ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಬಲಗೊಳ್ಳುತ್ತಿದ್ದಂತೆಯೇ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತಿತರ ಉಗ್ರ ಸಂಘಟನೆಗಳು ಅಲ್ಲಿ ಜತೆಗೂಡಿವೆ. ಇದು 2020ರಲ್ಲಿ ಅಮೆರಿಕ ಮತ್ತು ತಾಲಿಬಾನ್ ಉಗ್ರರ ಜತೆಗೆ ಮಾಡಿದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.
ಲಷ್ಕರ್ ಮತ್ತು ಜೈಶ್ ಉಗ್ರರು ಪೂರ್ವ ಅಫ್ಘಾನಿಸ್ತಾನದ ಕುನಾರ್ ಮತ್ತು ನಂಗರ್ ಹಾರ್ ಪ್ರಾಂತ್ಯಗಳಲ್ಲಿ, ಆ ದೇಶದ ಆಗ್ನೇಯ ಭಾಗದ ಹೆಲ್ಮಂಡ್ ಮತ್ತು ಕಂದಹಾರ್ ಪ್ರಾಂತ್ಯ ಗಳಲ್ಲಿ ಸಕ್ರಿಯವಾಗಲು ಶುರು ಮಾಡಿದ್ದಾರೆ ಎಂದು ನವದೆಹಲಿಗೆ ಬಂದ ವರದಿಗಳು ಖಚಿತ ಪಡಿಸಿವೆ. ಈ ಎಲ್ಲಾ ಪ್ರಾಂತ್ಯಗಳು ಪಾಕಿಸ್ತಾನದ ಜತೆಗೆ ಅಂತಾರಾಷ್ಟ್ರೀಯ ಗಡಿ ಹೊಂದಿವೆ.
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್, ಲಷ್ಕರ್-ಇ-ಝಂಗ್ವಿ, ಜಮಾತ್-ಉಲ್-ಅಹ್ರಾರ್, ಲಷ್ಕರ್-ಇ-ಇಸ್ಲಾಂ ಮತ್ತು ಅಲ್ -ಬದರ್ ಎಂಬ ಪಾಕಿಸ್ತಾನದ ಉಗ್ರ ಸಂಘಟನೆ ಗಳ ಕುಖ್ಯಾತರೂ ತಾಲಿಬಾನಿಗಳ ಜತೆಗೆ ಸೇರಿ ಕೊಂಡಿದ್ದಾರೆ. ಘಜ್ನಿ, ಖೋಸ್ಟ್, ಲೊಗಾರ್, ಪಕ್ತಿಯಾ ಪ್ರಾಂತ್ಯಗಳಲ್ಲಿಯೂ ಪಾಕಿಸ್ತಾನದ ಉಗ್ರ ಸಂಘಟನೆಗಳು ಚಟುವಟಿಕೆ ಶುರು ಮಾಡಿವೆ. ಲಷ್ಕರ್‌ನ ಪಾಕಿಸ್ತಾನ ಮೂಲದ 7, 200 ಸದಸ್ಯರು ಅಲ್ಲಿದ್ದಾರೆ ಎಂದು ಹೇಳಲಾಗಿದೆ.
ಸಲಹೆಗಾರರಾಗಿ ನೇಮಕ: ಲಷ್ಕರ್ ಸಂಘಟನೆಯ ಸದಸ್ಯರನ್ನು ತಾಲಿಬಾನ್ ಸಲಹೆಗಾರ ರನ್ನಾಗಿ, ಕಮಾಂಡರ್‌ಗಳು, ಆಡಳಿತಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪೂರ್ವ ಅಫ್ಘಾನಿಸ್ತಾನದಲ್ಲಿ ಹೋರಾಟಕ್ಕಾಗಿ ಪಾಕ್ ಯುವಕರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನೂ ಲಷ್ಕರ್ ಮತು ಜೈಶ್ ಆರಂಭಿಸಿವೆ.
ಆಫ್ಘನ್ ತಾಲಿಬಾನ್‌ನ ಮಾಜಿ ನಾಯಕ ದಿ.ಮುಲ್ಲಾ ಮೊಹಮ್ಮದ್ ಉಮರ್‌ನ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ಕೂಡ ಲಷ್ಕರ್, ಜೈಶ್ ಜತೆಗೂಡಿ ಕೆಲಸ ಮಾಡುತ್ತಿದ್ದಾನೆ.
ಉಗ್ರರಿಗೆ ತರಬೇತಿ: ಪಾಕ್‌ನ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಮತ್ತು ಖೈಬರ್ -ಪಂಖ್ತುನ್ ಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಎಂಬಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ.5-8 ಆತ್ಮಾಹುತಿ ಬಾಂಬರ್‌ಗಳು ಸೇರಿ ದಂತೆ 200 ಮಂದಿಗೆ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ.