Advertisement

ದಾಳಿ ನಡೆಸಿದ್ದು ಲಷ್ಕರ್‌ : ಪೊಲೀಸರ ತನಿಖೆಯಿಂದ ದೃಢ

05:00 AM Jul 12, 2017 | Team Udayavani |

ಶ್ರೀನಗರ/ಹೊಸದಿಲ್ಲಿ: ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ದರ್ಶನಕ್ಕೆ ತೆರ ಳುತ್ತಿದ್ದವರ ಮೇಲೆ ದಾಳಿ ಮಾಡಿದ್ದು ಲಷ್ಕರ್‌- ಎ-ತಯ್ಯಬಾ ಸಂಘಟನೆ ಎಂದು ಜಮ್ಮು, ಕಾಶ್ಮೀರ ಪೊಲೀಸರು ದೃಢಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಯ ಉಸ್ತುವಾರಿ ಹೊತ್ತಿರುವ ಸ್ಥಳೀಯ  ಕಮಾಂಡರ್‌ ಅಬು ಇಸ್ಮಾಯಿಲ್‌ ಎಂಬಾತನೇ ಈ ಘಟನೆಯ ಸೂತ್ರಧಾರಿ ಎಂಬ ಅಂಶ ಪತ್ತೆಯಾಗಿದೆ. ಈತನ ಪತ್ತೆಗಾಗಿ ಪೊಲೀಸರು, ಸೇನಾಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿವೆ. ಇಷ್ಟೇ ಅಲ್ಲ, ಇಸ್ಮಾಯಿಲ್‌ಗೆ ಅಬು ದೌಜಾನಾ ಎಂಬಾತನೂ ನೆರವು ನೀಡಿದ್ದಾನೆ ಎನ್ನಲಾಗಿದ್ದು, ಇವರಿಬ್ಬರೂ ಪಾಕ್‌ ಪ್ರಜೆಗಳಾಗಿದ್ದಾರೆ. ಇವರಿಗೆ ಸ್ಥಳೀಯ ಉಗ್ರರೂ ನೆರವು ನೀಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ನಡುವೆ, ದಾಳಿ ಹಿನ್ನೆಲೆಯಲ್ಲಿ ದಿಲ್ಲಿ ಮತ್ತು ಶ್ರೀನಗರದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ಸರಣಿ ಉನ್ನತ ಮಟ್ಟದ ಸಭೆಗಳು ನಡೆದಿವೆ. ರಾಷ್ಟ್ರಪತಿ ಸಹಿತ ಪ್ರಮುಖ ಗಣ್ಯರು ಘಟನೆಯನ್ನು ಅತ್ಯುಗ್ರ ಶಬ್ದಗಳಿಂದ ಖಂಡಿಸಿದ್ದಾರೆ.

Advertisement

ಈ ನಡುವೆ ಲಷ್ಕರ್‌ ಉಗ್ರ ಸಂಘಟನೆ ಹೇಳಿಕೆ ನೀಡಿದ್ದು, ‘ಯಾವುದೇ ಧರ್ಮದ ಮೇಲೆ ದಾಳಿ ನಡೆಸುವುದು ಇಸ್ಲಾಂ ಧರ್ಮದಲ್ಲಿಲ್ಲ. ಇಂಥ ಕುಕೃತ್ಯಗಳನ್ನು ನಾವು ಖಂಡಿಸುತ್ತೇವೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದೆ. ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿರುವ ಮತ್ತೂಂದು ಅಂಶವೆಂದರೆ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಸ್ಥಳೀಯ ನಾಯಕರೂ ದಾಳಿಗೆ ಬೆಂಬಲ ಸೂಚಿಸಿದ್ದಾರೆ. ಇದರ ಜತೆಗೆ ಲಷ್ಕರ್‌ ಸಂಘಟನೆ ಕಾಶ್ಮೀರದಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಮತ್ತೆ ಸಕ್ರಿಯಗೊಳಿಸಲು ಮುಂದಾಗಿದೆ ಎಂಬ ವಿಚಾರವೂ ತನಿಖೆಯಿಂದ ಬೆಳಕಿಗೆ ಬಂದಿದೆ.

