ನವದೆಹಲಿ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಾದ ಎರಡು ತಿಂಗಳ ಬಳಿಕ ವಿಮಾನ ಸಂಚಾರ ಆರಂಭವಾದ ಮೊದಲ ದಿನವೇ(ಸೋಮವಾರ) ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ವಿಮಾನ ಯಾನ ರದ್ದುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ದೇಶೀಯ ವಿಮಾನ ಸಂಚಾರ ರದ್ದುಗೊಂಡು ಎರಡು ತಿಂಗಳು ಕಳೆದಿದೆ.
ಲಾಕ್ ಡೌನ್ ನಿರ್ಬಂಧ ಸಡಿಲಿಕೆ ನಂತರ ಮೇ 25ರಿಂದ ದೇಶಾದ್ಯಂತ ದೇಶೀಯ ವಿಮಾನ ಯಾನ ಆರಂಭ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ 4.45ಕ್ಕೆ ದೆಹಲಿಯಿಂದ ಪುಣೆಗೆ ಹಾಗೂ 6.45ಕ್ಕೆ ಮುಂಬೈನಿಂದ ಪಾಟ್ನಾಕ್ಕೆ ವಿಮಾನ ಪ್ರಯಾಣಿಕರನ್ನು ಹೊತ್ತೊಯ್ದಿತ್ತು.
ಆಂಧ್ರಪ್ರದೇಶ ಮತ್ತು ಪಶ್ಚಿಮಬಂಗಾಳ ಹೊರತುಪಡಿಸಿ ದೇಶದ ಉಳಿದೆಲ್ಲಾ ರಾಜ್ಯಗಳಲ್ಲಿ ವಿಮಾನ ಸಂಚಾರ ಆರಂಭಗೊಂಡಿತ್ತು. ಏತನ್ಮಧ್ಯೆ ದಿಲ್ಲಿ, ಮುಂಬೈ ಹಾಗೂ ಇತರ ರಾಜ್ಯಗಳಲ್ಲಿ ಹಲವಾರು ವಿಮಾನಗಳನ್ನು ರದ್ದುಪಡಿಸಿದ್ದರಿಂದ ಪ್ರಯಾಣಿಕರು ಗೊಂದಲಕ್ಕೊಳಗಾದ ಪ್ರಸಂಗ ನಡೆಯಿತು ಎಂದು ವರದಿ ತಿಳಿಸಿದೆ.
ಮುಂಬೈ, ದೆಹಲಿಯ ವಿಮಾನ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ದಿಢೀರ್ ವಿಮಾನ ಪ್ರಯಾಣ ರದ್ದುಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.