Advertisement

ಜಾಗತೀಕರಣದ ಪ್ರಭಾವದ ಪರಿಣಾಮ ಅಳಿಯದಿರಲಿ ಭಾಷೆಗಳು

08:59 AM Feb 21, 2018 | |

ಕರ್ನಾಟಕದ ಕರಾವಳಿ ಭಾಗದ ಕೊರಗ ಭಾಷೆ ಹಾಗೂ ತಮಿಳುನಾಡು ಗಡಿಭಾಗದ ಕುರುಂಬ ಭಾಷೆಯನ್ನು ಅಳಿವಿನಂಚಿನಲ್ಲಿರುವ ಭಾಷೆಗ ಳೆಂದು ಗುರುತಿಸಲಾಗಿದೆ. ಹತ್ತು ಸಾವಿರಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಮಾತನಾಡುವ 42 ಭಾಷೆಗಳನ್ನು ದೇಶದಲ್ಲಿ ಗುರುತಿಸಲಾಗಿದ್ದು, ಅವುಗಳನ್ನು ಅಳಿವಿನಂಚಿನ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಾಸರಗೋಡಿ ನಿಂದ ಬೈಂದೂರು ತನಕ ಕರಾವಳಿ ಭಾಗದಲ್ಲಿ ಕೊರಗ ಸಮುದಾಯ ವಾಸಿಸುತ್ತಿದೆ. ಅತ್ಯಂತ ಪ್ರಾಚೀನ ಬುಡಕಟ್ಟು ಎಂಬುದಾಗಿ ಸರ್ಕಾರ ಈ ಸಮುದಾಯವನ್ನು ಗುರುತಿಸಿದ್ದು, ಇವರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. 1970ರಲ್ಲಿ ಡಿ.ಎನ್‌.ಶಂಕರ ಭಟ್ಟ ಅವರು ಕೊರಗ ಲ್ಯಾಂಗ್ವೇಜ್‌ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಮೊತ್ತ ಮೊದಲ ಬಾರಿಗೆ ಕೊರಗ ಭಾಷೆಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿದರು. ಇದು ತುಳುವಿನ ಉಪಭಾಷೆ ಅಲ್ಲ, ಸ್ವತಂತ್ರ ದ್ರಾವಿಡ ಭಾಷೆ ಎಂಬುದಾಗಿ ಗುರುತಿಸಿದ ಅವರು ಕೊರಗ ಭಾಷೆಗೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸುವಂತೆ  ಮಾಡಿದರು. ಆ ಸಮುದಾಯ ಕರಾವಳಿಯಲ್ಲಿದ್ದರೂ ಆ ಭಾಷೆಯ ಸ್ವರೂಪ, ರಚನೆಯನ್ನು ನೋಡಿದರೆ ಉತ್ತರ ದ್ರಾವಿಡ ಭಾಷೆಯಂತಿದೆ ಎಂದು ಹೇಳಿದರು. 1985ರಲ್ಲಿ ಮುಲ್ಕಿಯ ಎಂ.ರಾಮಕೃಷ್ಣ ಶೆಟ್ಟಿ ಅಧ್ಯಯನ ನಡೆಸಿ ಕೊರಗ ಭಾಷೆ ತುಳುವಿಗೆ ಸಮೀಪವಿದೆ, ಅದು ದಕ್ಷಿಣ ದ್ರಾವಿಡ ಭಾಷೆ ಎಂಬುದಾಗಿ ವ್ಯಾಖ್ಯಾನಿಸಿದರು. 2001ರ ಜನಗಣತಿ ಪ್ರಕಾರ, ಕೊರಗ ಸಮುದಾಯದ ಜನಸಂಖ್ಯೆ 16, 071 ಇತ್ತು.  

