ನಮ್ಮ ಬಸ್‌ಗೂ ಆ ಗೆಳೆಯರ ಜೀಪಿಗೂ ಪೈಪೋಟಿ ಶುರುವಾಯಿತು. ಒಮ್ಮೆ ಅವರು ಮುಂದೆ ಹೋಗಿ ಕಿರುಚುತ್ತಿದ್ದರೆ, ಮತ್ತೂಮ್ಮೆ ನಮ್ಮ ಬಸ್ ಮುಂದೆ ಹೋಗುತ್ತಿತ್ತು. ಆಗ ನಾನು ಕಿಟಕಿಯಿಂದ ಹೊರಗೆ ಕೈ ಹಾಕಿ ಟಾಟಾ ಮಾಡುತ್ತಿದ್ದೆ. ಹೀಗೆ ಪೈಪೋಟಿಯಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಆ ಜೀಪ್ ಹೆಚ್ಚಿನ ವೇಗ ಪಡೆದುಕೊಂಡು ಕ್ಷಣಾರ್ಧದಲ್ಲಿ ನಮ್ಮಿಂದ ವೇಗವಾಗಿ ಬಹುದೂರ ಹೋಯಿತು.
ಐದು ವರ್ಷಗಳ ಹಿಂದೆ…
“ಅಕ್ಕಾ, ನಾಳೆ ಬೆಳಗ್ಗೆ ಬೇಗ ಹೊರಡಬೇಕು, ಟಿ.ವಿ ನೋಡಿದ್ದು ಸಾಕು. ಮಲಗಿಕೋ ಹೋಗು’ ಎಂದಿದ್ದಕ್ಕೆ, “ಅದು ನನಗೂ ಗೊತ್ತು’ ಅಂತ ರೇಗಿ, ಟಿ.ವಿ. ಆಫ್ ಮಾಡಿ ಉರಿ ಮುಖದಲ್ಲೇ ಹೋಗಿ ಮಲಗಿದೆ. ತುಂಬಾ ಹೊತ್ತು ನಿದ್ದೆ ಬರಲಿಲ್ಲ. ಹೊರಳಾಡಿದೆ. ಮನಸಿನಲ್ಲೇ ಗೊಣಗಿದೆ. ಅದೇ ಹೊತ್ತಿಗೆ, ಇದ್ದಕ್ಕಿದ್ದಂತೆ ಅಲಾರಾಂ ಬಡಿದುಕೊಂಡಿತು. ಏನಿದು? ಮಧ್ಯರಾತ್ರಿಯಲ್ಲಿ ಇದೊಂದು ಕಿರಿಕಿರಿ… ಎಂದು ಆಫ್ ಮಾಡಿ ಮಲಗಿದೆ. ಅಷ್ಟೊತ್ತಿಗೆ ಅಮ್ಮ ಬಂದು “ಏಳು ಬೆಳಗಾಯಿತು’ ಅಂತ ಎಬ್ಬಿಸಿದರು. “ಇಷ್ಟು ಬೇಗನಾ?’ ಎಂದು ಗೊಣಗುತ್ತ ಅಲಾರಾಂ ನೋಡಿದಾಗಲೇ ಗೊತ್ತಾಗಿದ್ದು 5 ಗಂಟೆ ಎಂದು. ಆಶ್ಚರ್ಯವಾಯಿತು. ಹೊರಗಡೆ ನೋಡಿದರೆ ಇನ್ನೂ ಬೆಳಕೇ ಬಂದಿರಲಿಲ್ಲ. ಸ್ವಲ್ಪ ಕತ್ತಲು, ಮಂಜು ಮುಸುಕಿತ್ತು. ಸಖತ್ ಚಳಿ ಬೇರೆ. ಯಾರಿಗೆ ಬೇಕಪ್ಪ ಇಷ್ಟು ಬೆಳಗ್ಗೆ ಹೊರಡೋದು ಎನ್ನುತ್ತಲೇ ಹೊರಡಲು ರೆಡಿಯಾದೆ.
“ಎಲ್ಲಾ ವಸ್ತುಗಳನ್ನೂ ಸರಿಯಾಗಿ ಪ್ಯಾಕ್ ಮಾಡಿಕೊಂಡಿದ್ದೀಯಾ? ಏನಾದರೂ ಬಿಟ್ಟು ಹೋದ್ರೆ ನಾನು ಕೊರಿಯರ್ ಮಾಡಲ್ಲ’ ಅಂದ ಅಣ್ಣ. ಜೊತೆಯಲ್ಲಿದ್ದಾಗ ಕಿತ್ತಾಡುತ್ತಿದ್ದ ಅಕ್ಕ, ಹೊರಡುವ ಸಮಯಕ್ಕೆ ಪ್ರೀತಿಯ ಅಪ್ಪುಗೆ ನೀಡಿದಳು. ಅಪ್ಪನೂ ಆತ್ಮೀಯತೆಯಿಂದ ಬೀಳ್ಕೊಟ್ಟರು. ಎಲ್ಲರಿಗೂ ಟಾಟಾ ಮಾಡಿ ಹೊರಡುವಾಗ ಮನಸ್ಸು ಮರುಗಿತ್ತು. ಓದಿನ ಸಲುವಾಗಿ ಹುಟ್ಟಿ ಬೆಳೆದ ಊರನ್ನು ಬಿಟ್ಟು ಬರುವಾಗ ಸಾಕಷ್ಟು ನೋವಾಯಿತು.
