ಸಚಿವರನ್ನು ಭೇಟಿಯಾದ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳಿಗೆ ಭರವಸೆ ನೀಡಿರುವ ಸಚಿವರು ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನಬದ್ಧವಾಗಿ ನೀಡಲಾದ ಎಲ್ಲಾ ಸವಲತ್ತುಗಳನ್ನು ನೀಡಲಾಗುವುದೆಂದು ಹೇಳಿದರು.
Advertisement
ಸರಕಾರದ ಮಲಯಾಳ ಭಾಷಾ ಮಸೂದೆಗೆ ಭಾಷಾ ಅಲ್ಪಸಂಖ್ಯಾಕರಾದ ಕನ್ನಡಿಗರು ಮತ್ತು ತಮಿಳರು ಯಾವುದೇ ಭಯ ಪಡಬೇಕಾಗಿಲ್ಲ. ಅಲ್ಲದೆ ಚಿಂತಿಸಬೇಕಾಗಿಲ್ಲ ಎಂದಿದ್ದಾರೆ. ಭಾಷಾ ಅಲ್ಪಸಂಖ್ಯಾಕರು ಈ ಹಿಂದಿನಂತೆಯೇ ಎಲ್ಲ ಸವಲತ್ತುಗಳನ್ನು ಪಡೆಯಲಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳ ಕಡ್ಡಾಯ ಗೊಳಿಸುವುದಿಲ್ಲ. ಇಂತಹ ಶಾಲೆಗಳಲ್ಲಿ ಮಲಯಾಳ ಕಲಿಕೆಯ ಬಗ್ಗೆ ಸ್ಥಳೀಯ ರಿಂದ ಒತ್ತಡ ಬಂದಲ್ಲಿ ಹಾಗೂ ಸಾಕಷ್ಟು ವಿದ್ಯಾರ್ಥಿಗಳಿದ್ದಲ್ಲಿ ಮಾತ್ರವೇ ಮಲಯಾಳ ತರಗತಿಯನ್ನು ತೆರೆಯ ಬೇಕಾಗುತ್ತದೆ ಎಂದರು. ಕನ್ನಡಿಗರಿಗೆ ಮಲಯಾಳ ಕಡ್ಡಾಯ ಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
Related Articles
Advertisement
ಕನ್ನಡ ಶಾಲೆಗಳಲ್ಲಿ ಮಲಯಾಳ ಕಡ್ಡಾಯವಲ್ಲ ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆ ಕಡ್ಡಾಯವಾಗಿ ಕಲಿಸಬೇಕೆಂಬ ನಿಯಮವೇನು ಇಲ್ಲ. ಪ್ರಸ್ತುತ ಯಾವ ರೀತಿಯಲ್ಲಿ ಸಂಪೂರ್ಣ ವಾಗಿ ಕನ್ನಡ ಮಾಧ್ಯಮವಿರುವ ಹಾಗೂ ಕನ್ನಡ ಮತ್ತು ಮಲಯಾಳ ಮಾಧ್ಯಮ ಶಾಲೆಗಳಿವೆಯೋ ಅದು ಹಾಗೆಯೇ ಮುಂದುವರಿಯುತ್ತದೆ. ಬದಲಾಗಿ ಕನ್ನಡ ಶಾಲೆಗಳಿರುವ ಆ ಪ್ರದೇಶದಲ್ಲಿ ಮಲಯಾಳ ಕಲಿಯುವ ವಿದ್ಯಾರ್ಥಿಗಳಿದ್ದರೆ ಒಂದನೇ ತರಗತಿಯಿಂದ ಮಲಯಾಳ ತರಗತಿ ಯನ್ನು ಆರಂಭಿಸಲಾಗುವುದು. ಅಲ್ಲದೇ ಕಡ್ಡಾಯವಾಗಿ ಕನ್ನಡ ಶಾಲೆಗಳಲ್ಲಿ ಮಲಯಾಳ ತರಗತಿ ಆರಂಭಿಸಬೇಕೆಂಬುದಿಲ್ಲ ಎಂದು ಸಚಿವರು ತಿಳಿಸಿದರು. ಜಿಲ್ಲಾಧಿಕಾರಿಗೆ ಸೂಚನೆ : ಮಲಯಾಳ ಕಡ್ಡಾಯ ಅಧ್ಯಾದೇಶದಿಂದಾಗಿ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಲ್ಲಿ ತಲೆದೋರಿದ ಆತಂಕಗಳ ನಿವಾರಣೆಗೆ ಜಿಲ್ಲಾಧಿಕಾರಿ ಖುದ್ಧಾಗಿ ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕೆಂದು ಸಚಿವ ಇ.ಚಂದ್ರಶೇಖರನ್ ಜಿಲ್ಲಾಧಿಕಾರಿ ಜೀವನ್‌ಬಾಬು ಕೆ. ಅವರಿಗೆ ನಿರ್ದೇಶ ನೀಡಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಜಿಲ್ಲಾಮಟ್ಟದ ಸಭೆ ಸಹಿತ ಎಲ್ಲಾ ಕಾರ್ಯಗಳಲ್ಲಿ ಜಿಲ್ಲಾಧಿಕಾರಿ ಮೇಲ್ನೋಟದಲ್ಲಿಯೇ ಸಭೆ ನಡೆಯಬೇಕು ಎಂದು ನಿರ್ದೇಶ ನೀಡಿದ್ದಾರೆ. ಇತ್ತೀಚೆಗೆ ನಡೆದ ಭಾಷಾ ಅಲ್ಪಸಂಖ್ಯಾತರ ಜಿಲ್ಲಾಮಟ್ಟದ ಸಭೆ ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ನಡೆದ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಸ್ತರ್, ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ. ಭಟ್, ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘಟನೆಯ ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ಕನ್ನಡ ಸಮನ್ವಯ ಸಮಿತಿ ಕಾಸರಗೋಡು ನಗರ ಘಟಕದ ಅಧ್ಯಕ್ಷ ಜೋಗೇಂದ್ರನಾಥ್ ವಿದ್ಯಾನಗರ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ ಜಯರಾಮ ಮಂಜತ್ತಾಯ, ಗಂಗಾಧರ ಮೊದಲಾದವರಿದ್ದರು. ಮಲಯಾಳ ಮಸೂದೆಯಲ್ಲಿ ತಿದ್ದುಪಡಿ ಮಾಯ: ಕ್ರಮದ ಭರವಸೆ
ಕೇರಳ ಸರಕಾರ 2015ರಲ್ಲಿ ವಿಧಾನಸಭೆಯಲ್ಲಿ ಮಂಡಿಸಿದ ಮಲಯಾಳ ಭಾಷಾ ಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾಕರ ಹಕ್ಕು ಸಂರಕ್ಷಣೆಯ ಬಗ್ಗೆ ಉಲ್ಲೇಖೀಸಲಾದ ಎರಡು ತಿದ್ದುಪಡಿಗಳು ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿಕೊಡುವ ಸಂದರ್ಭದಲ್ಲಿ ಬಿಟ್ಟುಹೋದ ಗಂಭೀರ ವಿಚಾರದ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಇದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಇ. ಚಂದ್ರಶೇಖರನ್ ತಿಳಿಸಿದ್ದಾರೆ.