Advertisement

ಉಡುಪಿ : ಎಸೆಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಬಂದಿರುವ 51 ಟಾಪರ್‌ಗಳಿಗೆ ಲ್ಯಾಪ್‌ಟಾಪ್‌

03:36 PM Sep 27, 2022 | Team Udayavani |

ಉಡುಪಿ : ಎಸೆಸೆಲ್ಸಿಯಲ್ಲಿ ಜಿಲ್ಲೆ ಹಾಗೂ ತಾಲೂಕಿಗೆ ಪ್ರಥಮ ಬಂದಿರುವ ಉಭಯ ಜಿಲ್ಲೆಯ 51 ವಿದ್ಯಾರ್ಥಿಗಳಿಗೆ ಈ ಬಾರಿ ಲ್ಯಾಪ್‌ಟಾಪ್‌ ದೊರೆಯಲಿದೆ.

Advertisement

ಉಡುಪಿ ಜಿಲ್ಲಾ ಮಟ್ಟದಲ್ಲಿ ಐವರು ವಿದ್ಯಾರ್ಥಿಗಳಿಗೆ (ಮೂವರು ಸಮಾನ ಅಂಕ), ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಟಾಪ್‌ ಬಂದಿರುವ 16 ವಿದ್ಯಾರ್ಥಿಗಳು ಸೇರಿದಂತೆ 21 ವಿದ್ಯಾರ್ಥಿಗಳು ಮತ್ತು ದ.ಕ. ಜಿಲ್ಲಾ ಮಟ್ಟದ ಐವರು ವಿದ್ಯಾರ್ಥಿಗಳು (ಮೂವರು ಸಮಾನ ಅಂಕ), ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಟಾಪ್‌ ಬಂದಿರುವ 25 ವಿದ್ಯಾರ್ಥಿಗಳು ಸೇರಿ 30 ಮಂದಿಗೆ ಲ್ಯಾಪ್‌ಟಾಪ್‌ ಸಿಗಲಿದೆ.

ಮಾಹಿತಿ ನೀಡಲು ಸೂಚನೆ
ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸೆಸೆಲ್ಸಿಯಲ್ಲಿ ಜಿಲ್ಲೆ ಅಥವಾ ತಾಲೂಕಿಗೆ ಪ್ರಥಮ ಬಂದಿರುವ ತಲಾ ಮೂವರು ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯಿಂದ ನೀಡಲಿರುವ ಲ್ಯಾಪ್‌ಟಾಪ್‌ ಸಂಬಂಧ ವಿದ್ಯಾರ್ಥಿಗಳ ಮಾಹಿತಿ ಒದಗಿಸುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಮಂಡಳಿಯಿಂದ ನಿರ್ದೇಶನ ನೀಡಲಾಗಿದೆ.

ಸೆಪ್ಟಂಬರ್‌ ಅಂತ್ಯದೊಳಗೆ ಅಥವಾ ದಸರಾ ರಜೆ ಮುಗಿದ ಕೂಡಲೇ ಲ್ಯಾಪ್‌ಟಾಪ್‌ ವಿದ್ಯಾರ್ಥಿಗಳ ಕೈ ಸೇರುತ್ತಿತ್ತು. ಈ ವರ್ಷ ಮರುಮೌಲ್ಯಮಾಪನ ಅನಂತರ ಮಾಹಿತಿ ಸ್ವಲ್ಪ ವಿಳಂಬವಾಗಿ ಸಿಕ್ಕಿದ್ದರಿಂದ ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಸಿಗಲಿದೆ. ರಾಜ್ಯದ ಶೈಕ್ಷಣಿಕ ಜಿಲ್ಲೆ ಹಾಗೂ ಶೈಕ್ಷಣಿಕ ಬ್ಲಾಕ್‌ ಒಳಗೊಂಡಂತೆ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಇ- ಟೆಂಡರ್‌ ಪ್ರಕ್ರಿಯೆ ಮೂಲಕ ಎಲ್‌1 ಸಂಸ್ಥೆಯನ್ನು ಗುರುತಿಸಿ ಕಾರ್ಯಾದೇಶ ನೀಡಲಾಗಿದೆ. ನಿರ್ದಿಷ್ಟ ಸಂಸ್ಥೆ ಮಂಡಳಿಗೆ ಲ್ಯಾಪ್‌ಟಾಪ್‌ ಪೂರೈಕೆ ಮಾಡಿದ ಅನಂತರದಲ್ಲಿ ಜಿಲ್ಲಾ ಉಪನಿರ್ದೇಶಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅದನ್ನು ಹಸ್ತಾಂತರಿಸಲಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ.

ರಾಜ್ಯದ ಅಂಕಿಅಂಶ
ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದಲ್ಲಿ ಪ್ರಥಮ ಬಂದಿರುವ (ಸಮಾನ ಅಂಕ ಪಡೆದ ವಿದ್ಯಾರ್ಥಿಗಳನ್ನು ಒಳಗೊಂಡಂತೆ) 127 ವಿದ್ಯಾರ್ಥಿಗಳಿಗೆ ಹಾಗೂ ವಲಯ ಮಟ್ಟದಲ್ಲಿ ಪ್ರಥಮ ಬಂದಿರುವ 696 ವಿದ್ಯಾರ್ಥಿಗಳು ಸೇರಿ 823 ವಿದ್ಯಾರ್ಥಿಗಳಿಗೆ ಈ ವರ್ಷ ಲ್ಯಾಪ್‌ಟಾಪ್‌ ಸಿಗಲಿದೆ.

Advertisement

ಸರಕಾರಿ ಪ್ರೌಢಶಾಲೆಯಲ್ಲಿ ಓದಿ ಜಿಲ್ಲೆ ಅಥವಾ ತಾಲೂಕಿಗೆ ಟಾಪ್‌ ಬಂದಿರುವ ತಲಾ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗುತ್ತದೆ. ಈ ಸಂಬಂಧ ಮಾಹಿತಿ ನೀಡುವಂತೆ ಮಂಡಳಿಯಿಂದ ಸೂಚನೆ ಬಂದಿದೆ. ಮಾಹಿತಿ ಸಂಗ್ರಹಿಸಿ, ಪರಿಶೀಲಿಸಿ ಶೀಘ್ರದಲ್ಲೇ ಸಲ್ಲಿಸಲಾಗುತ್ತದೆ.
– ಶಿವರಾಜ್‌, ಸುಧಾಕರ್‌, ಡಿಡಿಪಿಐ ಉಡುಪಿ ಮತ್ತು ದ.ಕ.

Advertisement

Udayavani is now on Telegram. Click here to join our channel and stay updated with the latest news.

Next