Advertisement

ಐಸಿಸ್‌ನಿಂದ ಲಂಕಾ ರಕ್ತಪಾತ : 321ಕ್ಕೆ ಏರಿದ ಸಾವಿನ ಸಂಖ್ಯೆ

12:22 PM Apr 24, 2019 | Team Udayavani |

ಕೊಲಂಬೋ: ರಕ್ತಪಿಪಾಸುಗಳಾದ ಐಸಿಸ್‌ ಉಗ್ರರ ಮೂಲೋತ್ಪಾಟನೆ ಆಯಿತೆಂದು ನಿಟ್ಟುಸಿರು ಬಿಡುವ ಮುನ್ನವೇ ದಕ್ಷಿಣ ಏಷ್ಯಾದಲ್ಲಿ ಆ ವಿಷವೃಕ್ಷ ಚಿಗುರೊಡೆದಿರುವುದು ಸಾಬೀತಾಗಿದೆ. ಶ್ರೀಲಂಕಾದಲ್ಲಿ ಈಸ್ಟರ್‌ ರವಿವಾರ  (ಎ. 21)ದಂದು ನಡೆದ ಸರಣಿ ಸ್ಫೋಟಗಳನ್ನು ತಾನೇ ನಡೆಸಿದ್ದಾಗಿ ಐಸಿಸ್‌ ಘೋಷಿಸಿಕೊಂಡಿದೆ.

Advertisement

ಈ ಕುರಿತಂತೆ ಪ್ರಕಟನೆ ನೀಡಿರುವ ಸರಕಾರದ ವಕ್ತಾರ ರಜಿತಾ ಸೇನರತ್ನೆ, ಲಂಕಾದಲ್ಲಿರುವ ನ್ಯಾಶನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಎಂಬ ಉಗ್ರ ಸಂಘಟನೆಯ ಸಹಾಯದಿಂದ ಸರಣಿ ಸ್ಫೋಟಗಳನ್ನು ನಡೆಸಲಾಗಿದೆ. ಈಸ್ಟರ್‌ ರವಿವಾರ ಆತ್ಮಾಹುತಿ ದಾಳಿ ನಡೆಸಿದವರೆಲ್ಲರೂ ಶ್ರೀಲಂಕಾದ ಪ್ರಜೆಗಳೇ ಆಗಿದ್ದಾರೆ ಎಂದಿದ್ದಾರೆ. ಏತನ್ಮಧ್ಯೆ ಸರಣಿ ಸ್ಫೋಟಗಳಲ್ಲಿ ಮೃತಪಟ್ಟವರ ಸಂಖ್ಯೆ 321ಕ್ಕೇರಿದೆ.

ಪ್ರತೀಕಾರದ ಸ್ಫೋಟ
ಕೆಲವು ವಾರಗಳ ಹಿಂದೆ ನ್ಯೂಜಿಲೆಂಡ್‌ನ‌ ಕ್ರೈಸ್ಟ್‌ ಚರ್ಚ್‌ನಲ್ಲಿ ಎರಡು ಮಸೀದಿಗಳ ಮೇಲೆ ನಡೆಸಲಾದ ಮತೀಯ ದಾಳಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ಈಸ್ಟರ್‌ ದಾಳಿಗಳನ್ನು ನಡೆಸ ಲಾಗಿದೆ ಎಂದು ಶ್ರೀಲಂಕಾದ ರಕ್ಷಣಾ ಇಲಾಖೆಯ ಸಹಾಯಕ ಸಚಿವ ರುವಾನ್‌ ವಿಜಯವರ್ಧನೆ ತಿಳಿಸಿದ್ದಾರೆ.

