Advertisement

ಲ್ಯಾಪ್‌ಟಾಪ್‌, ಅಂಕಪಟ್ಟಿಯಲ್ಲಿ ಅವ್ಯವಹಾರ ನಡೆದಿಲ್ವಂತೆ !

09:24 AM Dec 28, 2017 | Team Udayavani |

ಕೊಪ್ಪಳ: ಕಳೆದ ಕೆಲವು ತಿಂಗಳಿಂದ ಲ್ಯಾಪ್‌ಟಾಪ್‌, ಅಂಕಪಟ್ಟಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಭಾರಿ ಸುದ್ದಿಯಾಗಿತ್ತು. ಆದರೆ ಇವೆರಡಲ್ಲೂ ಯಾವುದೇ ಅವ್ಯವಹಾರ ನಡೆದಿಲ್ಲ ಎನ್ನುವ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಕಾಲೇಜು ಶಿಕ್ಷಣ ಇಲಾಖೆಯೇ ಸ್ವತಃ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಕುರಿತು ಸ್ವತಃ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರೇ
ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

Advertisement

ಉನ್ನತ ಶಿಕ್ಷಣ ಇಲಾಖೆಯು ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಣೆ ಮಾಡಬೇಕೆನ್ನುವ ಯೋಜನೆ ಆರಂಭಿಸಿತು. ಆದರೆ ಲ್ಯಾಪ್‌ಟಾಪ್‌ ಟೆಂಡರ್‌ ಕರೆಯುವ ಮುನ್ನವೇ ಅಕ್ರಮ ನಡೆದಿದೆ ಎನ್ನುವ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ವಾಗ್ಧಾಳಿಗೆ ಸಿಲುಕಿದ ಸರ್ಕಾರ ತನಿಖೆಗೆ ಸದನ ಸಮಿತಿಗೆ ವಹಿಸಿತ್ತು. ತನಿಖೆಗೆ ರಚಿಸಿದ್ದ ಸದನ ಸಮಿತಿಯೇ ಈಗ ಲ್ಯಾಪ್‌ಟಾಪ್‌ ಖರೀದಿಗೆ ಹಸಿರು ನಿಶಾನೆ ತೋರಿದೆ. 1.5 ಲಕ್ಷ ಲ್ಯಾಪ್‌ಟಾಟ್‌ಗಳ ಖರೀದಿಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿ, 45 ದಿನದೊಳಗೆ ಲ್ಯಾಪ್‌ಟಾಪ್‌ ನೀಡಬೇಕು ಎಂದು ಕಟ್ಟಾಜ್ಞೆ ಮಾಡಿದೆ.

9 ಕೋಟಿ ರೂ. ಉಳಿತಾಯ: ನೈಜವಾಗಿ ದಾಖಲೆಗಳ ಪ್ರಕಾರ ಲ್ಯಾಪ್‌ ಟಾಪ್‌ ಖರೀದಿಯಲ್ಲಿ ಸರ್ಕಾರಕ್ಕೆ 9 ಕೋಟಿ ಉಳಿತಾಯ  ವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳುತ್ತಿದೆ ಎಂದು ಸ್ವತಃ ಸಚಿವ ಬಸವರಾಜ ರಾಯರಡ್ಡಿ ಅವರೇ ಒಪ್ಪಿಕೊಂಡಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಲ್ಯಾಪ್‌ಟಾಪ್‌ ಖರೀದಿಗೆ 14,500 ರೂ.ಗೆ ಏಜೆನ್ಸಿ ನೀಡಿದ್ದರೆ, ಅದೇ ಲ್ಯಾಪ್‌ಟಾಪ್‌ಅನ್ನು ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಲು 17,500 ರೂ. ದರವನ್ನು ಏಜೆನ್ಸಿ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಒಂದೇ ಲ್ಯಾಪ್‌ಟಾಪ್‌ನಲ್ಲಿ ದರದಲ್ಲಾದ ವ್ಯತ್ಯಾಸ ಗಮನಿಸಿ, ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಕರೆದಿದ್ದ ಟೆಂಡರ್‌ ರದ್ದು ಮಾಡಿ ಕೇವಲ 14,500 ರೂ.ಗೆ ಖರೀದಿಸಿದೆ. ದಾಖಲೆಗಳ ಪ್ರಕಾರ, ಸರ್ಕಾರಕ್ಕೆ ಬರೊಬ್ಬರಿ 9 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸಚಿವರೇ ಒಪ್ಪಿಕೊಳ್ಳುತ್ತಿದ್ದಾರೆ.

