ಬೆಂಗಳೂರು: ಪಿಜಿಗಳು ಹಾಗೂ ಬ್ಯಾಚ್ಯುಲರ್ ಗಳಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಹಾಸನ ಮೂಲದ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚೇತನ್ (35), ಆದರ್ಶ್ (29) ಮತ್ತು ಪವನ್ ಕುಮಾರ್ (21) ಬಂಧಿತರು. ಆರೋಪಿಗಳಿಂದ 23 ಲಕ್ಷ ರೂ. ಮೌಲ್ಯದ 4 ದ್ವಿಚಕ್ರ ವಾಹನಗಳು, 28 ಮೊಬೈಲ್‌ಗಳು, 34 ಲ್ಯಾಪ್‌ಟಾಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕುಮಾರಸ್ವಾಮಿ ಲೇಔಟ್‌ನ 1ನೇ ಹಂತದಲ್ಲಿ ವಾಸವಾಗಿರುವ ದೂರುದಾರ ಪೃಥ್ವಿರಾಜ್, ಸೆ.15ರಂದು ಸ್ನೇಹಿತನ ಜತೆ ತಡರಾತ್ರಿವರೆಗೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿ, ಮುಂಬಾಗಿಲು ಲಾಕ್ ಮಾಡಿ, ಕೀಯನ್ನು ರೂಮಿನ ಬಾಗಿಲ ಪಕ್ಕದಲ್ಲಿರುವ ಕಿಟಕಿಯಲ್ಲಿ ಇಟ್ಟು ಮಲಗಿದ್ದರು. ಮರು ದಿನ ಬೆಳ್ಳಗೆ 10 ಗಂಟೆ ಸುಮಾರಿಗೆ ಸ್ನೇಹಿತ ಬಾಗಿಲು ತೆಗೆಯಲು ಕೀ ಹುಡುಕಾಟ ನಡೆಸಿದಾಗ, ಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ದೂರುದಾರ ಕೂಡ ಎಚ್ಚರಗೊಂಡು ಎಲ್ಲೆಡೆ ಕೀ ಹುಡುಕುತ್ತಿದ್ದಾಗ 4 ಲ್ಯಾಪ್‌ಟಾಪ್‌ಗ್ಳು, 4 ವಾಚ್‌ಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಪೃಥ್ವಿರಾಜ್, ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೂವರು ಆರೋಪಿಗಳು, ನಗರದಲ್ಲೇ ಬೈಕ್‌ಗಳ ಕಳವು ಮಾಡುತ್ತಿದ್ದರು. ಬಳಿಕ ಅವುಗಳ ಮೂಲಕ ಯುವಕರ ಪಿಜಿಗಳು ಹಾಗೂ ಬ್ಯಾಚ್ಯುಲರ್‌ಗಳು ವಾಸವಾಗಿರುವ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ನಸುಕಿನ 2 ಅಥವಾ 3 ಗಂಟೆ ಸುಮಾರಿಗೆ ರೂಮ್‌ಗಳ ಬಳಿ ಹೋಗಿ, ಕಿಟಕಿ ಪಕ್ಕದಲ್ಲೇ ಇರುತ್ತಿದ್ದ ಕೀ ತೆಗೆದು ಕಳವು ಮಾಡಿ ಬಳಿಕ ಪರಾರಿಯಾಗುತ್ತಿದ್ದರು. ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಎಸ್ .ಬಿ.ಗಿರೀಶ್ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಯ ಪಿಐ ಆರ್.ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕೊ
ರಿಯರ್ ಕೊಡಲು ಹೋದಾಗ ಪಿಜಿಗಳ ಗುರುತು
ಆರೋಪಿಗಳ ಪೈಕಿ ಚೇತನ್ ಕೊರಿಯರ್ ಬಾಯ್ ಆಗಿದ್ದು, ಪವನ್ ಮತ್ತು ಆದರ್ಶ್ ಆಟೋ ಚಾಲನೆ ಜತೆಗೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಚೇತನ್ ಕೊರಿಯರ್ ಕೊಡಲು ಹೋದಾಗಲೇ ಪಿಜಿ, ಬ್ಯಾಚುಲರ್ ರೂಮ್‌ಗಳನ್ನು ಗುರುತಿಸುತ್ತಿದ್ದ. ನಂತರ ತನ್ನ ಸ್ನೇಹಿತರ ಜತೆ ಹೋಗಿ ಕಳವು ಮಾಡುತ್ತಿದ್ದರು. ಕಳವು ವಸ್ತುಗಳನ್ನು ಹಾಸನ, ಚನ್ನರಾಯಪಟ್ಟಣ, ಬೆಂಗಳೂರಿನ ಕೆಲವಡೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ 16 ಲ್ಯಾಪ್‌ಟಾಪ್ ಕಳವು ಪ್ರಕರಣಗಳು, 4 ದ್ವಿಚಕ್ರ ವಾಹನ ಕಳವು ಪ್ರಕರಣಗಳು, ಮೊಬೈಲ್ ಇ-ಲಾಸ್ಟ್‌ನಲ್ಲಿ ದಾಖಲಾಗಿದ್ದ 11 ಮೊಬೈಲ್ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.