ಬೆಂಗಳೂರು: ದೂರವಾಣಿ ಕದ್ದಾಲಿಕೆ ಸುದ್ದಿ ದೊಡ್ಡದು ಮಾಡಲಾಗುತ್ತಿದೆ. ಅತ್ತ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಪ್ರಕರಣ ಸಿಬಿಐಗೆ ವಹಿಸಲು ಪ್ರಧಾನಿ ಅಥವಾ ಕೇಂದ್ರ ಗೃಹ ಸಚಿವರು ಮಧ್ಯಪ್ರವೇಶ ಮಾಡಿದ್ದಾರೆ ಎಂದು ನನಗೆ ಅನಿಸಲ್ಲ. ಅವರಿಗೆ ದೇಶದ ಸಮಸ್ಯೆಗಳೇ ಹೆಚ್ಚಾಗಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದೆಲ್ಲಾ ಸುದ್ದಿಗಳು ಬರುತ್ತಿವೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲ್ಲ. ಸುಪ್ರೀಂಕೋರ್ಟ್ ಕೂಡ ಒಂದು ಪ್ರಕರಣ ದಲ್ಲಿ ಟೆಲಿಫೋನ್ ಕದ್ದಾಲಿಕೆ ತಪ್ಪಲ್ಲ ಅಂತ ಹೇಳಿದೆ. ಕೆಲವು ವಿಚಾರಗಳಲ್ಲಿ ಮಾಡ ಬಹುದು ಎಂದು ಸಮರ್ಥಿಸಿಕೊಂಡರು. ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಯಾದವರಿಗೆ ಗುಪ್ತದಳ ಎಲ್ಲದರ ಮಾಹಿತಿ ಕೊಡುತ್ತದೆ. ನಾನೂ ಪ್ರಧಾನಿಯಾಗಿ ಕೆಲಸ ಮಾಡಿದವನು. ಯಾರ್ಯಾರ ಅವಧಿಯಲ್ಲಿ ಏನೆಲ್ಲಾ ಆಗಿದೆ ಗೊತ್ತಿದೆ ಎಂದರು.
ಆಪರೇಷನ್ ಕಮಲದ ಬಗ್ಗೆಯೂ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿರುವುದನ್ನೂ ಗಮನಿಸಿ ದ್ದೇನೆ. ಇದೇ ಬಿಜೆಪಿಯವರು ಸಿಬಿಐಗೆ ಯಾವುದೇ ಪ್ರಕರಣ ಕೊಡುವುದಿಲ್ಲ ಎಂದು ಹೇಳಿದ್ದೂ ನನಗೆ ನೆನಪಿದೆ ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿ ಸಂಪುಟ ಸಭೆ ಮಾಡಿದರು. ಆದರೆ, ಒಬ್ಬ ವ್ಯಕ್ತಿಯಿಂದ ಸಚಿವ ಸಂಪುಟ ಆಗಲ್ಲ, ನಾನು ಯಾವುದೇ ರೀತಿಯ ಕ್ರಿಯಾ ಲೋಪ ಎತ್ತುವುದಿಲ್ಲ ಎಂದು ಹೇಳಿದರು.
ಪ್ರವಾಹ ಪೀಡಿತರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿದೆ. ನಾವು ಕೇಳಿದ್ದಷ್ಟು ಪರಿಹಾರ ಯಾವ ಸರ್ಕಾರವೂ ಕೊಟ್ಟಿಲ್ಲ. ಕೇಂದ್ರದಿಂದ ಹೆಚ್ಚು ನೆರವು ಪಡೆಯುವ ಬಗ್ಗೆ ನಾವು ಪ್ರಯತ್ನಿಸಬೇಕು. ಜೆಡಿಎಸ್ ವತಿಯಿಂದ ಎಚ್.ಡಿ. ಕುಮಾರಸ್ವಾಮಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ನಾವೂ ಆದಷ್ಟೂ ಅಗತ್ಯ ಸಾಮಗ್ರಿ ರವಾನಿಸುತ್ತಿದ್ದೇವೆ. ಇಂದೂ ಎರಡು ಟ್ರಕ್ ಸಾಮಗ್ರಿ ಕಳುಹಿಸಲು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.