Advertisement

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಅದ್ಧೂರಿ ಸಿದ್ಧತೆ

09:33 PM Feb 04, 2020 | Team Udayavani |

ಕೋಲಾರ: ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಜೊತೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಚಿಣ್ಣರ ನೋಂದಣಿ, ಅವರಿಗೆ ಊಟ, ವಸತಿ ಸೌಲಭ್ಯ ಒದಗಿಸುವ ಕಾರ್ಯವನ್ನು ನಡೆಯುತ್ತಿದೆ. ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಥಳಕ್ಕೆ ಆಗಮಿಸಿ ಸಿದ್ಧತೆಗಳ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸುಂದರ ವೇದಿಕೆ ಹಾಗೂ ಸಭಾಂಗಣ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಬೃಹತ್‌ ವೇದಿಕೆಯ ಮುಂಭಾಗ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು,ಪೋಷಕರು ಹಾಗೂ ಶಿಕ್ಷಕರಿಗಾಗಿ 3 ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೃಹತ್‌ ಪೆಂಡಾಲ್‌ ಹಾಗೂ ವೇದಿಕೆಯಲ್ಲಿ ಡಿಜಿಟಲ್‌ ನಾಮಫಲಕ ಅಳವಡಿಸುತ್ತಿದ್ದು,

ಸುಂದರವಾದ ಆಸನಗಳನ್ನು ಹಾಕಿ ವೇದಿಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ಈವೇಂಟ್‌ ಮ್ಯಾನೇಜ್‌ಮೆಂಟ್‌ ಸಿಬ್ಬಂದಿ ನಿರತರಾಗಿದ್ದರು. ವಿಐಪಿಗಳಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾಧ್ಯಮದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿದ್ದು, ಸಭಾಂಗಣದ ಮುಂಭಾಗ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವಿರುವ ಪ್ರತಿಭಾಕಾರಂಜಿ ನಾಮಫಲಕವನ್ನು ಅಳವಡಿಸಲಾಗಿದೆ.

ಚಿಣ್ಣರ ನೋಂದಣಿ: ವಿವಿಧ ಜಿಲ್ಲೆಗಳಿಂದ ಬರುವ ಚಿಣ್ಣರನ್ನು ಸ್ವಾಗತಿಸಲು ಆಯಾ ಜಿಲ್ಲೆಗಳ ಸಂಪರ್ಕಾಧಿಕಾರಿಗಳು ಕಡತದೊಂದಿಗೆ ಕಾದಿದ್ದು, ಬಂದ ಮಕ್ಕಳನ್ನು ಕೂರಿಸಿ, ಅವರಿಗೆ ನೀರು, ತಿಂಡಿ ಕೊಟ್ಟು ನೋಂದಣಿ ಮಾಡಿಸಿದ ನಂತರ ಒಕ್ಕಲಿಗರ ಸಂಘದ ಆವರಣಕ್ಕೆ ಕರೆದುಕೊಂಡು ಹೋಗಿ ಊಟ ಕೊಡಿಸುವ ಕಾರ್ಯ ಮಾಡುತ್ತಿದ್ದುದು ಕಂಡು ಬಂತು. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ದಕ್ಷಿಣ ಕನ್ನಡ, ಉಡುಪಿ, ಯಾದಗಿರಿ, ಕಲಬುರಗಿ ಮತ್ತಿತರ ದೂರದ ಜಿಲ್ಲೆಗಳ ಚಿಣ್ಣರು ತಮ್ಮ ಜಿಲ್ಲೆಯ ನೋಡಲ್‌ ಅಧಿಕಾರಿಗಳೊಂದಿಗೆ ಆಗಮಿಸಿದರು.

