ಕಾರ್ಕಳ: ಭಾಷೆಯನ್ನು ಹೊರತುಪಡಿಸಿ ಯಾವುದೇ ಸಂಸ್ಕೃತಿ ಉಳಿಯದು. ಭಾಷೆ-ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತುಳುವರ ಸಂಸ್ಕೃತಿ ಉಳಿಯಬೇಕಾದರೆ ತುಳು ಭಾಷೆ ಉಳಿಯಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಭಿಪ್ರಾಯಪಟ್ಟರು.
ಇಲ್ಲಿನ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆದ ತುಳು ಸಾಹಿತ್ಯ ಪರಂಪರೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳು ಭಾಷೆಯನ್ನು ಪದವಿ ತರಗತಿಗಳಿಗೆ ಶೈಕ್ಷಣಿಕ ಪಠ್ಯವಾಗಿ ಸೇರಿಸುವ ನಿಟ್ಟಿನಲ್ಲಿ ಸಿದ್ಧತೆಗಳಾಗುತ್ತಿದ್ದು ಮುಂದಿನ ದಿನಗಳಲ್ಲಿ ಪದವಿಯಲ್ಲಿ ತುಳುವನ್ನು ಐಚ್ಛಿಕವಾಗಿ ಕಲಿಯ ಬಹುದಾಗಿದೆ. ಈ ಮೂಲಕ ಶೈಕ್ಷಣಿಕವಾಗಿಯೂ ತುಳು ಮುನ್ನೆಲೆಗೆ ಬರಲಿದೆ ಎಂದು ಅವರು ಹೇಳಿದರು.
ತುಳುವಿನ ಪ್ರಾಚೀನ ಸಾಹಿತ್ಯದ ಕುರಿತು ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ| ಧನಂಜಯ ಕುಂಬಳೆ, ತುಳು ಲಿಪಿಯ ಕುರಿತು ಧರ್ಮಸ್ಥಳದ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ| ಎಸ್. ಆರ್. ವಿಘ್ನರಾಜ್, ಆಧುನಿಕ ತುಳು ಸಾಹಿತ್ಯದ ಕುರಿತು ಮಂಗಳೂರಿನ ರಘು ಇಡಿRದು ಉಪನ್ಯಾಸ ನೀಡಿದರು.
ತುಳು ಸಾಹಿತಿ ಮಸುಮ ಅವರು ಸಮಾರೋಪ ಭಾಷಣ ಮಾಡಿದರು. ಪ್ರಾಂಶುಪಾಲ ಪ್ರೊ| ಶ್ರೀವರ್ಮ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ| ವರದರಾಜ ಚಂದ್ರಗಿರಿ ಪ್ರಾಸ್ತಾವಿಸಿದರು. ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ನಿರೂಪಿಸಿ, ಪ್ರಶಾಂತ ಆಚಾರ್ಯ ವಂದಿಸಿದರು.