Advertisement

ಭಾಷೆ-ಸಂಸ್ಕೃತಿ-ಸಾಹಿತ್ಯ ಉಳಿವಿಗೆ ಸಂಕಲ್ಪ

11:21 AM Oct 21, 2019 | Team Udayavani |

ವಿವಿಧ ಅಕಾಡೆಮಿಗಳಿಗೆ ರಾಜ್ಯ ಸರಕಾರ ಮಂಗಳವಾರ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಹಿನ್ನೆಲೆಯಲ್ಲಿ ತುಳು, ಕೊಂಕಣಿ, ಬ್ಯಾರಿ, ಸಾಹಿತ್ಯ ಅಕಾಡೆಮಿಗಳ ನೂತನ ಅಧ್ಯಕ್ಷರು ಸುದಿನದ ಪ್ರಜ್ಞಾ ಶೆಟ್ಟಿ ಅವರು ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡ ತಮ್ಮ ಯೋಜನೆ-ಯೋಚನೆಗಳು ಇಲ್ಲಿವೆ.

Advertisement

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವುದೇ ಆದ್ಯತೆ: ದಯಾನಂದ ಕತ್ತಲಸಾರ್‌

– ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ನೇಮಕವಾದ ಹಿನ್ನೆಲೆಯಲ್ಲಿ ನಿಮ್ಮ ಹೊಸ ಯೋಜನೆಗಳೇನು?
ತುಳು ಭಾಷೆಗೆ ಅಧಿಕೃತ ಲಿಪಿ ಇದ್ದರೂ ಹಲವಾರು ವರ್ಷಗಳಿಂದ ತುಳುವರು ಹೋರಾಟ ನಡೆಸಿದ್ದರೂ ತುಳು ಎಂಟನೇ ಪರಿಚ್ಛೇದಕ್ಕೆ ಸೇರಿಲ್ಲ. ಹೀಗಾಗಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು, ರಾಜ್ಯ ಭಾಷೆಯನ್ನಾಗಿಸುವುದು ನನ್ನ ಮೊದಲ ಆದ್ಯತೆ. ತುಳುಭವನದಲ್ಲಿ ತೌಳವ ಲೋಕವನ್ನು ಅನಾವರಣಗೊಳಿಸುವ ಯೋಜನೆ ಇದೆ. ತುಳು ಭಾಷೆಗೆ ಸಂಬಂಧಿಸಿದ ಪುಸ್ತಕ, ಸಲಕರಣೆಗಳನ್ನು ಜೋಡಿಸಿ ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಲಾಗುವುದು. ತುಳುನಾಡು ನುಡಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಅದನ್ನು ದಾಖಲೀಕರಣ ಮಾಡಲು ಕೆಲಸ ಮಾಡಲಾಗುವುದು.

– ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಏನು ಕ್ರಮ ತೆಗೆದುಕೊಳ್ಳುತೀ¤ರಿ?
ಈಗಾಗಲೇ ಹಿಂದಿನ ಅಧ್ಯಕ್ಷರು, ವಿವಿಧ ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ತುಂಬಾ ಶ್ರಮಪಟ್ಟಿದ್ದಾರೆ. ನನ್ನ ಅವಧಿಯಲ್ಲೂ ಇದಕ್ಕಾಗಿ ಪ್ರಯತ್ನಿಸಲಾಗುವುದು. ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಹಿತ ಜನಪ್ರತಿನಿಧಿಗಳು ಸಂಘ – ಸಂಸ್ಥೆಗಳ ಸಹಯೋಗದಲ್ಲಿ ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು.

– ಶೈಕ್ಷಣಿಕವಾಗಿ ತುಳು ಭಾಷೆಯ ಅರಿವು ಯಾವ ರೀತಿ ಮಾಡಲಾಗುವುದು?
ಈಗಾಗಲೇ ಪ್ರಾಥಮಿಕ, ಪ್ರೌಢಶಾಲಾ ಮಟ್ಟದಲ್ಲಿ ತುಳು ಭಾಷೆಯ ಬೋಧನೆಗೆ ಅವಕಾಶ ಇದೆ. ಇದನ್ನು ಪಿಯುಸಿ, ಡಿಗ್ರಿವರೆಗೆ ಕೊಂಡೊಯ್ಯುವುದು ನನ್ನ ಕನಸು. ಸಹಕಾರಕ್ಕಾಗಿ ಶ್ರಮಿಸಲಾಗುವುದು. ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ತುಳು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ತುಳು ಭಾಷೆಯ ಸಂಘ-ಸಂಸ್ಥೆಗಳು, ಮಾಜಿ ಅಧ್ಯಕ್ಷರು, ಸದಸ್ಯರು, ತುಳು ಸಾಹಿತಿಗಳನ್ನು ಸೇರಿಸಿ ಒಂದು ಸಲಹಾ ಸಮಿತಿಯನ್ನು ರಚಿಸಲಾಗುವುದು.

