Advertisement

ಇತಿಹಾಸದ ಗೆರೆದಾಟಿ ಸಮಕಾಲೀನವಾದ ಗುಣಮುಖ

02:40 PM Mar 10, 2018 | |

ನಾಟಕಕಾರನ ಚಿತ್ರಕ ಜಗತ್ತು ಒಂದು ಚಿತ್ರ ಕಟ್ಟಿಕೊಡುತ್ತದೆ. ಆ ಚಿತ್ರದಲ್ಲಿ ಕದಲುವ ಬದುಕು ಇತಿಹಾಸದ್ದಾಗಿರಬಹುದು, ಅಥವಾ ವರ್ತಮಾನದ್ದಾಗಿರಬಹುದು. ಹಾಗೊಂದು ವೇಳೆ ಅದು ವರ್ತಮಾನದ ಹಸಿ ಚಿತ್ರಗಳೇ ಆಗಿದ್ದಲ್ಲಿ ಮುಂದಿನ ಪ್ರಯೋಗದ ಹೊತ್ತಿಗೆ ಆ ಹಿಂದಿನ ಪ್ರಯೋಗ ಹಳತಾಗಿರುತ್ತದೆ. ಆದರೆ, ಕೆಲವು ರಂಗಕೃತಿಗಳು ಇತಿಹಾಸದ ದಾಖಲಾತಿಗಳಿಂದ ಕಥನ ಆರಂಭಿಸಿದರೂ ಅದು ಸದಾ ಮಾರ್ಪಾಡಿಗೆ ಗುರಿಯಾಗುವ ವರ್ತಮಾನದ ಚಿತ್ರಗಳಿಗೆ ಪೂರಕವಾಗಿಯೇ ಇರುತ್ತದೆ. ಕೃತಿಯೊಂದರಲ್ಲಿ ರೂಪಕಗಳು ಹೀಗೆ ಅಡಕಗೊಂಡಿರುತ್ತವೆ. ವರ್ತಮಾನಕ್ಕೆ ತಮ್ಮನ್ನು ತಾವು ವಿಸ್ತರಿಸಿಕೊಳ್ಳುತ್ತಲೇ ಇರುತ್ತವೆ. ಈ ಎಲ್ಲವೂ ಕೃತಿಯಲ್ಲಿನ ಸಾಧ್ಯತೆಗಳ ಮಾತಾಯಿತು. ಹೀಗಿದ್ದರೂ ಇದೊಂದು ರೀತಿಯಲ್ಲಿ ನಾಟಕಕಾರನ ಚಿತ್ರಕ ಜಗತ್ತು ಇಲ್ಲಿಗೆ ಸ್ಥಗಿತವಾದಂತೆ ಎಂದರೂ ಸರಿ.

Advertisement

ಆದರೆ, ರಂಗನಿರ್ದೇಶಕನ, ಅದರಲ್ಲೂ ಸೃಜನಶೀಲ ರಂಗನಿರ್ದೇಶಕ- ನಾಟಕಕಾರನ ಚಿತ್ರಕ ನಿರ್ಮಿತಿಗಳನ್ನು ದಾಟಿ ಮುಂದೆ ನಡೆಯುತ್ತಾನೆ. ಇಡೀ ನಾಟಕ ಕಟ್ಟುವಲ್ಲಿ ಆತನ ದರ್ಶನ ಬೇರೊಂದು ಚಿತ್ರಕಟ್ಟಿಕೊಳ್ಳುತ್ತದೆ. ಆ ದರ್ಶನದಲ್ಲೇ ಆತನ  ಸ್ಪಂದನೆಯ ರೂಪಗಳು ಕಾಣಿಸುತ್ತಿರುತ್ತವೆ. ಇತಿಹಾಸಕ್ಕೇ ಸೀಮಿತವಾಗಿ ನಿರ್ದೇಶನದ ತಮ್ಮ ಹೆಣಿಗೆ ಆರಂಭಿಸಿದರೆ ಅಲ್ಲಿನ ಪಾತ್ರಗಳ ಮಾತಿಂದ ನೋಡುಗರು ವರ್ತಮಾನದ ಸುಳುಹುಗಳನ್ನು ಚಿತ್ರಿಸಿಕೊಳ್ಳಬೇಕಷ್ಟೆ. ಆದರೆ ನಿರ್ದೇಶಕ, ಕೃತಿಕಾರನ ಚೌಕಟ್ಟನ್ನು ತನ್ನ ಸೃಜನಶೀಲ ನೆಲೆಯಲ್ಲಿ ವಿಸ್ತರಿಸುವ ಕೆಲಸ ಮಾಡಿದರೆ ಅದಕ್ಕೆ ಒದಗುವ ಆಯಾಮವೇ ಬೇರೆ. ಅದು ದೃಶ್ಯ ಕಟ್ಟುವಲ್ಲಿನ ಸೃಜನಶೀಲತೆಗೆ ಸಂಬಂಧಿಸಿದ್ದು.

