ವಾಷಿಂಗ್ಟನ್: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಅಕ್ಟೋಬರ್ 14ರಂದು ಅನಾವರಣಗೊಳ್ಳಲಿದೆ. ವಿದೇಶದಲ್ಲಿ ಸ್ಥಾಪನೆಯಾಗುತ್ತಿರುವ ಅತೀ ದೊಡ್ಡ ಪ್ರತಿಮೆ ಇದಾಗಿದೆ ಎಂದು ಸಂಘಟಕರು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Sandalwood; ‘ಅಥರ್ವ’ನಾಗಿ ಕನ್ನಡ ಚಿತ್ರರಂಗಕ್ಕೆ ಕಾರ್ತಿಕ್ ರಾಜು ಎಂಟ್ರಿ
19 ಅಡಿ ಎತ್ತರದ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ “ಸಮಾನತೆಯ ಪ್ರತಿಮೆ” ಎಂದು ಹೆಸರಿಡಲಾಗಿದೆ. ಈ ಪ್ರತಿಮೆಯನ್ನು ಖ್ಯಾತ ಶಿಲ್ಪಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಾಂಜಿ ಸುತಾರ್ ಅವರು ನಿರ್ಮಿಸಿದ್ದಾರೆ. ಸುತಾರ್ ಅವರು ಗುಜರಾತ್ ನ ಅಹಮದಾಬಾದ್ ನಲ್ಲಿ ಅತೀ ಎತ್ತರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಇದಾಗಿದ್ದು, ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ (ಎಐಸಿ) ಸುಮಾರು 13 ಎಕರೆ ಸ್ಥಳದಲ್ಲಿ ಪ್ರತಿಮೆಯನ್ನು ನಿರ್ಮಿಸಿರುವುದಾಗಿ ವರದಿ ವಿವರಿಸಿದೆ.
ಭಾರತದ ಹೊರಗೆ ವಿದೇಶದಲ್ಲಿ ನಿರ್ಮಾಣಗೊಂಡ ಅತೀ ದೊಡ್ಡ ಪ್ರತಿಮೆ ಇದಾಗಿದೆ. ಅಂಬೇಡ್ಕರ್ ಅವರ ನೆನಪಿಗಾಗಿ ಪ್ರತಿಮೆಯನ್ನು ನಿರ್ಮಾಣ ಮಾಡಿರುವುದಾಗಿ ಎಐಸಿ ತಿಳಿಸಿದೆ. ಅಕ್ಟೋಬರ್ 14ರಂದು ನಡೆಯಲಿರುವ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಇರುವ ಅಂಬೇಡ್ಕರ್ ಅನುಯಾಯಿಗಳು, ಅಂಬೇಡ್ಕರ್ ವಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಎಐಸಿ ತಿಳಿಸಿದೆ.
ಮಾನವ ಹಕ್ಕುಗಳು, ಸಮಾನತೆ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಈ ಸ್ಮಾರಕ ನೆರವಾಗಲಿದೆ. ಕಾರ್ಯಕ್ರಮಕ್ಕೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವರದಿ ವಿವರಿಸಿದೆ.