ಮಕ್ಕಳ ಆರೋಗ್ಯ ತಪಾಸಣೆಗೆ ಸಿದ್ಧತೆ: ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ನೇತೃತ್ವದಲ್ಲಿ ಮೂವರು ವೈದ್ಯರ ತಂಡ ವೇದಿಕೆ ಸಮೀಪವೇ ಮಕ್ಕಳ ತಪಾಸಣೆಗೆ ಸಿದ್ಧತೆ ನಡೆಸಿದ್ದು, ಆಯಾ ಜಿಲ್ಲೆಗಳ ನೋಡಲ್‌ ಅಧಿಕಾರಿಗಳನ್ನು ವಿಚಾರಿಸಿ ಅಗತ್ಯವಿರುವ ಮಕ್ಕಳ ತಪಾಸಣೆ ನಡೆಸುವ ಕಾರ್ಯ ಆರಂಭಿಸಿತು. ಆರೋಗ್ಯ ತಪಾಸಣೆಗೆಂದೇ ಪ್ರತ್ಯೇಕ ಸ್ಟಾಲ್‌ ಹಾಕಲಾಗಿದ್ದು, ಆವರಣದಲ್ಲಿ “ಮಗು-ನಗು’ ಆ್ಯಂಬುಲೆನ್ಸ್‌ ನಿಲ್ಲಿಸುವ ಮೂಲಕ ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಲಾಖೆ ಮಕ್ಕಳ ಸುರಕ್ಷತೆ, ಆರೋಗ್ಯ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದೆ.

Advertisement

ಬಿಸಿ, ರುಚಿಯಾದ ಟೊಮೆಟೋ ಬಾತ್‌: ದೂರದ ಜಿಲ್ಲೆಗಳಿಂದ ಬಂದ ಮಕ್ಕಳ ನೋಂದಣಿ ಮುಗಿದೊಡನೆ ಅವರನ್ನು ನೇರವಾಗಿ ಒಕ್ಕಲಿಗರ ಭವನದ ಆವರಣದಲ್ಲಿ ಸಿದ್ಧಗೊಳಿಸಿರುವ ಬೃಹತ್‌ ಶಾಮಿಯಾನಗೆ ಕರೆದೊಯ್ದು, ಅಲ್ಲಿ ಬಿಸಿ ಟೊಮೆಟೋ ಬಾತ್‌, ಮೊಸರು ಬಜ್ಜಿ, ಕುಡಿಯಲು ಶುದ್ಧ ನೀರು ನೀಡಿ ಸತ್ಕರಿಸಲಾಗುತ್ತಿದೆ.

ನೂರಕ್ಕೂ ಹೆಚ್ಚು ಅಡುಗೆಯವರು ಹಾಲಿಸ್ಟರ್‌ ಸ್ಮಾರಕ ಭವನದಲ್ಲಿ ರಾತ್ರಿ ಅಡುಗೆಗೆ ಸಿದ್ಧತೆ ಹಾಗೂ ನಾಳಿನ ಅಡುಗೆ ತರಕಾರಿ ಕತ್ತರಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಅಡುಗೆ ಮತ್ತು ಊಟದ ವ್ಯವಸ್ಥೆಯನ್ನು ಸ್ವತಃ ಡಿಡಿಪಿಐ ಕೆ.ರತ್ನಯ್ಯ, ಬಿಇಒ ಕೆ.ಎಸ್‌.ನಾಗರಾಜಗೌಡ ಪರಿಶೀಲನೆ ನಡೆಸಿದರಲ್ಲದೇ ಆಹಾರ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ಪರೀಕ್ಷಿಸಿದ ನಂತರವೇ ಮಕ್ಕಳಿಗೆ ವಿತರಿಸಲು ಸಾಗಿಸಲಾಯಿತು.

ಶೌಚಾಲಯ ಸ್ವಚ್ಛತೆಗೆ ನಗರಸಭೆ ಕ್ರಮ: ಕಾರ್ಯಕ್ರಮದ ವೇದಿಕೆ ಬಳಿ ಈವೆಂಟ್‌ ಮ್ಯಾನೆಜ್‌ಮೆಂಟ್‌ನವರು ಬಾಲಕರು ಹಾಗೂ ಬಾಲಕಿಯರಿಗೆ ತಲಾ 10 ತಾತ್ಕಾಲಿಕ ಶೌಚಾಲಯ ನಿರ್ಮಿಸಿದ್ದು, ಜತೆಗೆ ಬಾಲಕರ ಹಾಗೂ ಬಾಲಕಿಯರ ಜೂನಿಯರ್‌ ಕಾಲೇಜುಗಳಲ್ಲಿರುವ ಶೌಚಾಲಯಗಳನ್ನು ನಗರಸಭೆ ವತಿಯಿಂದ ಶುಚಿಗೊಳಿಸಿ, ನೀರು ಸಂಗ್ರಹಿಸಿ ಸಿದ್ಧಗೊಳಿಸಲಾಗಿದೆ.