ನಗರದಲ್ಲಿ ನಡೆಯುತ್ತಿರುವ ಥಿಯೇಟರ್‌ ಒಲಿಂಪಿಕ್ಸ್‌ ರಂಗಪ್ರದರ್ಶನಗಳಲ್ಲಿ ಈಚೆಗೆ ಇಂಥ ಕೆಲಸ ಮೈಸೂರಿನ ಜನಸಂಸ್ಕೃತಿ ತಂಡ ಪ್ರದರ್ಶಿಸಿದ ಲಂಕೇಶರ ಗುಣಮುಖ ನಾಟಕದಲ್ಲಿ ಕಂಡಿತು. ರೋಗವನ್ನು ಲಂಕೇಶ್‌ ಈ ನಾಟಕದಲ್ಲಿ ರೂಪಕವಾಗಿ ಬಳಸಿರುವುದನ್ನು ನಿರ್ದೇಶಕರಾದ ಸಿ.ಬಸವಲಿಂಗಯ್ಯನವರು ತಮ್ಮ ಪರಿಕಲ್ಪನೆಯಲ್ಲಿ ಚಿತ್ರಿಸಿಕೊಂಡಿರುವ ರೀತಿ ಅನನ್ಯ. ಪಾತ್ರ ಐತಿಹಾಸಿಕವಾದದ್ದೆ; ಆದರೆ, ಪಾತ್ರಗಳು ತಮ್ಮ ದನಿ ತೆರೆಯಲಿಕ್ಕೆ ಕಟ್ಟಿರುವ ಆವರಣ ಮಾತ್ರ ಬೇರೆ. ಕೃತಿಕಾರರಿಗೆ ನಾದಿರ್‌ ಒಬ್ಬ ರೋಗಗ್ರಸ್ತನಾಗಿ ಕಂಡು ಅದರ ಮೂಸೆಯಿಂದ ಮಾತುಗಳನ್ನು ಹೊರಡಿಸಿದರೆ ಬಸವಲಿಂಗಯ್ಯನವರಿಗೆ ಇದು ಚಿತ್ರವಾಗಿ ಬೇರೆಯಾಗಿ ಕಂಡಿದೆ. ಅವರು ನಾದಿರ್‌ ಪಾತ್ರವನ್ನು ಐದು ಪಾತ್ರಗಳಾಗಿ ಒಡೆದಿರುವುದರ ಹಿಂದೊಂದು ದರ್ಶನವಿದೆ. ಅವರ ಪ್ರಕಾರ, ಮನುಷ್ಯನ ಐದು ಇಂದ್ರಿಯಗಳು ಕುಸಿದಾಗ ಒಬ್ಬ ನಾದಿರ್‌ ಹುಟ್ಟಿಕೊಳ್ಳುತ್ತಾನೆ. ಹಾಗಾಗಿ, ಅದನ್ನು ಸಂಕೇತವಾಗಿ ಕಾಣಿಸಿದ್ದರು. ಜೊತೆಗೆ ನಾದಿರ್‌ ನರಳುವುದರ ನಡುವೆ ಬೇರೆಬೇರೆ ಛಾಪುಗಳನ್ನು ನಿರ್ಮಿಸಿಕೊಂಡಿದ್ದರು. ಮಂದಗತಿಗೆ ಒಬ್ಬ ನಾದಿರ್‌; ತೀವ್ರ ಹಪಹಪಿಗೆ ಒಬ್ಬ ನಾದಿರ್‌, ವಿಕ್ಷಿಪ್ತಗೊಳ್ಳುವಾಗ ವåತ್ತೂಬ್ಬ ನಾದಿರ್‌. ಆ ನಾದಿರ್‌ನ ಉಸಿರುಕಟ್ಟಿರುವ ಜೀವನವನ್ನು ನಿರ್ದೇಶಕರು ಗಾಜಿನ ನಿರ್ವಾತದಲ್ಲಿ ಆತನನ್ನು ನಿಲ್ಲಿಸಿ ಸಂಭಾಷಣೆ ಹೇಳಿಸಿರುವುದು, ಆತನ ಸ್ಥಿತಿಯನ್ನು ಬಿಂಬಿಸುತ್ತಿತ್ತು. ಮಿಗಿಲಾಗಿ ಐತಿಹಾಸಿಕ ಪಾತ್ರಗಳ ಪೋಷಾಕುಗಳಿದ್ದರೂ ಆಸ್ಪತ್ರೆಯ ವಿನ್ಯಾಸ ಮಾತ್ರ ಇಂದಿನದ್ದೇ. ಬೆಡ್ಡುಗಳೂ ಇಂದಿನವೇ. ಅದರ ಮೇಲೆ ರೋಗಗ್ರಸ್ತ ನಾದಿರ್‌. ಇದು ಎರಡು ಕಾಲಘಟ್ಟಗಳನ್ನು ತುಂಬಾ ಸೂಚ್ಯವಾಗಿ ಬೆಸೆದು ನಾಟಕದ ಧ್ವನಿಯನ್ನು ಸಮರ್ಥವಾಗಿ ಹೇಳಿತು.