ಮಂಗಳೂರಿನ ಬಸ್ ಹತ್ತಿದೆ. ಸೀಟಿನಲ್ಲೇ ಒರಗಿ ನಿದ್ದೆ ಹೋದ ನನಗೆ, ಮಧ್ಯಾಹ್ನದ “ಊಟಕ್ಕೆ ಟೈಮ್ ಇದೆ’ ಎಂದು ಕಂಡಕ್ಟರ್ ಕಿರುಚಿದಾಗಲೇ ಬಸ್‌ನಲ್ಲಿದ್ದೇನೆಂದು ನೆನಪಾಗಿದ್ದು! ಕೆಳಗಿಳಿದು ಊಟಕ್ಕೆ ಹೋದೆ. ಅಲ್ಲಿ ಒಂದಿಷ್ಟು ಜನ ಟ್ರಿಪ್‌ಗೆ ಬಂದವರ ಪರಿಚಯವಾಯಿತು. ನಾವು ಫ್ರೆಂಡ್ಸ್ ಕೂಡ ಆದೆವು. ಜೀಪ್‌ನಲ್ಲಿ ಟ್ರಿಪ್ ಹೊರಟಿದ್ದ ಅವರು, ತುಂಬಾ ಜಾಲಿ ಮೂಡ್‌ನಲ್ಲಿ ಇದ್ದರು. ಒಂದರ ಹಿಂದೊಂದು ಜೋಕ್ ಹೇಳಿ ನಗಿಸಿದರು. ಅವರೊಡನೆ ಊಟ ಮಾಡುತ್ತಾ, ರಸವತ್ತಾದ ಘಟನೆಗಳನ್ನು ಹಂಚಿಕೊಂಡು ಮನಸಾರೆ ನಕ್ಕೆ. ಅಲ್ಲಿಂದ ಹೊರಡುವಾಗ ಅವರ ನಂಬರ್, ವಿಳಾಸಗಳನ್ನು ತೆಗೆದುಕೊಂಡೆ. ಹೊಸಬರ ಪರಿಚಯವಾದಾಗ ಆಟೋಗ್ರಾಫ್ ಬರೆಸುವುದು ನನ್ನದೊಂದು ಹವ್ಯಾಸ.
ನಮ್ಮ ಬಸ್ ಹೊರಟಿತು. ಅದೇ ಸಮಯಕ್ಕೆ ಅವರ ಜೀಪ್ ಕೂಡ ಹೊರಟಿತು. ನಮ್ಮ ಬಸ್‌ಗೂ ಆ ಗೆಳೆಯರ ಜೀಪಿಗೂ ಪೈಪೋಟಿ ಶುರುವಾಯಿತು. ಒಮ್ಮೆ ಅವರು ಮುಂದೆ ಹೋಗಿ ಕಿರುಚುತ್ತಿದ್ದರೆ, ಮತ್ತೂಮ್ಮೆ ನಮ್ಮ ಬಸ್ ಮುಂದೆ ಹೋಗುತ್ತಿತ್ತು. ಆಗ ನಾನು ಕಿಟಕಿಯಿಂದ ಹೊರಗೆ ಕೈ ಹಾಕಿ ಟಾಟಾ ಮಾಡುತ್ತಿದ್ದೆ. ಹೀಗೆ ಪೈಪೋಟಿಯಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಆ ಜೀಪ್ ಹೆಚ್ಚಿನ ವೇಗ ಪಡೆದುಕೊಂಡು ಕ್ಷಣಾರ್ಧದಲ್ಲಿ ನಮ್ಮಿಂದ ವೇಗವಾಗಿ ಬಹುದೂರ ಹೋಯಿತು. ಅದಾದ ಹತ್ತು ನಿಮಿಷದಲ್ಲಿ ಅಲ್ಲೊಂದು ದೊಡ್ಡ ಗುಂಪು ಸೇರಿತ್ತು. ಟ್ರಾಫಿಕ್ ಜಾಮ್ ಆಗಿತ್ತು. ಕೆಳಗಿಳಿದು ನೋಡಿದರೆ ಆ ಜೀಪ್ ಘಾಟಿಯ ಪ್ರಪಾತಕ್ಕೆ ಬಿದ್ದಿತ್ತು.
ಅದನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ಅ ಕ್ಷಣಕ್ಕೆ ದುಃಖ ಒತ್ತರಿಸಿ ಅಳು ಬಂದಿತ್ತು. ಧಾರಾಕಾರವಾಗಿ ಕಣ್ಣೀರು ಹರಿಯತೊಡಗಿತು. ಸ್ವಲ್ಪ ಹೊತ್ತಿಗೆ ಮುಂಚೆ ನನ್ನ ಹೋಮ್ ಸಿಕ್‌ನೆಸ್ ಬಗ್ಗೆ ತಿಳಿದುಕೊಂಡು “ಮನೆ ಎಲ್ಲಿಗೂ ಹೋಗುವುದಿಲ್ಲ, ಓದು ಮುಖ್ಯ’ ಅಂತ ಧೈರ್ಯ ತುಂಬಿದ್ದ ಆ ಗೆಳೆಯರು ಈಗ ಇಲ್ಲ. ಅವರ ಕೊನೆಯ ಆಟೋಗ್ರಾಫ್ ನನಗೆ ನೆನಪಾಗಿ ಉಳಿಯಿತು.
ಸುನೀತ ರಾಥೋಡ್, ದಾವಣಗೆರೆ