Advertisement

ಕೊಂಕಣಿ ಭಾಷೆ ಉಳಿವಿಗೆ ಪಣ: ಡಾ| ಜಗದೀಶ್‌ ಪೈ
– ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ನಿಮ್ಮ ಹೊಸ ಯೋಜನೆಗಳೇನು?
ಅಕಾಡೆಮಿ ಕ್ಷೇತ್ರಕ್ಕೆ ನಾನು ಹೊಸಬ. ಅಕಾಡೆಮಿಗಳಿಗೆ ಬರುವ ಅನುದಾನ, ಅದರ ರೂಪರೇಖೆಗಳ ಬಗ್ಗೆ ಇನ್ನಷ್ಟೇ ತಿಳಿದುಕೊಳ್ಳಬೇಕಿದೆ. ಮಕ್ಕಳು ಆಡುವಾಗ, ಮಲಗುವಾಗ ಬಳಸುತ್ತಿದ್ದ ಕೊಂಕಣಿ ಭಾಷೆಯ ಹಾಡುಗಳು ನಶಿಸುವ ಹಂತದಲ್ಲಿದ್ದು ಅದನ್ನು ದಾಖಲೀಕರಣ ಮಾಡಲು ಪ್ರಯತ್ನಿಸಲಾಗುವುದು. ಕೊಂಕಣಿ ಕಲಾವಿದರಿಗೆ, ಬರಹಗಾರರಿಗೆ ಸೂಕ್ತ ಸ್ಥಾನಮಾನ, ಪ್ರೋತ್ಸಾಹ ಸಿಗುವಂತೆ ಕಾರ್ಯಕ್ರಮ ಆಯೋಜಿಸಲಾಗುವುದು.

– ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವುದಕ್ಕೆ ಏನೆಲ್ಲ ಪ್ರಯತ್ನ ಮಾಡುವಿರಿ?
ಅಕಾಡೆಮಿಯಿಂದ ಕೇವಲ ಸಾಹಿತ್ಯದ ಪೋಷಣೆಯಾಗುತ್ತದೆಯೋ, ಮತ್ತಿತರ ಯಾವ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬುದಾಗಿ ಮೊದಲು ತಿಳಿದುಕೊಳ್ಳುತ್ತೇನೆ. ಹೀಗಾಗಿ ಹಿಂದಿನ ಅಧ್ಯಕ್ಷರು, ಸದಸ್ಯರು, ಹಿರಿಯರ ಮಾರ್ಗದರ್ಶನದೊಂದಿಗೆ ಮುಂದುವರಿಯಲಿದ್ದೇನೆ.ಕೊಂಕಣಿ ಭಾಷೆ, ಸಂಸ್ಕೃತಿ ಉಳಿವಿಗೆ ಕಾರ್ಯಕ್ರಮಗಳ ಆಯೋಜನೆಗೆ ಯೋಜನೆ ರೂಪಿಸಲಾಗುವುದು.

– ಶೈಕ್ಷಣಿಕವಾಗಿ ಕೊಂಕಣಿ ಭಾಷಾ ಬೆಳವಣಿಗೆಗೆ ಯಾವ ರೀತಿ ಕಾರ್ಯಕ್ರಮ ಆಯೋಜಿಸಲಾಗುವುದು?
ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕೊಂಕಣಿ ಭಾಷಾ ಕಾರ್ಯಕ್ರಮ ಆಯೋ ಜಿಸಲಾಗುವುದು. ಈ ಕುರಿತಂತೆ ಶಿಕ್ಷಣ ಇಲಾಖೆ, ಅಕಾಡೆಮಿ ಸದಸ್ಯರೊಂದಿಗೆ ಚರ್ಚಿಸಲಾಗುವುದು.