ದಾಳಿಕೋರರಲ್ಲಿ ಇಬ್ಬರು ಸಹೋದರರು
ದಾಳಿಕೋರರಲ್ಲಿ ಶ್ರೀಲಂಕಾದ ಇಬ್ಬರು ಮುಸ್ಲಿಂ ಸಹೋದರರಿದ್ದರು ಎಂದು ಲಂಕಾ ಸರಕಾರ ತಿಳಿಸಿದೆ. ಇವರಿಬ್ಬರ ಹೆಸರನ್ನು ಸರಕಾರ ಬಹಿರಂಗಗೊಳಿಸಿಲ್ಲ. 20ರ ಹರೆಯದ ಇವರು ಕೊಲಂಬೋದಲ್ಲಿ ಮಸಾಲೆ ಪದಾರ್ಥಗಳ ವ್ಯಾಪಾರ ಮಾಡುತ್ತಿರುವ ಶ್ರೀಮಂತ ವ್ಯಾಪಾರಿಯೊಬ್ಬರ ಮಕ್ಕಳು. ಒಬ್ಟಾತ ಶಾಂಗ್ರಿಲಾ ಹೊಟೇಲ್‌ನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡರೆ, ಮತ್ತೂಬ್ಬ ಸಿನ್ನೆಮನ್‌ ಗ್ರಾಂಡ್‌ ಹೊಟೇಲಿನಲ್ಲಿ ಸ್ಫೋಟಿಸಿಕೊಂಡಿದ್ದಾನೆ. ಈ ಇಬ್ಬರೂ ಇಸ್ಲಾಮಿಸ್ಟ್‌ ನ್ಯಾಶನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆಯ ಸದಸ್ಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಮೆ ಕೋರಿದ ಸರಕಾರ
ಸ್ಫೋಟಗಳ ಬಗ್ಗೆ ಮಾಹಿತಿಯಿದ್ದರೂ ಅದನ್ನು ತಡೆಯುವಲ್ಲಿ ವಿಫ‌ಲವಾಗಿದ್ದಕ್ಕೆ ಸರಕಾರದ ಪರವಾಗಿ ಸೇನಾರತ್ನೆ ಲಂಕಾ ಜನತೆಯ ಕ್ಷಮೆ ಕೋರಿದ್ದಾರೆ. ಕೆಲವು ದಿನಗಳ ಮೊದಲೇ ಗುಪ್ತಚರ ಇಲಾಖೆಯಿಂದ ಸಂಭಾವ್ಯ ಸ್ಫೋಟಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ ಸ್ಫೋಟಗಳಿಂದ ಜನರನ್ನು ರಕ್ಷಿಸುವಲ್ಲಿ ಸರಕಾರ ಎಡವಿದೆ. ಇದಕ್ಕಾಗಿ ಕ್ಷಮೆ ಕೋರುತ್ತಿದ್ದೇವೆ ಎಂದಿದ್ದಾರೆ.

Advertisement

ಮೌನ ಶ್ರದ್ಧಾಂಜಲಿ
ಈಸ್ಟರ್‌ ಸ್ಫೋಟಗಳಲ್ಲಿ ಮಡಿದ ದುರ್ದೈವಿಗಳ ಸ್ಮರಣಾರ್ಥ ಮಂಗಳವಾರ ಬೆಳಗ್ಗೆ ಲಂಕಾದ್ಯಂತ ಮೂರು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

40 ಶಂಕಿತರ ¬ಬಂಧನ
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಶ್ರೀಲಂಕಾ ಪೊಲೀಸರು ಮತ್ತೆ 16 ಮಂದಿಯನ್ನು ವಶಕ್ಕೆ ಪಡೆದಿದ್ದು, ಈವರೆಗೆ ಬಂಧಿಸಲ್ಪಟ್ಟ ಶಂಕಿತರ ಸಂಖ್ಯೆ 40ಕ್ಕೇರಿದೆ. ಇವರಲ್ಲಿ ಸ್ಫೋಟ ನಡೆದ ಚಚೊìಂದರ ಸಮೀಪ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ವ್ಯಾನೊಂದರ ಚಾಲಕನೂ ಸೇರಿದ್ದಾನೆ.

