ಬೆಂಗಳೂರು: ಟೋಲ್ ಸಂಗ್ರಹ ಮುಕ್ತಿಗೆ ಒತ್ತಾಯಿಸಿ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್ ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಆರಂಭವಾಗಿರುವ ಸರಕು ಸಾಗಣೆದಾರರ ಮುಷ್ಕರ ಭಾನುವಾರ ಮೂರನೇ ದಿನಕ್ಕೆ ಕಾಲಿಡಲಿದ್ದು, ರಾಜ್ಯದಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬಂದಿಲ್ಲ.
ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಸರಕು ಸಾಗಣೆದಾರರು ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಬಿಜೆಪಿ ಮುಖಂಡರಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಹಾಲು, ತರಕಾರಿ, ಔಷಧ, ದಿನಪತ್ರಿಕೆ ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ವಿನಾಯ್ತಿ ನೀಡಿರುವುದರಿಂದ ಸಾರ್ವಜನಿಕರಿಗೆ ಮುಷ್ಕರದ ಬಿಸಿ ಹೆಚ್ಚಾಗಿ ತಟ್ಟಿದಂತಿಲ್ಲ. ರಾಜ್ಯದ ಹಲವೆಡೆ ಲಾರಿಗಳ ಸಂಚಾರ ಸ್ವಲ್ಪ ಪ್ರಮಾಣದಲ್ಲಿ ಸ್ಥಗಿತಗೊಂಡಂತಿದೆ. ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಮೂಲಕ ಹಾದು ಹೋಗುವ ಅನ್ಯರಾಜ್ಯಗಳ ಲಾರಿಗಳ ಸಂಖ್ಯೆಯಲ್ಲೂ ತುಸು ಇಳಿಕೆಯಾದಂತೆ ಕಂಡುಬಂದಿದೆ.
ಮುಷ್ಕರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಹುತೇಕ ಸರಕು ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಸರಕು ಸಾಗಣೆದಾರರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿ ಸದ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಹಾಗೂ ಕೇಂದ್ರ ಸಚಿವರಾಗಿರುವ ರಾಜ್ಯ ಸಂಸದರಿಗೆ ಮನವಿ ಸಲ್ಲಿಸಲಾಗುವುದು. ಈವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾರೊಬ್ಬರೂ ಮಾತುಕತೆಗೆ ಆಹ್ವಾನಿಸಿಲ್ಲ. ಕೇಂದ್ರ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸುವವರೆಗೆ ಹೋರಾಟ ನಡೆಸಲಾಗುವುದು ಎಂದು ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್ ಕಾಂಗ್ರೆಸ್‌ನ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಖಪ್ಪ ಹೇಳಿದ್ದಾರೆ.