Advertisement

Asia Cup: ಲಂಕಾ ಲಾಗ- ಫೈನಲ್‌ಗೆ ಟೀಮ್‌ ಇಂಡಿಯಾ

12:26 AM Sep 13, 2023 | Team Udayavani |

ಕೊಲಂಬೊ: ಶ್ರೀಲಂಕಾದ ಸ್ಪಿನ್‌ ದಾಳಿಗೆ ತತ್ತರಿಸಿದ ಬಳಿಕ ಬೌಲಿಂಗ್‌ ಮೂಲಕ ತಿರುಗೇಟು ನೀಡಿದ ಭಾರತ, ಮಂಗಳವಾರದ ಸಣ್ಣ ಮೊತ್ತದ ಸೂಪರ್‌-4 ಪಂದ್ಯವನ್ನು 41 ರನ್ನುಗಳಿಂದ ಗೆದ್ದು ಏಷ್ಯಾ ಕಪ್‌ ಫೈನಲ್‌ ಪ್ರವೇಶಿಸಿದೆ. ಇನ್ನೊಂದು ಫೈನಲ್‌ ಟಿಕೆಟ್‌ ಗುರುವಾರದ ಶ್ರೀಲಂಕಾ-ಪಾಕಿಸ್ಥಾನ ನಡುವಿನ ವಿಜೇತ ತಂಡಕ್ಕೆ ಲಭಿಸಲಿದೆ. ಭಾರತದ ಮುಂದಿನ ಎದುರಾಳಿ ಬಾಂಗ್ಲಾದೇಶ. ಈ ಪಂದ್ಯ ಶುಕ್ರವಾರ ನಡೆಯಲಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 49.1 ಓವರ್‌ಗಳಲ್ಲಿ 213ಕ್ಕೆ ಆಲೌಟಾದರೆ, ಶ್ರೀಲಂಕಾ 41.3 ಓವರ್‌ಗಳಲ್ಲಿ 172ಕ್ಕೆ ಕುಸಿಯಿತು.

ಆರಂಭದಲ್ಲಿ ವೇಗಕ್ಕೆ ತತ್ತರಿಸಿದ ಲಂಕಾ ಪಡೆ, ಬಳಿಕ ಸ್ಪಿನ್ನಿಗೆ ಅದುರಿತು. 99ಕ್ಕೆ 6 ವಿಕೆಟ್‌ ಬಿತ್ತು. ಈ ನಡುವೆ ಧನಂಜಯ ಡಿಸಿಲ್ವ (41) ಮತ್ತು ಬೌಲಿಂಗ್‌ ಹೀರೋ ದುನಿತ್‌ ವೆಲ್ಲಲಗೆ ಸೇರಿಕೊಂಡು 63 ರನ್‌ ಜತೆಯಾಟ ನಡೆಸಿ ಲಂಕಾ ಹೋರಾಟವನ್ನು ಜಾರಿಯಲ್ಲಿರಿಸಿದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಭಾರತದ ಕೈ ಮೇಲಾಯಿತು.

ಟೀಮ್‌ ಇಂಡಿಯಾ ಸತತ 3ನೇ ದಿನ ಆಡಲಿಳಿದಿತ್ತು. ಪಾಕಿಸ್ಥಾನ ವಿರುದ್ಧ ಪ್ರಚಂಡ ಪರಾಕ್ರಮ ನೀಡಿ ದಾಖಲೆ ಅಂತರದ ಗೆಲುವು ಸಾಧಿಸಿದ ಖುಷಿಯಲ್ಲಿತ್ತಾದರೂ ಆತಿಥೇಯ ಶ್ರೀಲಂಕಾದ ಸ್ಪಿನ್‌ ಮುಂದೆ ಚಡಪಡಿಸಿತು. ಭಾರತದ ಬ್ಯಾಟಿಂಗ್‌ ಸಾಹಸ ರೋಹಿತ್‌ ಶರ್ಮ-ಶುಭಮನ್‌ ಗಿಲ್‌ ಜೋಡಿಗಷ್ಟೇ ಸೀಮಿತಗೊಂಡಿತು. ಇವರಿಬ್ಬರು ಮೊದಲ ವಿಕೆಟಿಗೆ 11.1 ಓವರ್‌ಗಳಿಂದ 80 ರನ್‌ ಪೇರಿಸಿದರು. ಆದರೆ ಮತ್ತೆ 106 ರನ್‌ ರನ್‌ ಒಟ್ಟುಗೂಡುವಷ್ಟರಲ್ಲಿ 9 ವಿಕೆಟ್‌ ಪತನಗೊಂಡಿತು.

