ಕೊಲಂಬೋ : ಕಳೆದ 14 ವರ್ಷಗಳಲ್ಲೇ ಅತ್ಯಂತ ಭೀಕರ ಎನಿಸಿರುವ ಪ್ರವಾಹ ಮತ್ತು ಭೂಕುಸಿತದ ದುರಂತಕ್ಕೆ ಗುರಿಯಾಗಿರುವ ಶ್ರೀಲಂಕೆಯಲ್ಲಿ ಮೃತರ ಸಂಖ್ಯೆ 164ಕ್ಕೇರಿದೆ.
ಇಂದು ಸೋಮವಾರ ರಕ್ಷಣಾ ಕಾರ್ಯಕರ್ತರು ಇನ್ನಷ್ಟು ಶವಗಳನ್ನು ಮಣ್ಣು ಹಾಗೂ ಹೂಳಿನ ರಾಶಿಯಡಿಯಿಂದ ಮೇಲಕ್ಕೆತ್ತಿದರು. ನೈಸರ್ಗಿಕ ಪ್ರಕೋಪ ವ್ಯವಸ್ಥಾಪನ ಕೇಂದ್ರದ ಪ್ರಕಾರ ಇನ್ನೂ 104 ಜನರು ನಾಪತ್ತೆಯಾಗಿದ್ದಾರೆ. 88 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಗುರುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಐದು ಲಕ್ಷ ಜನರು ಮನೆ-ಮಾರು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಲಂಕೆಯ ದಕ್ಷಿಣ ಹಾಗೂ ಪಶ್ಚಿಮ ಪ್ರಾಂತ್ಯದಲ್ಲಿ ಅಸಂಖ್ಯ ಮನೆಗಳು ನೀರಲ್ಲಿ ಮುಳುಗಿ ನಾಶವಾಗಿವೆ.
ನಿರಂತರ ಜಡಿ ಮಳೆಯಿಂದಾಗಿ ತೀವ್ರವಾಗಿ ಬಾಧಿತವಾಗಿ 14 ಜಿಲ್ಲೆಗಳ ಪೈಕಿ ಗಾಲೆ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯ ನಿರತ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡಿದೆ.
ಲಂಕಾ ಪ್ರವಾಹ ದುರಂತದಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಲಂಕೆಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಸ್ಕ್ವಾಡ್ರನ್ ಲೀಡರ್ ಭಾನುಕ ದೆಲಗೋಡ ಅವರಿಗೆ ದೂರವಾಣಿಯ ಮೂಲಕ, ದುರಂತಕ್ಕೀಡಾದ ಹೆಲಿಕಾಪ್ಟರ್ ಪೈಲಟ್ ತೋರಿರವ ಸಾಹಸವನ್ನು ಪ್ರಶಂಸಿಸಿದ್ದಾರೆ.