ಅದು ಪರಿಶುದ್ಧವಾದ ಕೊಳ. ಬಣ್ಣ ಬಣ್ಣದ ನೂರಾರು ಮೀನುಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆನಂದದಿಂದಿದ್ದವು. ಇದೇ ಕೊಳದಲ್ಲಿ ಒಂದು ಚಿಕ್ಕ ಮೀನು ತನ್ನ ತಾಯಿಯೊಂದಿಗೆ ವಾಸವಾಗಿತ್ತು. ಕೊಳದ ಪಕ್ಕದಲ್ಲೇ ವಾಸವಾಗಿದ್ದ ಮರಿ ಮಂಡೂಕದ ಜೊತೆ ಚಿಕ್ಕ ಮೀನಿಗೆ ಗೆಳೆತನ ಬೆಳೆಯಿತು. ಪ್ರತಿದಿನ ಜೊತೆಯಾಗಿ ಆಡುತ್ತಾ ನೀರಿನಲ್ಲಿದ್ದ ಸಣ್ಣ ಪುಟ್ಟ ಹುಳಹುಪ್ಪಟೆಗಳನ್ನು ಭಕ್ಷಿಸುತ್ತಿದ್ದವು.
ಕೆಲ ಸಮಯ ನೀರಿನಲ್ಲಿ ಕಾಲ ಕಳೆಯುತ್ತಿದ್ದ ಮರಿ ಮಂಡೂಕ, ಕೊಳದಿಂದ ಹೊರಜಿಗಿದು ಮರೆಯಾಗುತ್ತಿತ್ತು. ಒಂದು ದಿನ ಚಿಕ್ಕ ಮೀನು ಮರಿ ಮಂಡೂಕದ ಬಳಿ “ನೀನು ನನ್ನಂತೆ ಈ ಕೊಳದಲ್ಲೇ ವಾಸಮಾಡುವ ಬದಲು ಹೊರಕ್ಕೆ ಬರಬಾರದೇಕೆ?’ ಎಂದು ಪ್ರಶ್ನಿಸಿತು. ಆಗ ಮರಿ ಮಂಡೂಕ “ಗೆಳೆಯಾ, ನಾನು ನನ್ನ ಅಮ್ಮನ ಜೊತೆ ಊರೆಲ್ಲಾ ಸುತ್ತಾಡಿ ಬರುತ್ತೇನೆ. ಅಲ್ಲದೆ ಅಲ್ಲಿ ದೊರೆಯುವ ರುಚಿಕರವಾದ ಎಲೆಗಳ ಚಿಗುರು, ಹುಳುಗಳನ್ನು ಸೇವಿಸುತ್ತೇನೆ. ಕೊಳದಿಂದ ಹೊರಗಡೆ. ನೀನು ನೋಡದ ಸುಂದರವಾದ ಲೋಕವಿದೆ’ ಎಂದಿತು.
“ಅರೆ, ನಾನು ಈ ಕೊಳವೊಂದೇ ಪ್ರಪಂಚ ಎಂದುಕೊಂಡಿದ್ದೆ. ಇದಕ್ಕಿಂತ ಬೇರೆ ಸುಂದರವಾದ ಜಾಗ ಇದೆಯೇ?’ ಎಂದು ಅಚ್ಚರಿಗೊಂಡಿತು ಚಿಕ್ಕವನು. ಮರಿ ಮಂಡೂಕ ಹೇಳಿದ ವಿಷಯವನ್ನು ಕೇಳಿ ತನಗೂ ಈ ಕೊಳದಿಂದ ಹೊರ ಹೋಗಿ ಹರಿಸಬೇಕೆಂದು ಆಸೆಯಾಗುತ್ತಿದೆ ಎಂದು ಅಮ್ಮನಲ್ಲಿ ತನ್ನ ಮನದ ಆಸೆಯನ್ನು ಹೇಳಿತು. ಆಗ ಅಮ್ಮ ಮೀನು “ನೋಡು ನಾವು ಉಸಿರಾಡುವ ಆಮ್ಲಜನಕ ನೀರಿನಲ್ಲಿ ಮಾತ್ರ ದೊರೆಯುವುದು. ನಮ್ಮ ಶರೀರ ಹೊರಗಡೆಯ ವಾತಾವರಣಕ್ಕೆ ಸರಿಹೊಂದುವುದಿಲ್ಲ. ಸುಮ್ಮನೆ, ಅನ್ಯರ ಬಣ್ಣದ ಮಾತಿಗೆ ಮರುಳಾಗಿ ಜೀವ ಕಳೆದುಕೊಳ್ಳುವಂಥ ದುಸ್ಸಾಹಸಕ್ಕೆ ಕೈಹಾಕುವುದು ಬೇಡ’ ಎಂದಿತು.
ಅಮ್ಮನ ಹಿತವಚನ ಕೇಳಿ ಅರೆ ಘಳಿಗೆ ಸುಮ್ಮನಾದರೂ ಮರಿಮಂಡೂಕನನ್ನು ಕಂಡಾಗ ಮತ್ತೆ ಚಿಕ್ಕ ಮೀನಿಗೆ ಕೊಳದಿಂದ ಹೊರಹೋಗ ಬೇಕೆಂಬ ಬಯಕೆ ಹೆಚ್ಚಾಗತೊಡಗಿತು. ಒಂದು ದಿನ ಅಮ್ಮನಿಗೆ ತಿಳಿಯದಂತೆ ಮರಿ ಮೀನು ಮಂಡೂಕನೊಡನೆ ಕೊಳದಿಂದ ಹೊರಜಿಗಿಯಿತು. ನೀರಿನಿಂದ ಹೊರ ಬಂದ ಅರೆಕ್ಷಣದಲ್ಲಿ ಚಿಕ್ಕ ಮೀನು ಉಸಿರು ಕಟ್ಟಿದಂತಾಗಿ ವಿಲವಿಲ ಒದ್ದಾಡತೊಡಗಿತು. ಗಾಬರಿಗೊಂಡ ಮರಿ ಮಂಡೂಕ ಕೂಡಲೇ ಕೊಳದಲ್ಲಿದ್ದ ಮೀನುಗಳನ್ನು ಕರೆಯಿತು. ಅವೆಲ್ಲವೂ ಚಿಕ್ಕ ಮೀನನ್ನು ಕೊಳದೊಳಕ್ಕೆ ಎಳೆದುಕೊಂಡವು. ಅಮ್ಮನ ಎಚ್ಚರಿಕೆಯ ನುಡಿಯನ್ನು ನಿರ್ಲಕ್ಷಿಸಿದ್ದಕ್ಕೇ ತನಗೆ ಈ ದುರ್ಗತಿ ಒದಗಿತೆಂದು ಮರಿ ಮೀನು ಮರುಗಿತು. ತಾನು ಇನ್ನೆಂದೂ ಕೊಳದಿಂದ ಹೊರಕ್ಕೆ ಹೋಗುವುದಿಲ್ಲವೆಂದು ತೀರ್ಮಾನಿಸಿತು.
– ವಂದನಾ ರವಿ ಕೆ. ವೈ