ಈ ನಡುವೆ 47 ಓವರ್‌ ಮುಗಿದೊಡನೆ ಮಳೆ ಸುರಿಯಿತು. ಸುಮಾರು 50 ನಿಮಿಷಗಳ ಆಟ ನಷ್ಟವಾಯಿತು. ಆಗ ಭಾರತ 9 ವಿಕೆಟಿಗೆ 197 ರನ್‌ ಮಾಡಿತ್ತು. 50 ನಿಮಿಷಗಳ ಬಳಿಕ ಆಟ ಪುನರಾರಂಭಗೊಂಡಿತು. ಭಾರತದ ಮೊತ್ತ 213ಕ್ಕೆ ಹೋಗಿ ಮುಟ್ಟಿತು.

Advertisement

ಸ್ಪಿನ್ನರ್‌ಗಳಿಗೆ 10 ವಿಕೆಟ್‌
ಭಾರತವನ್ನು ಕಾಡಿದವರೆಂದರೆ ಎಡಗೈ ಸ್ಪಿನ್ನರ್‌ ದುನಿತ್‌ ವೆಲ್ಲಲಗೆ. ಇವರು 40 ರನ್ನಿಗೆ 5 ವಿಕೆಟ್‌ ಉರುಳಿಸಿ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶನವಿತ್ತರು. 4 ವಿಕೆಟ್‌ ಬಲಗೈ ಸ್ಪಿನ್ನರ್‌ ಚರಿತ ಅಸಲಂಕ ಪಾಲಾದವು. ಕೊನೆಯ ವಿಕೆಟ್‌ ಮತೀಶ ತೀಕ್ಷಣ ಉರುಳಿಸಿದರು. ಲಂಕೆಯ ಸ್ಪಿನ್ನರ್ ಎದುರಾಳಿಯ ಎಲ್ಲ ವಿಕೆಟ್‌ಗಳನ್ನು ಉರುಳಿಸಿದ 2ನೇ ನಿದರ್ಶನ ಇದಾಗಿದೆ. ಇದೇ ಅಂಗಳದಲ್ಲಿ ಜಿಂಬಾಬ್ವೆ ವಿರುದ್ಧದ 2011ರ ಪಂದ್ಯದಲ್ಲಿ ಮೊದಲ ಸಲ ಲಂಕೆಯ ಸ್ಪಿನ್ನರ್‌ಗಳು 10 ವಿಕೆಟ್‌ ಕೆಡವಿದ್ದರು.

ಏಕದಿನ ಇತಿಹಾಸದಲ್ಲಿ ಸ್ಪಿನ್ನರ್‌ಗಳೇ ಸೇರಿಕೊಂಡು ಎದುರಾಳಿ ತಂಡದ ಎಲ್ಲ 10 ವಿಕೆಟ್‌ ಉರುಳಿಸಿದ 10ನೇ ಸಂದರ್ಭ ಇದಾಗಿದೆ. ಭಾರತದ ವಿರುದ್ಧ ತಂಡವೊಂದು ಈ ಸಾಧನೆಗೈದದ್ದು ಇದೇ ಮೊದಲು. 1997ರ ಕೊಲಂಬೊ ಪಂದ್ಯದಲ್ಲೇ ಲಂಕೆಯ ಸಿನ್ನರ್‌ಗಳು 9 ವಿಕೆಟ್‌ ಕೆಡವಿದ್ದು ಭಾರತದೆದುರಿನ ಈವರೆಗಿನ ಉತ್ತಮ ಸಾಧನೆಯಾಗಿತ್ತು.