ಅಂಕಪಟ್ಟಿಯಲ್ಲೂ ಉಳಿತಾಯ: ವಿವಿಧ ವಿಶ್ವ ವಿದ್ಯಾಲಯಗಳು ಅಂಕಪಟ್ಟಿಗಳಿಗಾಗಿ ಮುದ್ರಣ ಕಾಗದ ಖರೀದಿ ಮಾಡುವ ವೇಳೆ ದರದಲ್ಲಿ ವ್ಯತ್ಯಾಸವಿತ್ತು. ವಿವಿಗಳು ಬೇಕಾಬಿಟ್ಟಿ ದರದಲ್ಲಿ ಖರೀದಿ ಮಾಡುತ್ತಿದ್ದವು. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ನಿಗಾ ವಹಿಸಿ ಮುದ್ರಣ ಕಾಗದ ಖರೀದಿ ತಡೆದು ಎಂಎಸ್‌ಐಎಲ್‌ ಮೂಲಕ ಖರೀದಿಗೆ ಆದೇಶ ಹೊರಡಿಸಿತ್ತು. ಆದೇಶ ಹೊರ ಬೀಳುತ್ತಿದ್ದಂತೆ ವಿವಿಗಳಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿತು. ಈ ಮೊದಲು ವಿವಿಗಳು ಖರೀದಿ ಮಾಡುತ್ತಿದ್ದ ಮುದ್ರಣ ಕಾಗದ ಹಾಗೂ ಎಂಎಸ್‌ಐಎಲ್‌ನ ದರಪಟ್ಟಿ ಗಮನಿಸಿದಾಗ, ವ್ಯತ್ಯಾಸ ಕಂಡು ಬಂದಿದೆ. ಇದರಿಂದಲೂ ಸರ್ಕಾರಕ್ಕೆ 2 ಕೋಟಿ ರೂ. ಉಳಿತಾಯವಾಗಿದೆ. ಕಡಿಮೆ ದರವಿರದಿದ್ದರೂ ಹೆಚ್ಚಿನ ದರದಲ್ಲಿ ವಿವಿಧ ವಿವಿಗಳು ಮುದ್ರಣ ಕಾಗದ ಖರೀದಿಸಿವೆ ಎನ್ನುವುದು ಎಂಎಸ್‌ಐಎಲ್‌ನ ನಿಖರ ದಾಖಲೆಗಳ ಲೆಕ್ಕಾಚಾರದಲ್ಲಿ ಸತ್ಯ ಬೆಳಕಿಗೆ ಬಂದಿದೆ.

ಲ್ಯಾಪ್‌ಟಾಪ್‌ ಹಾಗೂ ಅಂಕಪಟ್ಟಿಯ ಮುದ್ರಣ ಕಾಗದ ಖರೀದಿಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಎಂಎಸ್‌ಐಲ್‌ ಮೂಲಕ ಖರೀದಿಯಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯವಾಗಿದೆ. ಈ ಕುರಿತು ಎಂಎಸ್‌ಐಎಲ್‌ ಮತ್ತು ಶಿಕ್ಷಣ ಇಲಾಖೆ ನೀಡಿದ ವರದಿಯಲ್ಲಿಯೇ ಗೊತ್ತಾಗಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪಾಟಾಪ್‌ ವಿತರಣೆ ಮಾಡಬೇಕಿರುವುದರಿಂದ ಟೆಂಡರ್‌ ಕರೆಯಲಾಗಿದೆ.
 ●ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next