Advertisement

ಕೋಲ್ಕತದಲ್ಲಿ ಭಾರೀ ATM ವಂಚನೆ ಪತ್ತೆ: ಇಬ್ಬರು ರೋಮನ್ನರು ಅರೆಸ್ಟ್‌

11:07 AM Aug 04, 2018 | Team Udayavani |

ಹೊಸದಿಲ್ಲಿ : ಕೋಲ್ಕತದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದಿರುವ ಭಾರೀ ಎಟಿಎಂ ವಂಚನೆಯಲ್ಲಿ ಖದೀಮರು 20 ಲಕ್ಷ ರೂ. ಎಗರಿಸಿದ್ದಾರೆ. 

Advertisement

ಕೋಲ್ಕತ ಪೊಲೀಸರ ವಿಶೇಷ ತನಿಖಾ ತಂಡವೊಂದು ದಕ್ಷಿಣ ದಿಲ್ಲಿಯಲ್ಲಿ  ಈ ವಂಚನೆ ಪ್ರಕರಣದ ಸಂಬಂಧ ಇಬ್ಬರು ರೋಮನ್‌ ಪ್ರಜೆಗಳನ್ನು ಬಂಧಿಸಿದ್ದಾರೆ. 

ಬಂಧಿತರಿಂದ ಪೊಲೀಸರು ಕನಿಷ್ಠ 18 ನಕಲಿ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಭಾತ್‌ ಖಬರ್‌ ದೈನಿಕ ವರದಿ ಮಾಡಿದೆ. 

ಬಂಧಿಸಲ್ಪಟ್ಟಿರುವ ಇಬ್ಬರು ರೋಮನ್‌ ಪ್ರಜೆಗಳಿಂದ ಒಂದು ಮುಖವಾಡ ಮತ್ತು ಎರಡು ಪಾಸ್‌ ಪೋರ್ಟ್‌ಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಕೋಲ್ಕತಕ್ಕೆ ತರಲಾಗುವುದೆಂದು ಪೊಲೀಸ್‌ ಮೂಲಗಳು ಹೇಳಿವೆ.

ಈ ಭಾರೀ ಎಟಿಎಂ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡವರಲ್ಲಿ ಖಾಸಗಿ ವಲಯದ ಬ್ಯಾಂಕ್‌ ಒಂದರ ಸಹಾಯಕ ಜನರಲ್‌ ಮ್ಯಾನೇಜರ್‌  ಮತ್ತು ಹತ್ತು ಮಂದಿ ನೌಕರರು ಕೂಡ ಸೇರಿದ್ದಾರೆ. ಇವರ ಹಾಗೆ ಹಣ ಕಳೆದುಕೊಂಡ ಇತರ ಗ್ರಾಹಕರು ಮುಂದಿನ ಹತ್ತು ದಿನಗಳ ಒಳಗೆ ಈ ಸಂಬಂಧ ತಾವು ದಾಖಲಿಸುವ ಎಫ್ಐಆರ್‌ ಪ್ರತಿಯನ್ನು ಸಲ್ಲಿಸಿದರೆ ಕಳೆದುಕೊಂಡಿರುವ ಹಣವನ್ನು ಅವರವರ ಖಾತೆಗೆ ಜಮೆ ಮಾಡಲಾಗುವುದು ಎಂದು ಬ್ಯಾಂಕುಗಳು ಭರವಸೆ ನೀಡಿವೆ. 

Advertisement

ಐದು ದಿನಗಳ ಹಿಂದೆ ಕೆನರಾ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕಿನ ಕೆಲವು ಗ್ರಾಹಕರು ತಮ್ಮ ಖಾತೆಯಿಂದ ಹಣ ತೆಗೆಯಲಾಗಿರುವುದರ ಬಗ್ಗೆ ಮೊಬೈಲ್‌ ಸಂದೇಶ ಪಡೆದಿದ್ದರು. 

ಈ ಎಟಿಎಂ ವಂಚನೆ ಪ್ರಕರಣದಲ್ಲಿ ದಕ್ಷಿಣ ದಿಲ್ಲಿಯ ಎಟಿಎಂ ನಿಂದ ಹೆಚ್ಚಿನ ಹಣವನ್ನು ಖದೀಮರು ಎಗರಿಸಿರುವುದು ಕಂಡು ಬಂದಿದೆ ಎಂದು ಕೋಲ್ಕತ ಜಂಟಿ ಪೊಲೀಸ್‌ ಕಮಿಷನರ್‌ ಪ್ರವೀಣ್‌ ತ್ರಿಪಾಠಿ ತಿಳಿಸಿದ್ದಾರೆ. 

ವಂಚನೆ ಜಾಲದ ಮೂಲವನ್ನು ಅರಸುತ್ತಾ ದಕ್ಷಿಣ ದಿಲ್ಲಿ ಪ್ರದೇಶ ತಲುಪಿದ, ಸಾದಾ ಉಡುಪಿನಲ್ಲಿದ್ದ, ಕೋಲ್ಕತ ಪೊಲೀಸರಿಗೆ ಇಬ್ಬರು ವಿದೇಶಿ ವ್ಯಕ್ತಿಗಳು ಪದೇ ಪದೇ ಎಟಿಎಂ ಪ್ರವೇಶಿಸುತ್ತಿರುವುದು ಗಮನಕ್ಕೆ ಬಂದು ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದಾಗ ತಾವು ನಡೆಸುತ್ತಿದ್ದ ಎಟಿಎಂ ಲೂಟಿಯ ಬಗ್ಗೆ ಬಾಯಿ ಬಿಟ್ಟರು. ಪೊಲೀಸರು 18 ಎಟಿಎಂ ಕಾರ್ಡುಗಳನ್ನು ಅವರಿಂದ ವಶಪಡಿಸಿಕೊಂಡರು. ವಶಪಡಿಸಿಕೊಳ್ಳಲಾದ ಎಟಿಎಂ ಕಾರ್ಡುಗಳು ಕಪ್ಪು ಬಣ್ಣದಲ್ಲಿದ್ದು ಅವುಗಳಲ್ಲಿ ಯಾವುದೇ ಹೆಸರು, ನಂಬರ್‌ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next