ರೋಹಿತ್‌ ಶತಕಾರ್ಧ
53 ರನ್‌ ಬಾರಿಸಿದ ರೋಹಿತ್‌ ಶರ್ಮ ಭಾರತದ ಟಾಪ್‌ ಸ್ಕೋರರ್‌ (48 ಎಸೆತ, 7 ಫೋರ್‌, 2 ಸಿಕ್ಸರ್‌). ಈ ಸಂದರ್ಭದಲ್ಲಿ ಅವರು ಅನೇಕ ದಾಖಲೆಗಳನ್ನು ಬರೆದರು. ಶುಭಮನ್‌ ಗಿಲ್‌ ಗಳಿಕೆ 19 ರನ್‌. ಗಿಲ್‌ ವಿಕೆಟ್‌ ಉಡಾಯಿಸುವ ಮೂಲಕ ವೆಲ್ಲಲಗೆ ಭಾರತದ ಕುಸಿತಕ್ಕೆ ಮುಹೂರ್ತವಿರಿಸಿದರು.

ಪಾಕಿಸ್ಥಾನ ವಿರುದ್ಧ ಅಮೋಘ ಶತಕ ಬಾರಿಸಿ ಮೆರೆದಿದ್ದ ವಿರಾಟ್‌ ಕೊಹ್ಲಿ ಇಲ್ಲಿ ಗಳಿಸಿದ್ದು ಮೂರೇ ರನ್‌. ಮತ್ತೋರ್ವ ಶತಕವೀರ ಕೆ.ಎಲ್‌. ರಾಹುಲ್‌ 44 ಎಸೆತಗಳಿಂದ 39 ರನ್‌ ಮಾಡಿದರು (2 ಬೌಂಡರಿ). ರೋಹಿತ್‌ ಹೊರತುಪಡಿಸಿದರೆ ರಾಹುಲ್‌ ಅವರದೇ ಹೆಚ್ಚಿನ ಗಳಿಕೆ. ಇಶಾನ್‌ ಕಿಶನ್‌ ಕೂಡ ಅಬ್ಬರಿಸಲಿಲ್ಲ. 33 ರನ್‌ ಮಾಡಿದರೂ ಇದಕ್ಕೆ 61 ಎಸೆತ ತೆಗೆದುಕೊಂಡರು (1 ಬೌಂಡರಿ, 1 ಸಿಕ್ಸರ್‌). ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ (5), ರವೀಂದ್ರ ಜಡೇಜ (4) ಕೂಡ ಕ್ಲಿಕ್‌ ಆಗಲಿಲ್ಲ. ಕೊನೆಯಲ್ಲಿ ಅಕ್ಷರ್‌ ಪಟೇಲ್‌ (26) ನೆರವಿನಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು.
ಸಂಕ್ಷಿಪ್ತ ಸ್ಕೋರ್‌: ಭಾರತ-49.1 ಓವರ್‌ಗಳಲ್ಲಿ 213 (ರೋಹಿತ್‌ 53, ರಾಹುಲ್‌ 39, ಇಶಾನ್‌ ಕಿಶನ್‌ 33, ಅಕ್ಷರ್‌ ಪಟೇಲ್‌ 26, ಗಿಲ್‌ 19, ವೆಲ್ಲಲಗೆ 50ಕ್ಕೆ 5, ಅಸಲಂಕ 18ಕ್ಕೆ 4). ಶ್ರೀಲಂಕಾ-41.3 ಓವರ್‌ಗಳಲ್ಲಿ 172 (ವೆಲ್ಲಲಗೆ ಔಟಾಗದೆ 42, ಧನಂಜಯ 41, ಕುಲದೀಪ್‌ 43ಕ್ಕೆ 4, ಬುಮ್ರಾ 30ಕ್ಕೆ 2, ಜಡೇಜ 33ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next