Advertisement

ದೇಸೀ ಭಾಷಾ ಶಿಕ್ಷಣ, ಶಿಕ್ಷಣದಲ್ಲಿ ದೇಸೀ ಜ್ಞಾನ: ಡಾ|ವಿವೇಕ ರೈ

03:45 AM Jan 15, 2017 | Team Udayavani |

ಉಡುಪಿ: ದೇಸೀ ಭಾಷೆಯ ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ದೇಸೀ ಜ್ಞಾನದ ಅಳವಡಿಕೆಯನ್ನು ಜನಪದ ವಿದ್ವಾಂಸ ಡಾ|ಬಿ.ಎ.ವಿವೇಕ ರೈ ಪ್ರತಿಪಾದಿಸಿದರು. 

Advertisement

ಮಣಿಪಾಲ ವಿ.ವಿ., ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಸಿಂಡಿಕೇಟ್‌ ಬ್ಯಾಂಕ್‌ ಆಶ್ರಯದಲ್ಲಿ ಮಣಿಪಾಲದ ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಹೊಸ ವರ್ಷದ ಪ್ರಶಸ್ತಿ ಸ್ವೀಕರಿಸಿದ ಅವರು ಶಿಕ್ಷಣವು ಪ್ರಾಥಮಿಕ ಹಂತದಿಂದ ಸ್ಥಳೀಯ ಭಾಷೆ ಮೂಲಕ ವಿಕಾಸವಾಗಬೇಕು. ಜೊತೆಗೆ ಜಾಗತಿಕ ಭಾಷೆ, ಚಿಂತನೆಗಳನ್ನು ಅಧ್ಯಯನ ಮಾಡುತ್ತ ಬೆಳೆಯಬೇಕು ಎಂದರು.

ವಿ.ವಿ.ಗಳು ಹೊಸ ವಸ್ತುಗಳ ನಿರ್ಮಾಣವನ್ನು ಮಾತ್ರ ಗುರಿಯಾಗಿರಿಸಿಕೊಳ್ಳದೆ ಹೊಸ ವಿಚಾರ, ತಾತ್ವಿಕತೆಗಳನ್ನು ಕೊಡುವಂತಾಗಬೇಕು. ಜಾನಪದ ಪಳೆಯುಳಿಕೆ ಆಗಿ ಉಳಿಯದೆ ಸಮಕಾಲೀನತೆಗೆ ಒಳಪಡುವಂತೆ ರೂಪಾಂತರವಾಗಬೇಕು. ಜಾನಪದ ಕಲಾವಿದರು ಹೊಂದಿದ ದೇಸೀ ಜ್ಞಾನವು ಶಿಕ್ಷಣ ವ್ಯವಸ್ಥೆಯಲ್ಲಿ ಮಾನವ ಸಂಪನ್ಮೂಲವಾಗಿ ಬಳಸಿಕೊಳ್ಳಬೇಕು. ಪರಂಪರೆಯ ಜ್ಞಾನದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಜೋಡಿಸಬೇಕು. ಜನಪದ ಸಂಸ್ಕೃತಿಯನ್ನು ಸಹಜ ಪರಿಸರದಲ್ಲಿ
ಸಂರಕ್ಷಿಸಿ ಇಡುತ್ತಲೇ ಅದು ಆರ್ಥಿಕ ಸಬಲತೆ, ಸಾಮಾಜಿಕ ಮನ್ನಣೆ ಕೊಡುವ ಕಾರ್ಯತಂತ್ರ ರೂಪಿಸುವುದು ಬಹಳ ಮುಖ್ಯ ಎಂದರು. 