ಇಂಗದ ದಾಹದಿಂದ ನಾದಿರ್‌ ಹೇಗೆ ರೋಗಗ್ರಸ್ತನಾಗಿದ್ದಾನೆ ಮತ್ತು ರಕ್ತಪಿಪಾಸುವಾಗಿದ್ದಾನೆ ಎಂಬುದನ್ನು ನಾಟಕ ಕಟ್ಟಿಕೊಡುತ್ತದೆ. ತನ್ನ ಸುತ್ತಲಿನ ಒಳಹೊರಗುಗಳಲ್ಲಿನ ತಟವಟಗಳಿಗೆ ಹುಚ್ಚನಂತಾಗಿ ಕೆರಳುವ ನಾದಿರ್‌ ಸುಲಭಕ್ಕೆ ಗುಣಹೊಂದದ ವ್ಯಾಧಿಗೆ ತುತ್ತಾಗಿ ಮತ್ತಷ್ಟು ವ್ಯಗ್ರನಾಗುತ್ತಾನೆ. ರೋಗ ದೇಹಕ್ಕೆ ಸಂಬಂಧಿಸಿದ್ದಾಗಿರದೇ, ಅದು ಹೃದಯದಲ್ಲಿ ಹೆಪ್ಪುಗಟ್ಟಿರುವ ದಾಹ, ಕ್ರೌರ್ಯ ಮತ್ತು ರಕ್ತಪಿಪಾಸುವಾಗುವ ದಾರ್ಷ್ಟ್ಯ ಎಲ್ಲಕ್ಕೆ ಮದ್ದು ಸುಲಭದ್ದಲ್ಲ.

ಈ ಆಶಯ ಹೇಳಲಿಕ್ಕೆ ಮತ್ತು ಈ ರೂಪಕವನ್ನು ಗ್ರಹಿಸಲಿಕ್ಕೆ ಬಸವಲಿಂಗಯ್ಯನವರು ಒಂದು ಆಸ್ಪತ್ರೆಯ ರೂಪ ತಂದು ನಾದಿರ್‌ನ ನರಳಾಟ ಮತ್ತು ನೋವಿನ ಸ್ಥಿತಿ, ಭ್ರಾಮಕತೆ ಎಲ್ಲವನ್ನೂ ಇಂದಿನ ಸಂದರ್ಭಕ್ಕೆ ಜೋಡಿಸಿದ್ದದ್ದು ಪೂರಕವಾಗಿತ್ತು. ನಟನೆ, ರಂಗತಂತ್ರ, ರಂಗವಿವ್ಯಾಸ, ಬೆಳಕು ಎಲ್ಲವೂ ಉತ್ತಮ. ಕೃತಿಕಾರ ಮತ್ತು ನಿರ್ದೇಶಕರ ಆಶಯ ನೋಡುಗರಲ್ಲಿ ಬೇರೆ ಬೇರೆ ರೀತಿಯಲ್ಲಿ ವಿಸ್ತರಿಸಿದದ್ದು ನಾಟಕ ಪ್ರದರ್ಶನದ ನಂತರ ನಡೆದ ಪುಟ್ಟ ಸಂವಾದದಲ್ಲಿ ಸಾಬೀತಾಯಿತು. 

Advertisement

ಎನ್‌.ಸಿ. ಮಹೇಶ್‌ 

Advertisement

Udayavani is now on Telegram. Click here to join our channel and stay updated with the latest news.

Next