ಮಲೇಬೆನ್ನೂರು : ಉಕ್ಕಡಗಾತ್ರಿ ಪಾವನಕ್ಷೇತ್ರ ಶ್ರೀ ಕರಿಬಸವೇಶ್ವರ ಸ್ವಾಮಿ ರಥೋತ್ಸವವು ಭಾನುವಾರ ಸರಳವಾಗಿ ಜರುಗಿತು.
ವೃಷಭಪುರಿ ಸಂಸ್ಥಾನ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳು ಅಜ್ಜಯ್ಯನ ಗದ್ದುಗೆಗೆ ಪೂಜೆ ಸಲ್ಲಿಸಿ ಬಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ರಥಕ್ಕೆ ಮತ್ತು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ರಥದ ಗಾಲಿಗೆ ಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಅಜ್ಜಯ್ಯನ ಘೋಷಣೆಯೊಂದಿಗೆ ರಥೋತ್ಸವ ಪ್ರಾರಂಭವಾದಾಗ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ, ದವನ ಪತ್ರೆ, ಹಲಸಂ ಕಾಳು, ಹೆಸರುಕಾಳು, ಮೆಣಸು, ಮೆಕ್ಕೆಜೋಳ ಮುಂತಾದ ತಾವುಗಳು ಬೆಳೆದ ದ್ವಿದಳ ಧಾನ್ಯಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ರಥವು ಮುಂದೆ ಹೋಗುತ್ತಿದ್ದಂತೆ ಹಿಂದಿನಿಂದ ಭಕ್ತರು ಪುನಃ ರಥಕ್ಕೆ ಎಸೆದ ಬೀಜಗಳನ್ನು ಆರಿಸಿಕೊಳ್ಳುತ್ತಿದ್ದರು. ಕಾರಣ ಆರಿಸಿಕೊಂಡ ಧಾನ್ಯವನ್ನು ಪುನಃ ಬಿತ್ತುವ ಬೀಜಗಳೊಂದಿಗೆ ಸೇರಿಸಿ ಬಿತ್ತಿದರೆ ಫಸಲು ಹೆಚ್ಚಾಗಿ ಬರುವುದು ಎಂಬ ಪ್ರತೀತಿ.
ಭಕ್ತರು ತುಂಗಾಭದ್ರಾ ನದಿ ದಂಡೆಯಲ್ಲಿ ಸ್ನಾನ ಮಾಡಿ ಅಜ್ಜಯ್ಯನ ದರ್ಶನಕ್ಕೆ ತೆರಳುತ್ತಿದ್ದರು. ಜಾತ್ರೆಯಲ್ಲಿ ಬಣ್ಣಬಣ್ಣದ ಬಲೂನು, ವಿವಿಧ ನಮೂನೆಯ ಬಳೆ, ಸರ, ಓಲೆಗಳ ಅಂಗಡಿಗಳು, ಬೆಂಡು ಬತ್ತಾಸು, ಕಾರತಿಂಡಿ ಅಂಗಡಿಗಳು, ಐಸ್ ಕ್ರೀಂ, ಕಬ್ಬಿನಹಾಲು, ಎಳನೀರು, ಪೂಜಾ ಸಾಮಗ್ರಿಗಳ, ಬಟ್ಟೆಗಳ, ಪಾತ್ರೆಗಳ, ಚೀಲಗಳ, ಅಂಗಡಿಗಳು ಗ್ರಾಹಕರನ್ನು ಸೆಳೆಯುತ್ತಿದ್ದವು. ಕರಗ, ವೀರಗಾಸೆ ನೃತ್ಯ, ಗೊಂಬೆ ಕುಣಿತ, ಹಲಗೆ, ಡೊಳ್ಳು, ಬಾಜಾ ಭಜಂತ್ರಿಗಳು ರಥೋತ್ಸವಕ್ಕೆ ಮೆರುಗು ತಂದಿದ್ದವು. ದುಷ್ಟಶಕ್ತಿಗಳ ಕಾಟ ನಿವಾರಣೆಗಾಗಿ ಅಜ್ಜಯ್ಯನ ಆಶೀರ್ವಾದದ ಕಾಯಿ, ನಿಂಬೆಹಣ್ಣು, ಪ್ರಸಾದ ಪಡೆಯಲು ಭಕ್ತರು ಮುಗಿ ಬಿದ್ದಿದ್ದರು. ಆರಕ್ಷಕರು ಕೋವಿಡ್ ನಿಯಮ ಪಾಲಿಸುವಂತೆ ಮೈಕ್‌ನಲ್ಲಿ ತಿಳಿಸುತ್ತಿದ್ದರು. ಕೋವಿಡ್ ಪರೀಕ್ಷಾ ಕ್ಯಾಂಪ್ ಕೂಡ ಆಯೋಜಿಸಲಾಗಿತ್ತು.