿ ಸಲ್ಲಿಕೆ (ಐಟಿ ರಿಟರ್ನ್ಸ್)ಗೆ ಜುಲೈ 31 ಕೊನೆಯ ದಿನ. ಆದರೆ, ವರದಿ ಸಲ್ಲಿಕೆಗೆ ಪಾನ್‌ ಸಂಖ್ಯೆಯೊಂದಿಗೆ “ಆಧಾರ್‌’ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯ. ಇಲ್ಲದಿದ್ದರೆ, ವರದಿ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಆಧಾರ್‌ಗೆ ದಿಢೀರ್‌ ಭಾರಿ ಬೇಡಿಕೆ ಬಂದಿದೆ. ಇದಕ್ಕಾಗಿ ಜನ ಕಳೆದ ಒಂದು ವಾರದಿಂದ ಬೆಂಗಳೂರು ಒನ್‌ ಸೇರಿದಂತೆ ಕಾಯಂ ನೋಂದಣಿ ಕೇಂದ್ರಗಳತ್ತ ಮುಗಿಬಿದ್ದಿದ್ದಾರೆ.

ಪ್ರತಿ ನೋಂದಣಿ ಕೇಂದ್ರದಲ್ಲಿ ಇಬ್ಬರು ಸಿಬ್ಬಂದಿ ಇದ್ದರೆ, ಆ ಕೇಂದ್ರದ ಮುಂದೆ ನೂರಾರು ಜನ ಸಾಲುಗಟ್ಟಿ ನಿಂತಿರುತ್ತಾರೆ. ಈ ಪೈಕಿ “ಆಧಾರ್‌’ ಗಿಟ್ಟಿಸಿಕೊಳ್ಳುವವರ ಸಂಖ್ಯೆ 20ರಿಂದ 30 ಜನ ಮಾತ್ರ. ಕೆಲವರಿಗೆ ಆಧಾರ್‌ ಬದಲಿಗೆ ಟೋಕನ್‌ ಸಿಗುತ್ತಿವೆ! ಇದಕ್ಕೂ ನಿರ್ಬಂಧ ವಿಧಿಸಿದ್ದು, ನಿತ್ಯ 40 ಟೋಕನ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. 

ಉಳಿದವರಿಗೆ “ನಾಳೆ ಬಾ’ ಉತ್ತರ ಸಿಗುತ್ತಿದೆ. ಇದರಿಂದ ಜನ ನಿತ್ಯ ನೋಂದಣಿ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. ಕಿ.ಮೀ.ಗಟ್ಟಲೆ “ಕ್ಯು’- ಜನರ ಆಕ್ರೋಶ ಇಲ್ಲಿನ ಜಯನಗರ, ಕೊಡಿಗೇಹಳ್ಳಿ, ಹೆಗ್ಗನಹಳ್ಳಿ, ಆನೇಕಲ್‌ ವ್ಯಾಪ್ತಿಯಲ್ಲಿ ಬರುವ ಬಹುತೇಕ ಎಲ್ಲ ಬೆಂಗಳೂರು ಒನ್‌ ಕೇಂದ್ರಗಳು ಮತ್ತು ಶಾಶ್ವತ ನೋಂದಣಿ ಕಚೇರಿಗಳ ಮುಂದೆ ಕಿ.ಮೀ.ಗಟ್ಟಲೆ “ಕ್ಯು’ ಇರುತ್ತದೆ.

