ಚೆನ್ನೈ: ಎದುರಾಳಿ ತಂಡದ ಪ್ರಮುಖ ಬೌಲರ್‌ನ ಶೈಲಿಯನ್ನೇ ಹೊಂದಿರುವ ಎಸೆತಗಾರನನ್ನು ಟೀಮ್ ಇಂಡಿಯಾ ತನ್ನ ನೆಟ್ಸ್‌ನಲ್ಲಿ ಬಳಸಿಕೊಳ್ಳುವುದು ಮಾಮೂಲು. ನೂತನ ಕೋಚ್ ಗೌತಮ್ ಗಂಭೀರ್ ಹಾಗೂ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕೂಡ ಇದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಸೆ.19ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧದ ಟೆಸ್ಟ್‌ಗಾಗಿ ಚೆನ್ನೈಯಲ್ಲಿ ಅಭ್ಯಾಸ ನಿರತರಾಗಿರುವ ಭಾರತ ತಂಡದ ನೆಟ್ಸ್‌ನಲ್ಲಿ ಪಂಜಾಬ್‌ನ ನೀಳಕಾಯದ ಪೇಸ್ ಬೌಲರ್ ಗುರ್ನೂರ್ ಬ್ರಾರ್ ಅವರ ಸೇವೆಯನ್ನು ಬಳಸಿಕೊಳ್ಳಲಾಗಿದೆ.
ಬಾಂಗ್ಲಾದೇಶದ ಅಪಾಯಕಾರಿ ಬೌಲರ್ ನಾಹಿದ್ ರಾಣಾ ಅವರನ್ನು ಎದುರಿಸುವ ಸಲುವಾಗಿ, ಅವರ ಬೌಲಿಂಗ್ ಶೈಲಿಯನ್ನೇ ಹೋಲುವ ಗುರ್ನೂರ್ ಬ್ರಾರ್ ಅವರ ನೆರವನ್ನು ಪಡೆಯಲಾಗಿದೆ. ಕಳೆದ ಪಾಕಿಸ್ತಾನ ಪ್ರವಾಸದ ವೇಳೆ 6 ಅಡಿ-5 ಇಂಚು ಎತ್ತರದ, ರಾಣಾ ಅವರ ಹೈ ಆರ್ಮ್ ಆ್ಯಕ್ಷನ್ ಎಸೆತಗಳನ್ನು ಎದುರಿಸಿ ನಿಲ್ಲಲು ಆತಿಥೇಯ ಬ್ಯಾಟರ್‌ಗಳಿಗೆ ಸಾಧ್ಯವಾಗಿರಲಿಲ್ಲ.
ನೀಳಕಾಯದ ಎಸೆತಗಾರ:
24 ವರ್ಷದ ಬ್ರಾರ್ ಕೂಡ 6 ಅಡಿ-4.5 ಇಂಚು ಎತ್ತರವಿದ್ದು, ಈವರೆಗೆ 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಶನಿವಾರದ ಅಭ್ಯಾಸದ ವೇಳೆ ಬೌಲಿಂಗ್ ಕೋಚ್ ಮಾರ್ಕೆಲ್ ಅವರು ಸ್ಟಾರ್ ಬ್ಯಾಟರ್‌ಗಳಿಗೆ ಹೇಗೆ ಬೌಲಿಂಗ್ ನಡೆಸಬೇಕೆಂದು ಬ್ರಾರ್ ಅವರಿಗೆ ಸಲಹೆಯಿತ್ತರು.
ಮುಬೈಯ ಆಫ್ ಸ್ಪಿನ್ನರ್ ಹಿಮಾಂಶು ಸಿಂಗ್ ಕೂಡ ನೆಟ್ಸ್‌ನಲ್ಲಿದ್ದಾರೆ. ಇವರದು ಆರ್. ಅಶ್ವಿನ್ ಅವರ ಬೌಲಿಂಗ್ ಶೈಲಿಯಾಗಿದೆ. ಹಾಗೆಯೇ ತಮಿಳುನಾಡಿನ ನಿಧಾನ ಗತಿಯ ಎಡಗೈ ಬೌಲರ್ ಎಸ್. ಅಜಿತ್ ರಾಮ್ ಅವರನ್ನೂ ನೆಟ್ಸ್‌ಗೆ ಕರೆಸಿಕೊಳ್ಳಲಾಗಿದೆ.
ತ್ರಿವಳಿ ಸ್ಪಿನ್ ದಾಳಿ?:
ಶನಿವಾರದ ನೆಟ್ಸ್‌ನಲ್ಲಿ ಪೇಸರ್‌ಗಳಾದ ಆಕಾಶ್ ದೀಪ್ ಮತ್ತು ಯಶ್ ದಯಾಳ್ ಅವರು ಬುಮ್ರಾಗಿಂತ ಹೆಚ್ಚು ಎಸೆತಗಳನ್ನಿಕ್ಕಿದರು. ಆದರೆ ಚೆನ್ನೈಯಲ್ಲಿ ತ್ರಿವಳಿ ಸ್ಪಿನ್ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಇವರಿಬ್ಬರೂ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಬಾಂಗ್ಲಾದೇಶ ತಂಡ ಭಾನುವಾರ ಬಿಗಿ ಭದ್ರತೆಯಲ್ಲಿ ಚೆನ್ನೈಗೆ ಆಗಮಿಸಲಿದೆ.