ಸೇಡಂ: ಶಿಕ್ಷಣ ಇಲಾಖೆಯ ಬೆಳವಣಿಗೆಯ ದೃಷ್ಟಿಕೋನದಲ್ಲಿ ಅಧಿಕಾರಿಗಳಿಗೆ ದೊಡ್ಡ ಮಟ್ಟದ ಬಡ್ತಿ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಕೆಸಿಎಸ್ ಆರ್ ನಿಯಮಾವಳಿಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
371 ಅಡಿ ಲೋಪದೋಷ ಕಂಡುಬಂದರೆ ತಮ್ಮ ಗಮನಕ್ಕೆ ತನ್ನಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಈಗಾಗಲೇ ಮೂರು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ಹಲವಾರು ಯೋಜನೆಗಳು ಜಾರಿಯಾಗುವಲ್ಲಿ ವಿಫಲವಾಗಿವೆ. ಮುಂದಿನ ದಿನಗಳಲ್ಲೂ ಸಹ ಕೊರೋನಾ ಲಾಕ್‌ಡೌನ್ ತಡೆಯಬೇಕಾದರೆ ಜನರೇ ಜಾಗೃತರಾಗಬೇಕು. ಲಾಕ್‌ಡೌನ್ ಕೀಲಿ ಜನರ ಕೈಲಿದೆ ಎಂದರು.
ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾತನಾಡಿ, ಸರಕಾರಿ ನೌಕರರು ಸಂಘಟನಾತ್ಮಕವಾಗಿ ಕೆಲಸ ಮಾಡಿದರೆ ಯಾವುದೇ ವೈರಾಣು ವಿರುದ್ಧ ಹೋರಾಡಬಹುದಾಗಿದೆ. ಪ್ರತಿಯೊಬ್ಬರೂ ಸರ್ಕಾದ ಸೂಚಿಯಂತೆ ಕೆಲಸ ಮಾಡಿ, ಜನರ ರಕ್ಷಣೆಗೆ ನಿಲ್ಲಬೇಕು ಎಂದು ಹೇಳಿದರು.
ಸರಧಿಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಬಡ್ತಿ ಹಾಗೂ ವರ್ಗಾವಣೆಗೊಂಡ ಸರಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸುರೇಶ ಮೇಕಿನ್, ಉಪ ತಹಶೀಲ್ದಾರ್ ಶರಣಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಬಸರೆಡ್ಡಿ ಕಿಷ್ಠಾಪೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಾಗರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಅಂಬಾರಾಯ ಪಾಟೀಲ, ಬಸವರಾಜ ಹೂಗಾರ, ನಾಗೇಂದ್ರಪ್ಪ, ರಾಜಶೇಖರ ರುದ್ನೂರ, ಅನ್ನಪೂರ್ಣಾ ಬಾನಾರ, ಕಸಾಪ ಅಧ್ಯಕ್ಷ ಸುಮಾ ಚಿಮ್ಮನಚೋಡ್ಕರ್, ಚನ್ನಬಸವ ಬಿರಾದಾರ, ಮಣಿಸಿಂಗ ಚವ್ಹಾಣ, ವೆಂಕಟೇಶ ಯಾಕಾಪೂರ, ಆಶೋಕರೆಡ್ಡಿ ಚಿಲುಮೆ ಇದ್ದರು. ಲಕ್ಷ್ಮಣ ರಂಜೋಳ ನಿರೂಪಿಸಿದರು. ಶಿವಶರಣಪ್ಪ ಬೆನಕನಹಳ್ಳಿ ಗೌರವ ಸಮರ್ಪಿಸಿದರು.