ಮತ್ತೂಂದು ಸ್ಫೋಟದ ಸಂಚು?
ಭಾರೀ ಪ್ರಮಾಣದ ಸ್ಫೋಟಕಗಳನ್ನು ತುಂಬಿ ಕೊಂಡಿರುವ ಒಂದು ಟ್ರಕ್‌ ಮತ್ತು ಒಂದು ವ್ಯಾನು ಕೊಲಂಬೋ ಪ್ರವೇಶಿಸಿವೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ಕೊಲಂಬೋದ ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್‌ ಠಾಣೆಗಳಿಗೆ ಸರಕಾರ ಸೂಚನೆ ರವಾನಿಸಿದೆ.

ಮತ್ತಿಬ್ಬರು ಕನ್ನಡಿಗರ ಸಾವು
ಈಸ್ಟರ್‌ ಸ್ಫೋಟಗಳಲ್ಲಿ ಅಸುನೀಗಿದ ಕರ್ನಾಟಕದವರ ಸಂಖ್ಯೆ 7ಕ್ಕೇರಿದೆ. ಕೊಲಂಬೋ ದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಕುರಿತಂತೆ ಟ್ವೀಟ್‌ ಮಾಡಿದ್ದು, ಕರ್ನಾಟಕದ ಎ. ಮರಿಗೌಡ ಮತ್ತು ಎಚ್‌. ಪುಟ್ಟರಾಜು ಸಾವಿಗೀಡಾಗಿದ್ದಾರೆಂದು ತಿಳಿಸಿದೆ. ಇವರ ಸಹಿತ ಮೃತಪಟ್ಟ ಭಾರತೀಯರ ಸಂಖ್ಯೆ 10ಕ್ಕೇರಿದೆ. ಸೋಮವಾರ ರಮೇಶ್‌ ಗೌಡ, ಕೆ.ಎಂ. ಲಕ್ಷಿ$¾àನಾರಾಯಣ, ಶಿವಕುಮಾರ್‌, ಕೆ.ಜಿ. ಹನುಮಂತರಾಯಪ್ಪ ಮತ್ತು ರಂಗಪ್ಪ ಸಾವನ್ನಪ್ಪಿರುವುದು ಖಚಿತವಾಗಿತ್ತು. ಆದರೆ ಕಾಣೆಯಾಗಿದ್ದ ನಾಗರಾಜ ರೆಡ್ಡಿ, ಮರಿಗೌಡ, ಪುಟ್ಟರಾಜು ಅವರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.

ಮಂಗಳವಾರ ಮರಿಗೌಡ ಮತ್ತು ಪುಟ್ಟರಾಜು ಅವರು ಸಾವಿಗೀಡಾಗಿರುವುದು ಖಚಿತಗೊಂಡಿದೆ.

ಭಾರತ ಮಾಹಿತಿ ನೀಡಿತ್ತು: ಪ್ರಧಾನಿ ವಿಕ್ರಮಸಿಂಘೆ
ಈಸ್ಟರ್‌ ರವಿವಾರದ ಸರಣಿ ಸ್ಫೋಟಗಳಿಗೆ ಸಂಬಂಧಿಸಿ ತನಗೆ ಸಿಕ್ಕಿದ್ದ ಕೆಲವು ಗುಪ್ತಚರ ಮಾಹಿತಿಗಳನ್ನು ಭಾರತವು ಶ್ರೀಲಂಕಾಕ್ಕೆ ನೀಡಿತ್ತು ಎಂದು ಶ್ರೀಲಂಕಾದ ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ತಿಳಿಸಿದ್ದಾರೆ. ಎನ್‌ಡಿಟಿವಿಗೆ ಮಂಗಳವಾರ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಚಾರ ತಿಳಿಸಿರುವ ಅವರು, ಸ್ಫೋಟಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆ ಭಾರತ ಮಾಹಿತಿ ನೀಡಿತ್ತು. ಆದರೆ ಅವನ್ನು ತಡೆಯುವಲ್ಲಿ ಲಂಕಾ ಸರಕಾರ ಎಡವಿದೆ ಎಂದು ಹೇಳಿದ್ದಾರೆ. ಸರಣಿ ಸ್ಫೋಟಗಳ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಚೀನ, ಪಾಕಿಸ್ಥಾನದಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next