Advertisement
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ 105 ಶಾಸಕರಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಶಾಸಕರೇ 38 ಜನರಿದ್ದಾರೆ. 34 ಜನರಿಗೆ ಅವಕಾಶ ಇರುವ ಸಂಪುಟದಲ್ಲಿ ಯಡಿಯೂರಪ್ಪನವರು 17 ಜನರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಅದರಲ್ಲಿಯೇ ಅರ್ಧದಷ್ಟು ಅಂದರೆ, ಮುಖ್ಯಮಂತ್ರಿಯನ್ನು ಹಿಡಿದು 8 ಜನ ಲಿಂಗಾಯತ ಸಮುದಾಯದವರಿಗೆ ಅವಕಾಶ ದೊರೆತಿದೆ.
Related Articles
Advertisement
ದಕ್ಷಿಣ ಕರ್ನಾಟಕ ಭಾಗ ದಲ್ಲಿಯೂ ಲಿಂಗಾಯತ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಬೆಂಗಳೂರಿನಲ್ಲಿ ವಿ.ಸೋಮಣ್ಣ ಹಾಗೂ ತುಮಕೂರಿನಲ್ಲಿ ಜೆ.ಸಿ.ಮಾಧುಸ್ವಾಮಿ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಹಳೇ ಮೈಸೂರು ಭಾಗದಲ್ಲಿಯೂ ಸಮುದಾಯದ ಮತಗಳನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ 96 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಂಡಿತ್ತು.
ವಿಶೇಷವಾಗಿ ಮುಂಬೈ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಮುಂಬೈ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ಅವರಲ್ಲಿ ಐವರು ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ, ಪಕ್ಷದ ಭದ್ರಕೋಟೆಯಾಗಿರುವ ಮುಂಬೈ ಕರ್ನಾಟಕ ಭಾಗದಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಪಕ್ಷದ ಜತೆಗೆ ಉಳಿಸಿಕೊಳ್ಳಲು ಬಿಜೆಪಿ ಈ ತಂತ್ರ ಅನುಸರಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೈದರಾಬಾದ್ ಕರ್ನಾಟಕಕ್ಕಿಲ್ಲ ಪ್ರಾತಿನಿಧ್ಯ: ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಕೇವಲ ಬೀದರ್ ಜಿಲ್ಲೆಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದ್ದು, ಉಳಿದ ಐದು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
* ಶಂಕರ ಪಾಗೋಜಿ