“ಎಲ್ಲದಕ್ಕೂ ಆಧಾರ್‌ ಜೋಡಣೆ ಕಡ್ಡಾಯ ಮಾಡಿಬಿಟ್ಟಿದ್ದಾರೆ. ಆದರೆ, ನೋಂದಣಿ ಕೇಂದ್ರಗಳಲ್ಲಿ ಬರೀ ಸರ್ವರ್‌ ಡೌನ್‌, ದಿನಕ್ಕೆ 40-50 ಅಪ್‌ಡೇಟ್‌ ಮಾಡುತ್ತಾರೆ. ಉಳಿದವರು ಕ್ಯುನಲ್ಲಿ ನಿಂತು, ನಿರಾಸೆಯಿಂದ ಹಿಂತಿರುಗಬೇಕು. ಆಧಾರ್‌ ಬೇಕು ಎಂದಾದರೆ, ಎರಡು ದಿನ ಕೆಲಸ ಬಿಟ್ಟು, ಈ ಕೇಂದ್ರಗಳ ಮುಂದೆ ನಿಲ್ಲಬೇಕಾಗಿದೆ. ಇದ್ಯಾವ ನ್ಯಾಯ’ ಎಂದು ವಿಜಯನಗರದಲ್ಲಿರುವ ಖಾಸಗಿ ಆಧಾರ್‌ ನೋಂದಣಿ ಕೇಂದ್ರದ ಮುಂದೆ ಸರದಿಯಲ್ಲಿ ನಿಂತಿದ್ದ ಮಂಜುನಾಥ್‌ ಅಲವತ್ತುಕೊಳ್ಳುತ್ತಾರೆ.

Advertisement

ಯುಐಡಿಎಐನ ಬೆಂಗಳೂರು ಪ್ರಾದೇಶಿಕ ಕಚೇರಿ ಎದುರು ಸೇರಿದಂತೆ ರಾಜ್ಯದ ಎಲ್ಲ ಆಧಾರ್‌ ನೋಂದಣಿ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಗಂಟೆಗಟ್ಟಲೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನೋಂದಣಿ ಕೇಂದ್ರದ ಮುಂದೆ 500 ಜನ ನಿಂತಿದ್ದರೆ, ಆ ಪೈಕಿ 150-200 ಜನರ “ಆಧಾರ್‌’ ಅನ್ನು ಅಪ್‌ಡೇಟ್‌ ಅಥವಾ ತಿದ್ದುಪಡಿ ಮಾಡಿಕೊಡುತ್ತಾರೆ. ಉಳಿದವರು ಮತ್ತೆ ಮರುದಿನ ಬರಬೇಕು. ಪ್ರಾದೇಶಿಕ ಕೇಂದ್ರಗಳ ಕಚೇರಿಯಲ್ಲೇ ಈ ಸ್ಥಿತಿ ಇದ್ದರೆ, ಉಳಿದ ಕಡೆ ಹೇಗಿರಬಹುದು ನೀವೇ ಊಹಿಸಿ ಎಂದು ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಯುಐಡಿಎಐ ಪ್ರಾದೇಶಿಕ ಕಚೇರಿ ಎದುರು ಸರದಿಯಲ್ಲಿ ನಿಂತಿದ್ದ ರಮೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಆಧಾರ್‌ ನೋಂದಣಿ ಕೇಂದ್ರಗಳ ಎದುರು ಇತ್ತೀಚಿನ ದಿನಗಳಲ್ಲಿ ಜನಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಐಡಿಎಐ ಬೆಂಗಳೂರು ಪ್ರಾದೇಶಿಕ ಕಚೇರಿ ಸಿಬ್ಬಂದಿ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಪ್ರಕಾರ ಅಪ್‌ಡೇಟ್‌ ಅಥವಾ ತಿದ್ದುಪಡಿ ಮಾಡಿಕೊಳ್ಳಲು ಬರುವವರ ಸಂಖ್ಯೆ ಸುಮಾರು ಶೇ. 30ರಷ್ಟಿದೆ. ಬೆಂಗಳೂರು ಒನ್‌ ಸೇರಿದಂತೆ ಕೆಲವು ಕೇಂದ್ರಗಳಲ್ಲಿ ಸಾಕಷ್ಟು “ಕ್ಯು’ ಇರುತ್ತದೆ. ಆದರೆ, ಇನ್ನು ಕೆಲವು ಕೇಂದ್ರಗಳಲ್ಲಿ ಜನರೇ ಇರುವುದಿಲ್ಲ. ಈ ಒತ್ತಡವನ್ನು ಸಮತೋಲನ ಮಾಡಬೇಕಾಗಿದೆ. ಹೆಚ್ಚು ಸರತಿ ಇರುವ ಕಡೆಯಿಂದ ಜನರನ್ನು ಕಡಿಮೆ ದಟ್ಟಣೆ ಇರುವೆಡೆ ಕಳುಹಿಸಬೇಕಿದೆ. ಇದರ ಜತೆಗೆ ಎಸ್‌ಎಸ್‌ಯುಪಿ ವ್ಯವಸ್ಥೆಯನ್ನು ಹೆಚ್ಚು ಪ್ರಚುರಪಡಿಸಬೇಕಿದೆ ಎಂದು ಸಮೀಕ್ಷೆ ಮೂಲಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈಗಿರುವ ನೋಂದಣಿ ಕೇಂದ್ರಗಳ ಎದುರು ಹೆಚ್ಚುತ್ತಿರುವ ಜನದಟ್ಟಣೆ ನಿಭಾಯಿಸಲು ಈಗಾಗಲೇ ನಗರದ 48 ಅಂಚೆ ಕಚೇರಿಗಳಲ್ಲಿ ಆಧಾರ್‌ ತಿದ್ದುಪಡಿ ಅಥವಾ ಅಪ್‌ಡೇಟ್‌ ಕೌಂಟರ್‌ಗಳನ್ನು ತೆರೆಯಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಬ್ಯಾಂಕ್‌ಗಳಲ್ಲೂ ಈ ವ್ಯವಸ್ಥೆ ಬರಲಿದೆ ಎಂದು ಯುಐಡಿಎಐ ಪ್ರಾದೇಶಿಕ ಕಚೇರಿಯ ಉನ್ನತ ಅಧಿಕಾರಿ ತಿಳಿಸಿದ್ದಾರೆ.