Advertisement

ತಮಿಳುನಾಡು, ಕರ್ನಾಟಕದ ಗಡಿ ಭಾಗ, ಆಂಧ್ರಪ್ರದೇಶದಲ್ಲಿ ಕುರುಬ ಬುಡಕಟ್ಟು ಸಮುದಾಯದ ಮಂದಿ ಕುರುಂಬ ಭಾಷೆಯನ್ನು ಮಾತ ನಾಡುತ್ತಾರೆ. ಕುರುಂಬವನ್ನು ದಕ್ಷಿಣ ದ್ರಾವಿಡ ಭಾಷೆ ಎಂಬುದಾಗಿ ವರ್ಗೀಕರಿಸಲಾಗಿದ್ದು, ಇದೊಂದು ಸ್ವತಂತ್ರ ಭಾಷೆಯೆಂಬ ಮಾನ್ಯತೆ ಹೊಂದಿದೆ. ಇದು ತಮಿಳು ಲಿಪಿ ಹೊಂದಿದೆ. 2000ದ ಜನಗಣತಿ ಪ್ರಕಾರ, 1,80,000 ಮಂದಿ ಕುರುಂಬ ಭಾಷೆಯನ್ನು ಮಾತನಾಡುತ್ತಿದ್ದರು. ಈಗ ಹತ್ತು ಸಾವಿರ ಮಂದಿಯೂ ಮಾತನಾಡುತ್ತಿಲ್ಲ ಎಂದರೆ, ಈ ಭಾಷೆಯ ಅಳಿವಿನ ಗತಿಯ ಅರಿವಾಗುತ್ತದೆ! 

ಜಾಗತೀಕರಣ ಬೆಳೆದಂತೆ ದೊಡ್ಡ ಭಾಷೆಗಳ ಪ್ರಭಾವಕ್ಕೊಳಗಾಗಿ ಸಣ್ಣ ಭಾಷೆಗಳು ಅಸ್ತಿತ್ವ ಕಳಕೊಳ್ಳುತ್ತಿವ. ಬುಡಕಟ್ಟು ಜನಾಂಗಗಳು ಸೇರಿದಂತೆ ಸ್ಥಳೀಯ ಜನಾಂಗೀಯ ಸಂಸ್ಕೃತಿ, ಆಚರಣೆಗಳು ಮೂಲೆಗುಂಪಾಗುತ್ತಿವೆ. ಇದಕ್ಕೆ ಮೊದಲ ತುತ್ತಾಗುತ್ತಿರುವುದು ಬುಡಕಟ್ಟು ಜನಾಂಗಗಳು ಹಾಗೂ ಅವರ ಸಂಸ್ಕೃತಿ ಮತ್ತು ಭಾಷೆ. ಆಧುನಿಕತೆ ಬೆಳೆದಂತೆ, ಬುಡಕಟ್ಟು ಜನಾಂಗದ ಮಂದಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅದು ಒಳ್ಳೆಯ ಬೆಳವಣಿಗೆ. ಉತ್ತಮ ನಾಗರಿಕ ಸಮಾಜದ ಲಕ್ಷಣ. ಆದರೆ ಶಿಕ್ಷಣ, ಜೀವನ ಶೈಲಿ ಆಧುನಿಕಗೊಂಡಾಕ್ಷಣ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಅವರಿಗೆ ಉಳಿಸಿಕೊಳ್ಳಲಾಗುತ್ತಿಲ್ಲ. ಅದು ಅಪಾಯಕಾರಿ ಬೆಳವಣಿಗೆಯಾಗಿದೆ. ಭಾಷೆಯೊಂದು ಅಳಿವಿನಂಚಿಗೆ ಸಾಗುತ್ತಿರುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಕೊರಗ ಸಮುದಾಯವನ್ನೇ ತೆಗೆದುಕೊಂಡರೆ, ಕರಾವಳಿ ಭಾಗದಲ್ಲಿ ಯುವ ತಲೆಮಾರಿನವರು ಯಾರೂ ಕೊರಗ ಭಾಷೆಯನ್ನು ಮಾತನಾಡುವುದಿಲ್ಲ. ಅವರ ಮಾತೃಭಾಷೆ ಅಥವಾ ಮನೆ ಭಾಷೆ ತುಳು ಅಥವಾ ಕನ್ನಡವಾಗಿ ಬದಲಾಗಿದೆ. ಇನ್ನೂ ಹತ್ತು ಇಪ್ಪತ್ತೈದು ವರ್ಷಗಳು ಕಳೆದರೆ ಕೊರಗ ಸಮುದಾಯದಲ್ಲಿ ಕೊರಗ ಭಾಷೆ ಮಾತನಾಡುವವರೇ ಸಂಪೂರ್ಣವಾಗಿ ಇಲ್ಲವಾಗುವ ಅಪಾಯವಿದೆ. ಕರಾವಳಿಯ ಇತರೆ ಸಂಸ್ಕೃತಿಯೊಂದಿಗೆ ಅದು ವಿಲೀನವಾಗಲಿದೆ. 