ಅಕಾಡೆಮಿ ಒಂದು ಧರ್ಮಕ್ಕೆ ಸೀಮಿತವಾಗಲು ಬಿಡಲ್ಲ: ರಹೀಂ ಉಚ್ಚಿಲ
– ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ 2ನೇ ಬಾರಿ ನೇಮಕವಾದ ಹಿನ್ನೆಲೆಯಲ್ಲಿ ನಿಮ್ಮ ಹೊಸ ಯೋಜನೆಗಳೇನು?
2012ರಲ್ಲಿ ನಾನು ಮೊದಲ ಬಾರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ನೇಮಕವಾಗಿದ್ದೆ. ಆ ಸಮಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೆ. ಆಗ ಅಪೂರ್ಣವಾದ ಹಲವಾರು ಕಾರ್ಯಕ್ರಮಗಳನ್ನು ಮುಂದುವರಿಸುವ ಇರಾದೆ ಇದೆ. ಬ್ಯಾರಿ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಿ ನನ್ನ ಅವಧಿಯಲ್ಲೇ ಭವನ ನಿರ್ಮಿಸಬೇಕಾಗಿದೆ. ಬ್ಯಾರಿ ಭಾಷೆಯಲ್ಲಿ ಪುಸ್ತಕಗಳನ್ನು ಹೊರತರುವ ನಿಟ್ಟಿನಲ್ಲಿ ಅರ್ಹರನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು. ಅಶಕ್ತ ಬ್ಯಾರಿ ಕಲಾವಿದರಿಗೆ ಮಾಸಾಶನವನ್ನು ಅಕಾಡೆಮಿ ವತಿಯಿಂದ ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು.

– ಅಕಾಡೆಮಿಯನ್ನು ಜನರಿಗೆ ಹತ್ತಿರ ವಾಗಿಸುವುದಕ್ಕೆ ನಿಮ್ಮ ಚಿಂತನೆಗಳೇನು?
ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಒಂದು ಧರ್ಮಕ್ಕೆ ಸೀಮಿತವಾಗಲು ಬಿಡುವುದಿಲ್ಲ. ಬ್ಯಾರಿ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಆಯೋಜನೆಗೆ ಚಿಂತಿಸಲಾಗುವುದು. ನನ್ನ ಹಿಂದಿನ ಅಧಿಕಾರಾವಧಿಯಲ್ಲಿ ಬ್ಯಾರಿ ಅಧ್ಯಯನ ಪೀಠ ರಚನೆಯ ಪ್ರಸ್ತಾವ ಮಾಡಿದ್ದೆ. ಅದಕ್ಕೆ ವಿಶೇಷ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಎಲ್ಲ ಅಕಾಡೆಮಿಗಳ ಸಹಯೋಗದಲ್ಲಿ ಕಲೆ, ಸಂಸ್ಕೃತಿ ವಿನಿಮಯಕ್ಕಾಗಿ ಕಾರ್ಯಕ್ರಮ ಆಯೋಜಿಸಿ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಲು ಪ್ರಯತ್ನಿಸಲಿದ್ದೇನೆ.

– ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಬ್ಯಾರಿ ಭಾಷೆ ಬಗ್ಗೆ ಆಸಕ್ತಿ ಮೂಡಿಸುವುದಕ್ಕೆ ಏನು ಮಾಡುವಿರಿ?
ಭಾಷೆಯ ಸೊಗಡಿನ ಮೇಲೆ ವಿದ್ಯಾರ್ಥಿಗಳಿಗೆ ಎಳವೆಯಿಂದಲೇ ಆಸಕ್ತಿ ಮೂಡಬೇಕು. ಆಗ ಅವರೇ ಬ್ಯಾರಿ ಭಾಷೆಯ ಸಂಸ್ಕೃತಿ, ಸಾಹಿತ್ಯದ ಉಳಿವಿಗೆ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಶಾಲೆಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷೆಯ ಬಗ್ಗೆ ತಿಳಿ ಹೇಳಲು ಅವಕಾಶಗಳಿವೆಯೇ ಎಂದು ಶಿಕ್ಷಣ ಇಲಾಖೆ, ಶಿಕ್ಷಣ ತಜ್ಞರೊಂದಿಗೆ ಮಾತನಾಡಲಾಗುವುದು. ಅದರೊಂದಿಗೆ ಬ್ಯಾರಿ ಭಾಷೆಯ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ಅಕಾಡೆಮಿ ವತಿಯಿಂದ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next