ಬ್ಯಾಂಕ್‌ ಸಿಬ್ಬಂದಿಗೆ ಯುಐಡಿಎಐ ತರಬೇತಿ ನೀಡುತ್ತದೆ. ನಂತರ ಸಣ್ಣ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ತೇರ್ಗಡೆ ಹೊಂದಿದವರನ್ನು ಆಯ್ಕೆ ಮಾಡಿ, ಯಂತ್ರ ಸಹಿತ ಬ್ಯಾಂಕ್‌ಗಳಲ್ಲಿ ಕೌಂಟರ್‌ ತೆರೆಯಲು ಅವಕಾಶ ನೀಡಲಾಗುವುದು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ ಎಂದರು.

“ಬ್ಯಾಂಕ್‌ಗಳಲ್ಲಿ ಆಧಾರ್‌ ಅಪಡೇಟ್‌ ಸೇವೆ ಆರಂಭಿಸುವಂತೆ ಸೂಚನೆ ಬಂದಿದೆ. ಆದರೆ, ಇದಕ್ಕಾಗಿ ಅಗತ್ಯವಿರುವ ಸಿಬ್ಬಂದಿ ಮತ್ತಿತರ ವ್ಯವಸ್ಥೆಯನ್ನು ಈಗಾಗಲೇ ಇರುವ ಏಜೆನ್ಸಿಗಳ ಮೂಲಕ ಪಡೆಯಬೇಕೋ ಅಥವಾ ಸ್ವತಃ ಬ್ಯಾಂಕ್‌ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ರಾಜ್ಯದಲ್ಲಿ ಸುಮಾರು ಹತ್ತು ಸಾವಿರ ವಿವಿಧ ಬ್ಯಾಂಕ್‌ಗಳ ಶಾಖೆಗಳಿದ್ದು, ಈ ಪೈಕಿ ಶೇ. 10ರಷ್ಟು ಅಂದರೆ, ಒಂದು ಸಾವಿರ ವಿವಿಧ ಬ್ಯಾಂಕ್‌ ಶಾಖೆಗಳಲ್ಲಿ ಈ ಸೇವೆ ದೊರೆಯಲಿದೆ ಎಂದು ರಾಜ್ಯಮಟ್ಟದ ಬ್ಯಾಂಕ್‌ಗಳ ಸಮಿತಿ ಪ್ರಧಾನ ವ್ಯವಸ್ಥಾಪಕ ಸುರೇಶ್‌ ತಿಳಿಸುತ್ತಾರೆ.

ಜನ ತಮ್ಮ ಹತ್ತಿರದ ಆಧಾರ್‌ ನೋಂದಣಿ ಕೇಂದ್ರದ ಬಗ್ಗೆ ತಿಳಿಯಲು ಟೋಲ್‌ಫ್ರೀ 1947ಗೆ ಕರೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next