ನಗರಸಭೆ ಆಯುಕ್ತ ಶ್ರೀಕಾಂತ್‌ ಸ್ಥಳದಲ್ಲೇ ಹಾಜರಿದ್ದು, ಶೌಚಾಲಯ ವ್ಯವಸ್ಥೆ, ಜೂನಿಯರ್‌ ಕಾಲೇಜು ಮೈದಾನದಲ್ಲಿ ದೂಳು ಏಳದಂತೆ ನೀರು ಹಾಕುವ ಮತ್ತು ಮಕ್ಕಳನ್ನು ಸ್ವಾಗತಿಸಲು ವಿವಿಧೆಡೆ ಹಸಿರು ತೋರಣಗಳನ್ನು ಕಟ್ಟಿಸುವ ಕಾರ್ಯದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಸಿದ್ಧತಾ ಕಾರ್ಯದಲ್ಲಿ ಡಿಡಿಪಿಐ ಕೆ.ರತ್ನಯ್ಯ, ನಗರಸಭೆ ಆಯುಕ್ತ ಶ್ರೀಕಾಂತ್‌, ಶಿಕ್ಷಣಾಧಿಕಾರಿಗಳಾದ ಎ.ಎನ್‌.ನಾಗೇಂದ್ರ ಪ್ರಸಾದ್‌, ಸಿ.ಆರ್‌.ಅಶೋಕ್‌,

ಡಿವೈಪಿಸಿ ಮೋಹನ್‌ಬಾಬು, ಎವೈಪಿಸಿ ಸಿದ್ದೇಶ್‌, ಬಿಇಒಗಳಾದ ಕೆ.ಎಸ್‌.ನಾಗರಾಜಗೌಡ, ಮಾಧವರೆಡ್ಡಿ, ಕೆಂಪಯ್ಯ, ಸಿದ್ದರಾಜು, ಉಮಾದೇವಿ, ಜೂನಿಯರ್‌ ಕಾಲೇಜು ಪ್ರಾಂಶುಪಾಲ ನರಸಾಪುರ ಮಂಜುನಾಥ್‌, ವಿಷಯ ಪರಿವೀಕ್ಷಕ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ಬಿ.ವೆಂಕಟೇಶಪ್ಪ, ದೈಹಿಕ ಶಿಕ್ಷಣಾಧಿಕಾರಿ ಎಸ್‌.ಚೌಡಪ್ಪ, ಇಸಿಒ, ಬಿಆರ್‌ಪಿ, ಸಿಆರ್‌ಪಿ, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ವಾಸ್ತವ್ಯ ಸ್ಥಳಕ್ಕೆ ಬಸ್‌ಗಳ ವ್ಯವಸ್ಥೆ: ವಿವಿಧ ಜಿಲ್ಲೆಗಳಿಂದ ಬರುವ ಮಕ್ಕಳನ್ನು ಅವರಿಗೆ ನಿಗದಿಗೊಳಿಸಿದ ವಾಸ್ತವ್ಯದ ಸ್ಥಳಗಳಿಗೆ ಕರೆದೊಯ್ಯಲು ಬಸ್‌ಗಳನ್ನು ಜೂನಿಯರ್‌ ಕಾಲೇಜು ಆವರಣದಲ್ಲಿ ನಿಲ್ಲಿಸಲಾಗಿದೆ. ಮಕ್ಕಳು ಊಟ ಮುಗಿಸಿದ ನಂತರ ಅವರಿಗೆ ನಿಗದಿಯಾಗಿರುವ ಹಾಸ್ಟೆಲ್‌, ವಿದ್ಯಾಸಂಸ್ಥೆಗಳಿಗೆ ಕರೆದೊಯ್ಯಲು ಇಲಾಖೆ ಗೊಂದಲಕ್ಕೆ ಅವಕಾಶವಿಲ್ಲದಂತೆ ಪ್ರತಿ ಬಸ್ಸಿಗೂ ಪ್ರತ್ಯೇಕ ನಂಬರ್‌ ಅಳವಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next