ಸರಿಯಾಗಿ ಪಾಠ ಮಾಡಿದರೆ ವಿದ್ಯಾರ್ಥಿಗಳು ಎಂದೆಂದೂ ಮರೆಯುವುದಿಲ್ಲ. ಕರಿಹಲಗೆ ಬೋಧನೆ ಶ್ರೇಷ್ಠ,ವಿದ್ಯಾರ್ಥಿಗಳು ಸಹಾಯಹಸ್ತ ಚಾಚಿದರೆ ಕೊಡಲು ಹಿಂಜರಿಯಬೇಡಿ, ನಿಷ್ಪಕ್ಷಪಾತಿಗಳಾಗಿ, ಕರ್ತವ್ಯದಲ್ಲಿರುವಷ್ಟು ದಿನ ಶ್ರೇಷ್ಠ ಗುಣಮಟ್ಟದ ಕರ್ತವ್ಯ ನಿರ್ವಹಿಸಿ ಎಂದು ಮಣಿಪಾಲದಲ್ಲಿಯೇ 50 ವರ್ಷ ವೈದ್ಯಕೀಯ ಶಿಕ್ಷಣವನ್ನು ಬೋಧಿಸಿದ ಡಾ|ಪಿ.ಎಲ್‌.ಎನ್‌.ರಾವ್‌ ಕಿರಿಯರಿಗೆ ಕರೆ ನೀಡಿದರು.

ನಾಗರಿಕ/ರಕ್ಷಣಾ ಸೇವೆ, ಬ್ಯಾಂಕಿಂಗ್‌, ಜಾಹೀರಾತು, ಶಿಕ್ಷಣ, ಹಣಕಾಸು, ಕೌಶಲಾಭಿವೃದ್ಧಿ ಕ್ಷೇತ್ರಗಳಲ್ಲಿ ಯುವಕರಿಗೆ ತರಬೇತಿ ನೀಡಿ ಅವರನ್ನು ತಜ್ಞರಾಗಿಸಬೇಕು ಎಂದು ಸಹಕಾರಿ ರಂಗದ ಹಿರಿಯ ಬ್ಯಾಂಕರ್‌ ಜಾನ್‌ ಡಿ’ಸಿಲ್ವ ಆಶಯ ವ್ಯಕ್ತಪಡಿಸಿದರು. 

Advertisement

ಕವಿ ಮುದ್ದಣನ ಹುಟ್ಟೂರು ನಂದಳಿಕೆಯಲ್ಲಿ ಚಟುವಟಿಕೆ, ಅಭಿವೃದ್ಧಿ ಸಾಧಿಸಿದ ಬಗೆ, ಇದಕ್ಕೆ ಸಹಕರಿಸಿದವರ ಕುರಿತು ತಿಳಿಸಿದ ಸಮಾಜಸೇವಕ ನಂದಳಿಕೆ ಬಾಲಚಂದ್ರ ರಾವ್‌ ಅವರು ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. 

ಡಾ|ಪಿ.ಎಲ್‌.ಎನ್‌.ರಾವ್‌, ಡಾ|ವಿವೇಕ ರೈ, ಜಾನ್‌ ಡಿ’ಸಿಲ್ವ, ನಂದಳಿಕೆ ಬಾಲಚಂದ್ರ ರಾವ್‌ ಅವರನ್ನು  ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌, ಸಿಂಡಿಕೇಟ್‌ ಬ್ಯಾಂಕ್‌ಕ್ಷೇತ್ರ ಮಹಾಪ್ರಬಂಧಕ ಸತೀಶ್‌ ಕಾಮತ್‌, ಕುಲಪತಿ ಡಾ|ಎಚ್‌.ವಿನೋದ ಭಟ್‌ ಸಮ್ಮಾನಿಸಿ ಪ್ರಶಸ್ತಿ ನೀಡಿದರು. ಡಾ|ಎಚ್‌.ಎಸ್‌.ಬಲ್ಲಾಳ್‌ ಸ್ವಾಗತಿಸಿ ಅಕಾಡೆಮಿ ಆಡಳಿತಾಧಿಕಾರಿ ಡಾ|ಎಚ್‌.ಶಾಂತಾರಾಮ್‌ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next