ಕರ್ನಾಟಕದಲ್ಲಿ ಇದೆರಡೇ ಅಲ್ಲ, 10- 15 ಭಾಷೆ, ಉಪಭಾಷೆಗಳಿವೆ. ಬುಡಕಟ್ಟು ಜನಾಂಗಗಳ ಬೆಳಾರಿ, ಇರುಳ, ಸೋಲಿಗ ಭಾಷೆಗಳು ಕೂಡಾ ಇದೇ ಆಪತ್ತು ಎದುರಿಸುತ್ತಿವೆ. ಈ ಹಿಂದುಳಿದ, ಆದಿವಾಸಿ ಬುಡಕಟ್ಟು ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಬೇಕು ನಿಜ, ಆದರೆ ಅವರ ಆರ್ಥಿಕ ಅಭಿವೃದ್ಧಿಯಾಗಿ, ಸಾಮಾಜಿಕ ಸ್ಥಾನಮಾನ ದೊರಕುವುದರ ಜತೆಜತೆಗೆ ಸಾಂಸ್ಕೃತಿಕ ಅಭಿವೃದ್ಧಿಯಾಗಬೇಕು. ಅವರಲ್ಲಿ ತಮ್ಮ ಭಾಷೆ, ಸಂಸ್ಕೃತಿ ಕುರಿತಂತೆ ಇರುವ ಕೀಳರಿಮೆಯನ್ನು ಹೋಗಲಾಡಿಸಬೇಕು. ಆಯಾ ಜನಾಂಗದ ಕೌಶಲಾಭಿವೃದ್ಧಿಯಾಗಬೇಕು. ಉದಾಹರಣೆಗೆ, ಕೊರಗರಲ್ಲಿ ರಕ್ತಗತವಾಗಿ ಸಂಗೀತ ಜ್ಞಾನವಿದೆ. ಅವರು ತುಂಬಾ ಚೆನ್ನಾಗಿ ಕೊಳಲು ನುಡಿಸುತ್ತಾರೆ, ಡೋಲು ಬಡಿಯುತ್ತಾರೆ. ಸಮೃದ್ಧವಾದ ಜನಪದ ಸಾಹಿತ್ಯ ಕೊರಗರಲ್ಲಿದೆ. ಇವುಗಳೆಲ್ಲವನ್ನೂ ಮರೆಯುವ ಹಂತಕ್ಕೆ ನಾವು ಹೋಗಿದ್ದೇವೆ. ಭಾಷೆಯ ಜತೆಜತೆಗೆ ಅಳಿವಿನಂಚಿನಲ್ಲಿರುವ ಇಂತಹ ಬುಡಕಟ್ಟುಗಳ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ಸರ್ಕಾರ ಹಾಗೂ ಭಾರತೀಯ ಭಾಷಾ ಸಂಸ್ಥಾನ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಭಾಷೆಗಳ ಉಳಿವಿಗೋಸ್ಕರ ಕೇಂದ್ರದಿಂದ ಅನುದಾನ ಬರುತ್ತಿದೆ. ಆದರೆ ವಿಪರ್ಯಾಸವೆಂದರೆ ಬಳಕೆಯಾಗದೆ ವಾಪಸ್‌ ಹೋಗುತ್ತಿದೆ. ಇದನ್ನು ಸಮರ್ಥವಾಗಿ ಸದ್ಬಳಕೆ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next