ಬೆಂಗಳೂರು: ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಇನ್ನಷ್ಟು ವಿಳಂಬವಾಗಲಿದೆ.
ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ನೀಡಲು ರಾಜ್ಯ ಸರ್ಕಾರ 2016ರಲ್ಲೇ ಕಾರ್ಯಯೋಜನೆ ಸಿದ್ಧಪಡಿಸಿತ್ತು. ಅದರಂತೆ,2016-17ನೇ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜು ಸೇರಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇ-ಕಂಟೆಂಟ್ ತುಂಬಿರುವ ಲ್ಯಾಪ್‌ಟಾಪ್ ವಿತರಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಮೊದಲ ವರ್ಷ ಪೂರ್ಣಗೊಂಡು, ಎರಡನೇ ವರ್ಷದ ಮೂರನೇ ಸೆಮಿಸ್ಟರ್ ಮುಗಿಯುತ್ತಿದೆ. ಆದರೂ, ಲಾಪ್‌ಟಾಪ್ ಮಾತ್ರ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಕೈ ಸೇರಿಲ್ಲ.
ತಾಂತ್ರಿಕ ಶಿಕ್ಷಣ ಇಲಾಖೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 14,490 ರೂ.ಗಳ ಇ-ಕಂಟೆಂಟ್ ತುಂಬಿದ ಲ್ಯಾಪ್‌ಟಾಪ್ ವಿತರಣೆಯಾಗಲಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ವಿತರಿಸಲು 2,224 ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿತರಿಸಲು 1,114 ಲ್ಯಾಪ್‌ಟಾಪ್ ಈಗಾಗಲೇ ಪೂರೈಕೆಯಾಗಿದೆ. ಉಳಿದ ಲ್ಯಾಪ್‌ಟಾಪ್ ಇನ್ನಷ್ಟೇ ಪೂರೈಕೆಯಾಗಬೇಕಿದೆ.
ಕಾಲೇಜಿಗೆ ಪೂರೈಕೆಯಾಗುವ ಲಾಪ್‌ಟಾಪ್‌ಗ್ಳ ಗುಣಮಟ್ಟ ಪರಿಶೀಲಿಸಿ ದೃಢೀಕರಿಸಿದ ನಂತರವೇ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕು. ಲ್ಯಾಪ್‌ಟಾಪ್ ಪೂರೈಸುವ ಸಂಸ್ಥೆಯ ಪ್ರತಿನಿಧಿಗಳೇ ಕಾಲೇಜಿಗೆ ಭೇಟಿನೀಡಿ, ಲ್ಯಾಪ್‌ಟಾಪ್‌ಗ್ಳ ಪೋಸ್ಟ್ ಡೆಲಿವರಿ ತಪಾಸಣೆ ಮಾಡಿ, ವರದಿಯ ಜತೆಗೆ ವಿತರಣೆಯಾದ ಲ್ಯಾಪ್‌ಟಾಪ್ ಸಂಖ್ಯೆ, ತಪಾಸಣೆ ಮಾಡಬೇಕಾದ ಲ್ಯಾಪ್‌ಟಾಪ್ ವಿವರವನ್ನು ನೀಡುವಂತೆ ಸೂಚಿಸಿದೆ.
2018ರ ಜನವರ ಮೊದಲ ವಾರದೊಳಗೆ ಫಲಾನುಭವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಒದಗಿಸಲಿದ್ದೇವೆ. ಕೆಲವೊಂದು ಕಾಲೇಜಿಗೆ ಲ್ಯಾಪ್‌ಟಾಪ್ ಹಂಚಿಕೆಯಾಗಿದೆ. ಪ್ರಸಕ್ತ ವರ್ಷದ ಲ್ಯಾಪ್‌ಟಾಪ್‌ಗೆ ಈಗಷ್ಟೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು.ತಳವಾರ ಮಾಹಿತಿ ನೀಡಿದರು.