ಇದ್ದದ್ದು 17 ಮಂದಿ ಅಲ್ಲ: ಬಸ್‌ನಲ್ಲಿ ಗುಜರಾತ್‌, ಮಹಾರಾಷ್ಟ್ರಕ್ಕೆ ಸೇರಿದ 50ಕ್ಕೂ ಹೆಚ್ಚಿನ ಪ್ರಯಾಣಿಕರಿದ್ದರು. ಸೋಮವಾರದ ವರದಿ ಪ್ರಕಾರ ಬಸ್‌ನಲ್ಲಿ 17 ಮಂದಿ ಮಾತ್ರ ಇದ್ದರು ಎಂಬ ಮಾಹಿತಿ ಇತ್ತು.

ಕಾಶ್ಮೀರಿಗಳು ಭಯೋತ್ಪಾದಕರಲ್ಲ
ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವವರೆಲ್ಲರೂ ಭಯೋತ್ಪಾದಕರಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟವಾಗಿ ಹೇಳಿದ್ದಾರೆ.

51 ಮಂದಿಯ ಪ್ರಾಣ ಉಳಿಸಿದ ಡ್ರೈವರ್‌ ಸಲೀಂ ಶೇಖ್‌


ಉಗ್ರರ ದಾಳಿಗೆ ದಾರುಣವಾಗಿ 7 ಮಂದಿ ಅಸುನೀಗಿರುವ ದುಃಖದಾಯಕ ಘಟನೆಯ ಬೆನ್ನಲ್ಲೇ ಸಮಾಧಾನಪಟ್ಟುಕೊಳ್ಳುವಂಥ ಘಟನೆ ಬೆಳಕಿಗೆ ಬಂದಿದೆ. ಸಲೀಂ ಶೇಖ್‌ ಎಂಬ ಬಸ್‌ ಚಾಲಕ ಉಗ್ರರು ಗುಂಡು ಹಾರಿಸುತ್ತಿದ್ದರೂ, ಬಸ್‌ ಚಲಾಯಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ 51 ಮಂದಿ ಇತರ ಯಾತ್ರಿಕರ ಜೀವ ಕಾಪಾಡಿದ್ದಾರೆ. ‘ಗುಂಡು ಹಾರುತ್ತಿದ್ದರೂ ವೇಗವಾಗಿ ಬಸ್‌ ಚಲಾಯಿಸುವಂತೆ ದೇವರು ನನಗೆ ಶಕ್ತಿ ನೀಡಿದರು. ಅದರಿಂದಾಗಿಯೇ ಇಂಥ ಕ್ರಮ ಸಾಧ್ಯವಾಯಿತು’ ಎಂದಿದ್ದಾರೆ.

Advertisement

ಮಹಾರಾಷ್ಟ್ರದ ಪಲ್ಲವಿ ಅಭ್ಯಂಕರ್‌ ಎಂಬವರು ಕೂಡ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿ ಆರಂಭದಲ್ಲಿ ಪಟಾಕಿಯ ಸದ್ದಿನಂತೆ ಕೇಳಿಸಿತು. ಕೂಡಲೇ ಅದು ಗುಂಡು ಹಾರಿದ ಶಬ್ದ ಎಂದು ಗೊತ್ತಾಯಿತು. ಚಾಲಕ ಜತನದಿಂದ ಬಸ್‌ ಚಲಾಯಿಸಿ ಹೆಚ್ಚಿನವರನ್ನು ಕಾಪಾಡಿದ್ದಾರೆ ಎಂದು ಶ್ಲಾಘಿಸಿದರು.

ಶೌರ್ಯ ಪ್ರಶಸ್ತಿಗೆ ಶಿಫಾರಸು: ದುರಂತದಿಂದ ಹೆಚ್ಚಿನವರನ್ನು ಕಾಪಾಡಿದ್ದಕ್ಕಾಗಿ ಗುಜರಾತ್‌ ಮುಖ್ಯಮಂತ್ರಿ ವಿಜಯ ರುಪಾಣಿ ಸಲೀಂ ಶೇಖ್‌ರನ್ನು ಕೊಂಡಾಡಿದ್ದಾರೆ. ಅವರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸರಕಾರದ ವತಿಯಿಂದ 5 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next